More

    ಜವಳಿ ಕ್ಷೇತ್ರಕ್ಕೆ ಶೀಘ್ರವೇ ಹೊಸ ಆಯಾಮ

    ಬೆಳಗಾವಿ: ರಾಜ್ಯದ ನೇಕಾರರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರಕಟ್ಟೆ, ಅವಲಂಬಿತ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೈಮಗ್ಗ ಮತ್ತು ಜವಳಿ ಕ್ಷೇತ್ರಕ್ಕೆ ಹೊಸ ಆಯಾವ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

    ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಹಾಗೂ ನೇಕಾರರ ಕುಂದು-ಕೊರತೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಕೈಮಗ್ಗ ಹಾಗೂ ಜವಳಿ ಕ್ಷೇತ್ರವನ್ನು ಉಳಿಸಿ, ಬೆಳಸುವುದು ಅವಶ್ಯ. ಆ ನಿಟ್ಟಿನಲ್ಲಿ ಜವಳಿ ಕ್ಷೇತ್ರ ಪುನಶ್ಚೇತನಗೊಳಿಸಿ 10 ಲಕ್ಷ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

    ಅತಿವೃಷ್ಟಿ, ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರ ಕುಟುಂಬಗಳಿಗೆ ಸರ್ಕಾರವು ಎಲ್ಲ ರೀತಿಯ ಆರ್ಥಿಕ ಸೌಲಭ್ಯ ಕಲ್ಪಿಸಿಕೊಂಡು ಬರುತ್ತಿದೆ. ಲಕ್ಷಾಂತರ ನೇಕಾರರ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ಮೂರು ವರ್ಷದ ಸಾಲ ಮಾನ್ನಾ ಮಾಡಲಾಗಿದೆ. ಅದಕ್ಕಾಗಿ ಸರ್ಕಾರವು 112 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನಿತರ ಆರ್ಥಿಕ ಸಹಾಯ, ಸಬ್ಸಿಡಿಗಾಗಿ ವಿವಿಧ ಯೋಜನೆಗಳ ಮೂಲಕ ಸೌಲಭ್ಯ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಪ್ರಸ್ತುತ 27,693 ಕೈಮಗ್ಗ, 51,213 ವಿದ್ಯುತ್ ಮಗ್ಗ ಹಾಗೂ ಸಿದ್ಧ ಉಡುಪು ಘಟಕಗಳು 50 ಸೇರಿ ನೂಲಿನ ಗಿರಣಿಗಳು, ಜವಳಿ ಪ್ರೊಸೆಸಿಂಗ್ ಘಟಕ, ಸೈಜಿಂಗ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನೇಕಾರ ಸಮ್ಮಾನ್ ಯೋಜನೆಯಡಿ ಪ್ರತಿ ನೇಕಾರರಿಗೆ 2,000 ರೂ.ನಂತೆ 26,748 ನೇಕಾರರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದಿರುವವರು ಅರ್ಜಿ ಸಲ್ಲಿಸಿದರೆ ಅವರಿಗೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

    ವಿದ್ಯುತ್ ಸಬ್ಸಿಡಿ ಸೌಲಭ್ಯ ಹೆಚ್ಚಿಸಿ: ನೇಕಾರರ ಕುಂದು-ಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಮುನೇನಕೊಪ್ಪ ಅವರಿಗೆ ನೇಕಾರಿಕೆಯಲ್ಲಿ ಎದುರಾಗಿರುವ ಸಮಸ್ಯೆ ನಿವಾರಿಸುವಂತೆ ನೇಕಾರರು ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕೈಗಾರಿಕೆ ನೇಕಾರಿಕೆಯು ಪ್ರಾಚೀನ ಕಾಲದಿಂದಲೂ ನಾಡಿನ ಸೇವಾ ವೃತ್ತಿಯಾಗಿ ಬೆಳೆದು ಬಂದಿದೆ. ಆದರೆ, ಕೈಮಗ್ಗ ನೇಕಾರರು ಖರೀದಿಸುವ ಕಚ್ಚಾ ಸಾಮಗ್ರಿ ಮತ್ತು ಉತ್ಪಾದಿಸಿದ ಉತ್ಪನ್ನಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಶೇ.5 ಜಿಎಸ್‌ಟಿ ವಿಧಿಸುತ್ತಿದೆ. ಅಲ್ಲದೆ, ವಿದ್ಯುತ್ ಯೂನಿಟ್ ದರ 8.12 ರೂ. ಇದೆ.

    ಸಬ್ಸಿಡಿ ಸೌಲಭ್ಯ ಶೇ.25 ರಷ್ಟಿದೆ ಇದರಿಂದಾಗಿ ನೇಕಾರರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ, ಸರ್ಕಾರವು ನೇಕಾರರ ಮಗ್ಗಗಳಿಗೆ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಹೆಚ್ಚಿಸಬೇಕು. ಅಲ್ಲದೆ, ಯುನಿಟ್ ದರವನ್ನು 4 ರೂ.ಗೆ ಇಳಿಕೆ ಮಾಡಬೇಕು. ಅಲ್ಲದೆ, ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಗೆ ಪರಿಸರ ಮಾಲಿನ್ಯದಿಂದ ಪರವಾನಗಿ ಕಡ್ಡಾಯಗೊಳಿಸಿದ್ದಾರೆ. ಇದು ಬಡ ನೇಕಾರರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸರ್ಕಾರವು ಕೂಡಲೇ ಹೊಸ ನಿಯಮ ಕೈಬಿಡಬೇಕು ಎಂದು ಮನವಿ ಮಾಡಿದರು.
    ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನೀಲಕಂಠ ಮಾಸ್ತಮರಡಿ, ಶಾಸಕ ಮಹಾದೇವಪ್ಪ ಯಾದವಾಡ, ಸಂಸದೆ ಮಂಗಲ ಅಂಗಡಿ, ಡಾ. ಎಸ್.ಬಿ. ಬೊಮ್ಮನಹಳ್ಳಿ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts