More

    ಜಾತಿ ವರ್ಗೀಕರಣ ಒಳಮೀಸಲು ಅಗತ್ಯ

    ಕಲಬುರಗಿ: ದಲಿತರಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕೆ ಸವಲತ್ತುಗಳು ಸಿಗುತ್ತಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ವರ್ಗೀಕರಣ ಮಾಡಿ ಒಳಮೀಸಲು ಕಲ್ಪಿಸುವ ಅಗತ್ಯವಿದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

    ಟೌನ್ ಹಾನ್ ಎದುರಿನ ಡಾ.ಬಾಬು ಜಗಜೀವನರಾಂ ಪ್ರತಿಮೆ ಆವರಣ ಸುಂದರೀಕರಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ( ಕೆಕೆಆರ್​ಡಿಬಿ ) 45 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಸೋಮವಾರ ಸಂಜೆ ಭೂಮಿಪೂಜೆ ನೆರವೇರಿಸಿದ ನಂತರ ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿ ಉದ್ಘಾಟಿಸಿದ ಅವರು, ಇಷ್ಟು ವರ್ಷಗಳಾದರೂ ಸಮಾಜದವರು ಪ್ರಗತಿ ಹೊಂದದಿರುವುದಕ್ಕೆ ಯಾರು ಕಾರಣ ಎಂದು ಖಾರವಾಗಿ ಪ್ರಶ್ನಿಸಿದರು.

    ಮಾದಿಗರನ್ನು ಒಂದೊಂದು ರಾಜ್ಯದಲ್ಲಿ ಒಂದು ಜಾತಿಸೂಚಕ ಪದದಿಂದ ಗುರುತಿಸಲಾಗುತ್ತದೆ. 21 ರಾಜ್ಯಗಳಲ್ಲಿ ವರ್ಗೀಕರಣ ಬಗ್ಗೆ ಚರ್ಚೆಗಳಾಗಿದ್ದರೂ ಫಲಪ್ರದವಾಗಿಲ್ಲ. ಬಡ್ತಿ ಮೀಸಲಾತಿ ಹಾಗೆಯೇ ಉಳಿದಿದೆ. ಶೋಷಿತ ಸಮಾಜವೊಂದು ಇಷ್ಟೊಂದು ತುಳಿತಕ್ಕೊಳಗಾದರೂ ಇದುವರೆಗೆ ಒಬ್ಬರು ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಧ್ವನಿ ಎತ್ತಿಲ್ಲ ಎಂದು ನೋವಿನಿಂದ ನುಡಿದರು.

    ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದಾಗ ಹಲವರು ಆಕ್ಷೇಪಿಸಿದರು. ಬಾಬೂಜಿ ಪ್ರಧಾನಿ ಹುದ್ದೆಗೆ ಏರುವಾಗ ವಿರೋಧಿಸಿ ಉಪ ಪ್ರಧಾನಿಯಾಗಿಸಿದರು. ಹೀಗೆ ವ್ಯವಸ್ಥಿತವಾಗಿ ದಲಿತರನ್ನು ದಮನ ಮಾಡಿಕೊಂಡೇ ಬರಲಾಗಿದೆ ಎಂದು ಆವೇಶಭರಿತರಾಗಿ ಹೇಳಿದರು.

    ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಸಫಾಯಿ ಕರ್ಮಚಾರಿ ಆಯೋಗ ಸದಸ್ಯೆ ಗೀತಾ ರಾಜು ವಾಡೇಕರ್, ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ದಶರಥ, ಗೌರವಾಧ್ಯಕ್ಷ ಮಹೇಶ ವಾಡೇಕರ್, ಮಂಜುನಾಥ ನಾಲವಾರಕರ್, ಪ್ರಚಾರ ಸಮಿತಿ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ, ಪ್ರಲ್ಹಾದ ಹಡಗಲಿಕರ್, ಪ್ರಮುಖರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಚಂದ್ರಿಕಾ ಪರಮೇಶ್ವರ, ಶಾಮ ನಾಟೀಕಾರ, ರಾಜು ವಾಡೇಕರ್, ಪರಮೇಶ್ವರ ಖಾನಾಪುರ, ನಾಗರಾಜ, ಅಂಬಾರಾಯ ಬೆಳಕೋಟಾ, ಗೋಪಾಲ ನಾಟೀಕಾರ, ಭೀಮಣ್ಣ ಬಿಲ್ಲವ್, ವಿಜಯಕುಮಾರ ಆಡಕಿ, ರಾಕೇಶ ವಾಡೇಕರ್, ರವಿಚಂದ್ರ ಕಾಂತಿಕರ್, ಸುರೇಶ ಬಡಿಗೇರ, ರಾಜಶೇಖರ ಮಾಂಗ ಇತರರಿದ್ದರು.

    ಕಲಬುರಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಾಬು ಜಗಜೀವನರಾಂ ಭವನಕ್ಕೆ ಈಗಾಗಲೇ ಸರ್ಕಾರ ಅನುದಾನ ನೀಡಿದೆ. ತುರ್ತು ಅಗತ್ಯವಿರುವ 8 ಕೋಟಿ ರೂ. ಸೇರಿ ಕೇಂದ್ರ ಮತ್ತು ರಾಜ್ಯದ ನೆರವು ಪಡೆದು ಪೂರ್ಣಗೊಳಿಸಲಾಗುವುದು. ಬಾಬೂಜಿ ಪ್ರತಿಮೆ ಆವರಣ ಸುಂದರೀಕರಣಕ್ಕೆ 45 ಲಕ್ಷ ರೂ. ನೀಡಲಾಗಿದೆ.
    | ದತ್ತಾತ್ರೇಯ ಪಾಟೀಲ್ ರೇವೂರ
    ಕೆಕೆಆರ್​ಡಿಬಿ ಅಧ್ಯಕ್ಷ

    ನಾರಾಯಣಸ್ವಾಮಿ ಅವರನ್ನು ಸಚಿವರಾಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಡೀ ಶೋಷಿತ ಸಮಾಜಕ್ಕೆ ನ್ಯಾಯ ಕಲ್ಪಿಸಿದ್ದಾರೆ. ಸಮಾಜದ ಕೆಲಸ-ಕಾರ್ಯಗಳು ಮುಂದಿನ ದಿನಗಳಲ್ಲಿ ಸಾಕಷ್ಟು ಆಗಲಿವೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರೆಲ್ಲರೂ ಶ್ರಮ ವಹಿಸಿ ಸಮಾಜದ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ.
    | ಬಸವರಾಜ ಮತ್ತಿಮಡು
    ಗ್ರಾಮೀಣ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts