More

    ಜಾನುವಾರು ಶೆಡ್‌ ನಿರ್ಮಾಣಕ್ಕೆ ನರೇಗಾ ಸಹಾಯಧನ

    ಚಿಕ್ಕಬಳ್ಳಾಪುರ: ಜಾನುವಾರುಗಳ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಲ್ಲಿರುವ ಸಹಾಯಧನದ ಕುರಿತು ರೈತರಲ್ಲಿ ಅರಿವು ಮೂಡಿಸುವಂತೆ ಪಶು ವೈದ್ಯಾಧಿಕಾರಿಗಳಿಗೆ ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್ ಸೂಚಿಸಿದರು.

    ತಾಲೂಕಿನ ನಂದಿ ಕ್ರಾಸ್ ಬಳಿಯಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ಗ್ರಾಮಗಳ 100 ಮನೆಗಳ ಪೈಕಿ ಕೇವಲ 40 ಮನೆಗಳಲ್ಲಿ ಮಾತ್ರ ಶೆಡ್‌ಗಳು ಕಂಡು ಬರುತ್ತಿದ್ದು, ಉಳಿದಂತೆ 60 ಮನೆಗಳಲ್ಲಿ ಇಲ್ಲ, ಆದ್ದರಿಂದ ಸೌಲಭ್ಯದ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ನೀಡಬೇಕೆಂದು ತಾಕೀತು ಮಾಡಿದರು.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ರೈತರಿಗೆ ಯೋಜನೆಯ ಮಾಹಿತಿ ತಲುಪುತ್ತಿಲ್ಲ. ಹಸು, ಮೇಕೆ, ಕುರಿ, ಹಂದಿ ಸೇರಿ ಇತರ ಜಾನುವಾರುಗಳ ಶೆಡ್ಡುಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಆದರೆ, ಇದನ್ನು ಕೆಲವರು ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿ ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ, ಗ್ರಾಪಂ ವ್ಯಾಪ್ತಿಯಲ್ಲಿನ ರೈತರು ಮತ್ತು ಜಾನುವಾರುಗಳ ಸಂಖ್ಯೆ ಸಂಗ್ರಹಿಸಬೇಕು. ಜತೆಗೆ ಎಷ್ಟು ಶೆಡ್‌ಗಳ ಅಗತ್ಯವಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದರು.

    ತಿಂಗಳಿಗೊಮ್ಮೆ ವರದಿ ಕಡ್ಡಾಯ: ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ರೈತರನ್ನು ಉತ್ತೇಜಿಸಬೇಕು. 45 ದಿನದೊಳಗೆ ಶೆಡ್ ವ್ಯವಸ್ಥೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಯೋಜನೆ ದುರುಪಯೋಗಕ್ಕೆ ಅವಕಾಶ ನೀಡಬಾರದು. ತಿಂಗಳಿಗೊಮ್ಮೆ ನಿರ್ಮಾಣದ ಅಂಕಿ ಅಂಶಗಳ ವರದಿ ಸಲ್ಲಿಸುವಂತೆ ಸಿಇಒ ಸೂಚಿಸಿದರು.

    ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ನಾಗರಾಜ್, ಸಹಾಯಕ ನಿರ್ದೇಶಕರಾದ ಡಾ. ಮಧುರನಾಥ ರೆಡ್ಡಿ, ಡಾ.ಬೈರಾರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts