ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಷ್ಯಡಂತ್ರ, ಮೇಟಿ ಸಿಡಿ‌ ಬಿಡುಗಡೆ ಮಾಡಿದ್ದ ರಾಜಶೇಖರ್ ಮುಲಾಲಿ ಹೇಳಿಕೆ

Published on

ಚಿಕ್ಕಬಳ್ಳಾಪುರ: ಈ ಹಿಂದೆ ಮಾಜಿ ಸಚಿವ ಮೇಟಿ ರಾಸಲೀಲೆ ಸಿಡಿ ಬಿಡುಗಡೆಗೊಳಿಸಿ ದೊಡ್ಡ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಷ್ಯಡಂತ್ರ ಎಂದು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣಾ ಪ್ರಚಾರ ಕೈಗೊಂಡ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹೊರ ತಂದಿರಿರುವುದರ ಹಿಂದೆ ಒಂದು ವ್ಯವಸ್ಥಿತ ತಂಡ ಇದೆ. ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ದೊಡ್ಡ ಷ್ಯಡಂತ್ರ ಇರುವುದು ಗೊತ್ತಾಗುತ್ತದೆ. ಈಗಾಗಲೇ ಮಹಾನಾಯಕನ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ.  ಪ್ರಕರಣದ ಸತ್ಯಾಸತ್ಯತೆಗಳು ಶೀಘ್ರದಲ್ಲಿಯೇ ಹೊರ ಬೀಳಲಿದೆ. ಹಾಗೆಯೇ ಪ್ರಕರಣದ ರೂವಾರಿ ಮಹಾನ್ ನಾಯಕ ಯಾರು ಎನ್ನುವುದು ಸಹ ಗೊತ್ತಾಗಲಿದೆ ಎಂದರು.

ಸಿಡಿ ಪ್ರಕರಣಗಳ ದುರುಪಯೋಗ ಹೆಚ್ಚಳವಾಗುತ್ತಿದೆ. ಆದರೆ, ಅಪ್ರಾಮಾಣಿಕತೆ, ಬ್ಲಾಕ್ ಮೇಲ್, ದುರುದ್ದೇಶ ಸೇರಿ ನಾನಾ ಕಾರಣಗಳಿಂದ ಸಿಡಿ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಹೊರ ಬಂದು ಮಧ್ಯದಲ್ಲಿಯೇ ನಿಂತುಹೋಗುತ್ತಿದೆ ಎಂದರು.

ನನ್ನ ಬಳಿ ಯಾವುದೇ ರಾಸಲೀಲೆಯ ಹೊಸ ಸಿಡಿ ಇಲ್ಲ. 13 ಸಿಡಿಗಳಿವೆ ಎಂಬುದು ಸುಳ್ಳು. ಈಗಾಗಲೇ ಹಲವು ಬಾರಿ ನನ್ನ ಹೇಳಿಕೆಯನ್ನು ತಿರುಚಿ ಪ್ರಚಾರ ಮಾಡಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದರು.

‌ಸಿಡಿಗಳಿವೆ ಎಂದು ಎಲ್ಲಿಯೂ ನಾನು ಹೇಳಿಕೆ ನೀಡಿಲ್ಲ. ಆದರೂ ನನ್ನ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಂಡ್ಯ ಮಹಿಳೆಯೊಬ್ಬರು ಸಿಡಿ ವಿಚಾರವಾಗಿ ದೂರು ದಾಖಲಿಸಿದ್ದಾರೆ. ಇದರ ಬಗ್ಗೆ ಎಫ್ ಐ ಆರ್ ಆಗಿಲ್ಲ. ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ, ವಿಚಾರಣೆಗೆ ಇನ್ನು ಹೋಗಿಲ್ಲ. ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಮಹಿಳೆಗೆ ಮಾನನಷ್ಟ ಮೊಕದ್ದಮೆ ಹೂಡುವ ನೋಟಿಸ್ ಕಳುಹಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net