More

    ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಡ – ಜನಜಾಗೃತಿ ಸಮಾವೇಶಕ್ಕೆ ಚಿಂತನೆ -ರಾಜು ಮೌರ್ಯ ಅನಿಸಿಕೆ

    ದಾವಣಗೆರೆ: ಬರುವ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿ ಸಮೀಕ್ಷಾ ವರದಿ ಅಂಗೀಕರಿಸಿ ಸಾರ್ವಜನಿಕ ಬಿಡುಗಡೆ ಮಾಡಬೇಕು ಎಂದು ಅಹಿಂದ ಚೇತನ ಸಂಚಾಲಕ ರಾಜು ಮೌರ್ಯ ಆಗ್ರಹಿಸಿದರು.
    ಅಹಿಂದ ಚೇತನದಿಂದ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಜಾತಿ ಗಣತಿ ವರದಿ ಬಿಡುಗಡೆ ಹಾಗೂ ಅಹಿಂದ ಶಕ್ತಿ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದರು.
    ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷವಾದರೂ ಅಹಿಂದ ವರ್ಗಗಳು ದುಸ್ಥಿತಿಯಲ್ಲಿದ್ದು, ಸಾಮಾಜಿಕ ಹಕ್ಕು ಮತ್ತು ನ್ಯಾಯಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿವೆ ಎಂದು ಹೇಳಿದರು.
    ರಾಜ್ಯದಲ್ಲಿ 2015ರಲ್ಲಿ ಕಾಂತರಾಜ್ ಆಯೋಗ ಕೈಗೊಂಡಿದ್ದ ಜಾತಿ ಗಣತಿ ಸಮೀಕ್ಷಾ ವರದಿ ಬಿಡುಗಡೆಗೊಳಿಸಿದರೆ ಅಹಿಂದ ವರ್ಗಗಳು ಶೈಕ್ಷಣಿಕ , ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಪಡೆಯಲು ಸಾಧ್ಯವಾಗಲಿದೆ. ಈ ವಿಚಾರದಲ್ಲಿ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿದು ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.
    ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಮತ್ತು ಸಂಪತ್ತು ಜನಸಂಖ್ಯೆವಾರು ಹಂಚಿಕೆಯಾಗಬೇಕು. ಇದು ಆಗಿಲ್ಲವೆಂದರೆ ಪ್ರಜಾಪ್ರಭುತ್ವ ಯಶಸ್ವಿಯಾಗಿಲ್ಲವೆಂದು ಅರ್ಥ. ರಾಜ್ಯದಲ್ಲಿ ಈವರೆಗೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮೇಲ್ವರ್ಗದವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಹೇಳಿದರು.
    ಅಹಿಂದ ವರ್ಗಗಳು ಸಾಮಾಜಿಕ ಹಾಗೂ ಸಾಂಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾತ್ಯತೀತವಾಗಿ ಒಂದಾಗಬೇಕು ಹಾಗೂ ಜಾತಿಗಣತಿ ಸಮೀಕ್ಷಾ ವರದಿ ಬಿಡುಗಡೆಗೆ ಗಟ್ಟಿ ಹೋರಾಟ ಕೈಗೊಳ್ಳಬೇಕು ಎಂದರು.
    ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಮಾತನಾಡಿ, ಜಾತಿಗಣತಿ ವರದಿ ಬಿಡುಗಡೆ ಆದರೆ ತುಳಿತಕ್ಕೊಳಗಾದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಅಹಿಂದ ವರ್ಗದ ಯಾರಿಗೇ ಟಿಕೆಟ್ ನೀಡಿದರೂ ಬೆಂಬಲಿಸಬೇಕು ಎಂದು ತಿಳಿಸಿದರು.
    ಛಲವಾದಿ ಸಮಾಜದ ನಿವೃತ್ತ ಪೊಲೀಸ್ ಅಧಿಕಾರಿ ರುದ್ರಮುನಿ ಮಾತನಾಡಿ, ಸರ್ಕಾರ ರಾಜಕೀಯ ಹಿತಾಸಕ್ತಿ ಹೊಂದಿದರೆ ವರದಿ ಬಿಡುಗಡೆ ಸಾಧ್ಯವಿಲ್ಲ. ನಗರದಲ್ಲಿ ಬೃಹತ್ ಸಮಾವೇಶ ನಡೆಸಿದರೆ ಸರ್ಕಾರದ ಗಮನ ಸೆಳೆಯಬಹುದು ಎಂದರು.
    ವಕೀಲ ಅನಿಸ್ ಪಾಷಾ ಮಾತನಾಡಿ, ಸಮಾಜದಲ್ಲಿ ಯಾರಿಗೂ ನೋವಾಗದಂತೆ ಸಂವಿಧಾನಾತ್ಮಕವಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
    ಕೊರಚ-ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್. ರಾಜೀವ್ ಪಾಟೀಲ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ, ಅಹಿಂದ ಮುಖಂಡರಾದ ದಾಸರ ತಿಪ್ಪಣ್ಣ, ಸಿ. ವೀರಣ್ಣ, ಡಾ. ದಾದಾಪೀರ್ ನವಿಲೇಹಾಳ್, ನಾಗೇಂದ್ರಪ್ಪ, ಎಚ್.ಜಿ. ಉಮೇಶ್, ಸಿ.ಡಿ. ಮಹೇಂದ್ರಪ್ಪ, ಕರಿಬಸಯ್ಯ ಮಠದ್, ಮಂಜಾನಾಯ್ಕ, ವೆಂಕಟಾಚಲಪತಿ, ತಿಪ್ಪೇಸ್ವಾಮಿ, ರಾಘು ದೊಡ್ಮನಿ, ದೀಟೂರು ಚಂದ್ರು, ಐರಣಿ ಚಂದ್ರು ಇತರರು ಇದ್ದರು. ಎಸ್.ಎಂ. ಸಿದ್ದಲಿಂಗಪ್ಪ ನಿರೂಪಿಸಿದರು.

    ದಾವಣಗೆರೆಯಲ್ಲಿ ಡಿಸೆಂಬರ್ 20 ರೊಳಗೆ ಬೃಹತ್ ಅಹಿಂದ ಜನಜಾಗೃತಿ ಸಮಾವೇಶ ನಡೆಸಲು ಯೋಜಿಸಲಾಗಿದೆ. ಆ ಮೂಲಕ ಅಹಿಂದ ಶಕ್ತಿಯನ್ನು ಪ್ರದರ್ಶಿಸುವ ಜತೆಗೆ ಸರ್ಕಾರಕ್ಕೆ ಪ್ರಬಲ ಸಂದೇಶ ರವಾನೆ ಮಾಡಬೇಕಿದೆ.
    ಡಾ.ಎ.ಬಿ. ರಾಮಚಂದ್ರಪ್ಪ, ನಿವೃತ್ತ ಪ್ರಾಧ್ಯಾಪಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts