More

    ಜಲ ಪಾಲಾಗದಿರಲಿ ಸಾರ್ವಜನಿಕರ ಹಣ

    ಹುಬ್ಬಳ್ಳಿ: ಕುಡಿಯುವ ನೀರಿಗಾಗಿಯೇ ಶತಮಾನದ ಹಿಂದೆ ನಿರ್ವಿುಸಿದ ಉಣಕಲ್ಲ ಕೆರೆ ಈಗ ಕೊಳಚೆ ತುಂಬಿಕೊಂಡಿದೆ. ಪರಿಸರ ಪ್ರಿಯರು ಇದನ್ನು ನೋಡಿ ಮಮ್ಮಲ ಮರಗುತ್ತಿದ್ದಾರೆ. ಇದು ನಗರೀಕರಣದ ಕೊಡುಗೆ. ಇದುವರೆಗಿನ ಅಸಮರ್ಪಕ ಯೋಜನೆಗಳಿಂದಾಗಿ ಕೆರೆ ಇನ್ನೇನು ‘ಶುದ್ಧ’ವಾಗದು ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ.

    ಅಣೆಕಟ್ಟುಗಳನ್ನು ಕಟ್ಟುವಲ್ಲಿ ಪರಿಣತರಾಗಿದ್ದ ಖ್ಯಾತ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ನವರು 1893ರಲ್ಲಿ ಉಣಕಲ್ಲ ಕೆರೆ ನಿರ್ಮಾಣ ಮಾಡಿದರು. ಚಿಕ್ಕ ಹೊಂಡದಂತಿದ್ದ ಈ ಪ್ರದೇಶದಲ್ಲಿ ಜಲಾಶಯ ನಿರ್ವಿುಸಿದರೆ ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಒದಗಿಸಬಹುದು ಎಂದು ವಿಶ್ವೇಶ್ವರಯ್ಯನವರು ಅಂದೇ ಆಲೋಚನೆ ಮಾಡಿದ್ದರು. ಮಲಪ್ರಭಾ ಹಾಗೂ ನೀರಸಾಗರ ಜಲಾಶಯದ ನೀರು ಬರುವತನಕ 270 ಎಕರೆ ವಿಸ್ತಾರದ ಉಣಕಲ್ಲ ಜಲಾಶಯದ ನೀರೇ ಹುಬ್ಬಳ್ಳಿಗೆ ಸರಬರಾಜು ಆಗುತ್ತಿತ್ತು.

    ಇಂತಹ ಅದ್ಬುತ ಇತಿಹಾಸದ ಉಣಕಲ್ಲ ಕೆರೆ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಕಂಪನಿ 51 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆ ರೂಪಿಸಿದೆ. ಈ ಹಿಂದೆಯೂ ಕೆರೆಗೆ ಹತ್ತಾರು ಕೋಟಿ ರೂ. ಸುರಿಯಲಾಗಿದೆ. ಈ ಬಾರಿಯಾದರೂ ಕೆರೆ ಪರಿಸರ ಉಳಿಯಬೇಕು, ಅಭಿವೃದ್ಧಿ ಕಾರ್ಯ ಹೆಚ್ಚು ಕಾಲ ಉಪಯೋಗ ಆಗಬೇಕು. ಈ ದಿಸೆಯಲ್ಲಿ ಏನು ಮಾಡಬೇಕು, ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆ ನಗರದ ಹಿರಿಯರು, ತಜ್ಞರು ತಮ್ಮ ಅಭಿಪ್ರಾಯಗಳನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ. ತಜ್ಞರು ನೀಡುವ ಯೋಗ್ಯ ಸಲಹೆಗಳನ್ನು ಸ್ಮಾರ್ಟ್ ಸಿಟಿಯವರು ಅಳವಡಿಸಿಕೊಳ್ಳಲಿ ಎಂಬುದು ಪ್ರಜ್ಞಾವಂತರ ಕಳಕಳಿಯಾಗಿದೆ.

    ಹಣ ಪೋಲು ಮಾಡೋದು ಬೇಡ: ಉಣಕಲ್ಲ ಕೆರೆಯನ್ನು ಕೊಳವೆ ಬಾವಿಗಳ ರೀಚಾರ್ಜರ್ ಆಗಿ ಹಾಗೂ ಈ ಭಾಗದ ಅತ್ಯುತ್ತಮ ಪಿಕ್​ನಿಕ್ ಸ್ಪಾಟ್ ಆಗಿ ಎರಡು ದೃಷ್ಟಿಕೋನದಿಂದ ಸುಧಾರಣೆ ಮಾಡಬೇಕು ಎನ್ನುತ್ತಾರೆ ಪಾಲಿಕೆ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ. ಅಂದು ಕೆರೆ ನಿರ್ಮಾಣ ಆದಾಗ ಜಲಾನಯನ ಪ್ರದೇಶದಲ್ಲಿ ಬಡಾವಣೆಗಳು ಇರಲಿಲ್ಲ. ಹಾಗಾಗಿ ಕೆರೆ ನೀರು ಮಲೀನವಾಗುತ್ತಿರಲಿಲ್ಲ. ಈಗ ಎಲ್ಲ ಕಡೆ ಬಡಾವಣೆ ತಲೆ ಎತ್ತಿರುವುದರಿಂದ ತ್ಯಾಜ್ಯ ಕೆರೆ ಸೇರುವುದನ್ನು ಸಂಪೂರ್ಣ ನಿಲ್ಲಿಸುತ್ತೇವೆ ಎನ್ನುವುದಕ್ಕೆ ಅರ್ಥವಿಲ್ಲ. ಹೆಚ್ಚೆಂದರೆ ಪೈಪ್ ಮೂಲಕ ಒಳಚರಂಡಿ ನೀರು ಬೈಪಾಸ್ (ಪರ್ಯಾಯ ಮಾರ್ಗ) ಮಾಡಿ ಕಳಿಸಬಹುದು. ಆದರೆ, ಬಡಾವಣೆ, ಹೋಟೆಲ್, ಕೈಗಾರಿಕೆಗಳಿರುವ ಪ್ರದೇಶದ ಗಟಾರು, ಭೂಮೇಲ್ಮೈನಿಂದ ಹರಿದು ಬರುವ ತ್ಯಾಜ್ಯ ಹೇಗೆ ತಡೆಯುವುದು? ಒಂದು ವೇಳೆ ಎಲ್ಲವನ್ನೂ ಹೊರಗೆ ಕಳಿಸಿದರೆ ಕೆರೆಗೆ ನೀರು ಬರುವುದಾದರೂ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ. ಹಾಗಾಗಿ ಕೆರೆ ಸ್ವಚ್ಛತೆ ಹೆಸರಲ್ಲಿ ಹಣ ಪೋಲು ಮಾಡುವ ಬದಲು ಪಿಕ್​ನಿಕ್ ಸ್ಪಾಟ್ ಆಗಿ ಅಭಿವೃದ್ಧಿಪಡಿಸಬೇಕು. ಸರಿಯಾದ ನಿರ್ವಹಣೆ ಮಾಡಬೇಕು. ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆ ಅಲ್ಲಿಯೇ ಉತ್ಪತ್ತಿಯಾಗುವಂತೆ ಮಾಡಬೇಕು. ಮಹಾನಗರ ಪಾಲಿಕೆ ನಿಗಾ ವಹಿಸಿದರೆ ಸಾಕು ಎಂಬುದು ಅವರ ಸಲಹೆ.

    ಕಳೆಯಿಂದ ಹಲವು ಪ್ರಯೋಜನ: ಕೆರೆಗಳನ್ನು ಕೂಡ ಆದಾಯ ಮೂಲಗಳಾಗಿ ಪರಿವರ್ತಿಸಬಹುದು. ಈ ಜಗತ್ತಿನ ಹುಟ್ಟುವ ಯಾವುದೇ ಜೀವಿ ವೇಸ್ಟ್ ಅಲ್ಲ. ಉಣಕಲ್ಲ ಕೆರೆಯ ಜಲಕಳೆಯೂ ಸಾಕಷ್ಟು ಉಪಕಾರಿಯಾಗಿದೆ. ಇದರಿಂದ ಬಯೋಡೀಸೆಲ್ ಉತ್ಪಾದಿಸಬಹದು. ಗರಿಷ್ಠ ಫೈಬರ್ ಇರುವುದರಿಂದ ಪಾದರಕ್ಷೆ, ಕಾಗದ, ಕರಕುಶಲ ವಸ್ತು ತಯಾರಿಕೆಗೆ ಬಳಸಬಹುದಾಗಿದೆ ಎನ್ನುತ್ತಾರೆ ಕವಿವಿ ಪ್ರಾಣಿಶಾಸ್ತ್ರ ವಿಭಾಗದ ಟೀಚಿಂಗ್ ಅಸಿಸ್ಟಂಟ್ ಡಾ. ಧೀರಜ ವೀರನಗೌಡರ. ತ್ಯಾಜ್ಯ ಸಂಸ್ಕರಿಸಿ ಕೆರೆಗೆ ಬಿಡಬೇಕು. ಬಿಆರ್​ಟಿಎಸ್ ಮಾರ್ಗದಗುಂಟ ಗಟಾರು ಮೂಲಕ ಬರುವ ನೀರು ಕೆರೆಗೆ ಹರಿಸಿ ಜಲಮೂಲ ಕಾಪಾಡಿಕೊಳ್ಳಬಹುದು. ಖನಿಜಾಂಶ ಹೀರಿಕೊಳ್ಳುವ ಶಕ್ತಿ ಇರುವುದರಿಂದ ಕಳೆ ಸಂಸ್ಕರಣೆ ಮಾಡಿ ಜಾನುವಾರು ಆಹಾರ ತಯಾರಿಸಬಹುದು. ಹಲವು ಕೈಗಾರಿಕೆಗಳಿಗೆ ಕಳೆ ಕಚ್ಚಾ ಸಾಮಗ್ರಿಯಾಗುತ್ತದೆ. ಕೆರೆಯ ಒಂದು ಭಾಗದಲ್ಲಿ ಮಾತ್ರ ಇದನ್ನು ಬೆಳೆಯಬಹುದು. ಬೇರೆ ಎಲ್ಲಿಯಾದರೂ ಜಲಕಳೆ ಬೆಳೆದರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಉಣಕಲ್ಲ ಕೆರೆ ಮಾದರಿಯಾಗುವಂತೆ ಮಾಡಬೇಕು.

    ಶಾಶ್ವತ ಪರಿಹಾರ ಸಾಧ್ಯವಿದೆ; ಅವಳಿನಗರದಲ್ಲಿ ಸರಿಯಾದ ನಗರೀಕರಣ ಅನುಷ್ಠಾನವಾಗುತ್ತಿಲ್ಲ. ಹಾಗಾಗಿಯೇ ಜಲಮೂಲಗಳು ಹಾಳಾಗುತ್ತಿವೆ. ಸಮರ್ಪಕ ಯೋಜನೆ ರೂಪಿಸಿದರೆ ಕೆರೆ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಎನ್ನುತ್ತಾರೆ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಸುರೇಶ ಕಿರೇಸೂರ. ಕೆರೆ ಸೇರುವ ಒಳಚರಂಡಿ ಕೊಳಚೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೊಳಚೆ ಉತ್ಪತ್ತಿಯ ಸ್ಥಳ ಪತ್ತೆ ಮಾಡಿ ಅಲ್ಲಿಂದ ದೊಡ್ಡ ಪೈಪ್​ಲೈನ್ ಅಳವಡಿಸಿ ನೇರವಾಗಿ ಸಂಸ್ಕರಣ ಘಟಕಕ್ಕೆ ಕಳುಹಿಸಬೇಕು. ಕೊಳಚೆ ಮುಕ್ತವಾಗಿ ಹರಿಯದಂತೆ ನಿಗಾ ವಹಿಸಬೇಕು. ಆಗ ಮಳೆ ನೀರು ಮಾತ್ರ ಕೆರೆ ಸೇರುತ್ತದೆ. ಬರೀ ಖರ್ಚು ಹಾಕುವ ಕೆಲಸಗಳೇ ನಡೆದರೆ ಜನರ ತೆರಿಗೆ ಹಣ ಪೋಲಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts