More

    ಜರ್ಮನ್ ಪ್ರವಾಸಿಗರಿಗೆ ವಿಶೇಷ ವಿಮಾನ ವ್ಯವಸ್ಥೆ

    ಗೋಕರ್ಣ: ಕರೊನಾ ವಿಪತ್ತಿನಿಂದ ತಮ್ಮ ದೇಶಕ್ಕೆ ಮರಳಲಾಗದೆ ಪರಿತಪಿಸುತ್ತಿದ್ದ ಇಲ್ಲಿರುವ ಜರ್ಮನ್ ಪ್ರವಾಸಿಗರ ಮುಖದಲ್ಲಿ ಗುರುವಾರ ಮಂದಹಾಸ ಮೂಡಿದೆ. ಜರ್ಮನ್ ಸರ್ಕಾರ ಇವರನ್ನು ತಿರುಗಿ ಕರೆಸಿಕೊಳ್ಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿರುವುದು ಇದಕ್ಕೆ ಕಾರಣ. ಮಾ.27 ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನಿಂದ ಇವರಿಗಾಗಿಯೇ ಜರ್ಮನ್ ಸರ್ಕಾರ ವಿಶೇಷ ವಿಮಾನ ಕಳುಹಿಸಲಿದೆ.

    ಎಲ್ಲರೂ ವಾಪಸ್: ಪೊಲೀಸ್ ದಾಖಲೆ ಪ್ರಕಾರ ಸದ್ಯ ಗೋಕರ್ಣದಲ್ಲಿ 351 ವಿದೇಶಿ ಪ್ರವಾಸಿಗರಿದ್ದಾರೆ. ಈ ಪೈಕಿ 33 ಪ್ರವಾಸಿಗರು ಜರ್ಮನ್​ನವರು. ಇವರಲ್ಲೂ ಕೆಲವರು ಈಗಾಗಲೇ ತಿರುಗಿ ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇವರೆಲ್ಲ ಕಳೆದ ಅಕ್ಟೋಬರ್ ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರ ವೀಸಾ ಅವಧಿ ಮುಗಿದಿದೆ. ಕರೊನಾ ಆತಂಕದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಜರ್ಮನ್​ಗೆ ಹೇಗೆ ಹೋಗುವುದು ಎಂಬ ಚಿಂತೆ ಇವರನ್ನು ಕಾಡುತ್ತಿತ್ತು.

    ಈಗ ಜರ್ಮನ್ ಸರ್ಕಾರವೇ ವಿಮಾನದ ಏರ್ಪಾಟು ಮಾಡಿರುವುದರಿಂದ ಇವರ ಎಲ್ಲ ಆತಂಕ ಈಗ ದೂರಾಗಿದೆ. ಇಲ್ಲಿರುವ ಎಲ್ಲ ಜರ್ಮನ್ ಪ್ರವಾಸಿಗಳಿಗೆ ಅವರ ರಾಯಭಾರ ಕಚೇರಿ ಶುಕ್ರವಾರ ಬೆಳಗಿನ ಜಾವ 3 ಗಂಟೆಯೊಳಗೆ ಬೆಂಗಳೂರಿಗೆ ಬಂದು ಸೇರುವಂತೆ ವಾಟ್ಸ್ ಆಪ್ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಇವರೆಲ್ಲ ಇಲ್ಲಿನ ಪೊಲೀಸ್ ಠಾಣೆ ಬಳಿಯಿಂದ ವಿಶೇಷ ಬಸ್ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದರು.

    ವಿದೇಶಿಯರ ಸಹಾಯಕ್ಕೆ ಬಂದ ಜಿಪಂ ಅಧಿಕಾರಿ: ಜರ್ಮನ್ ವಿಶೇಷ ವಿಮಾನ ಏರ್ಪಾಟು ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸಹಾಯ ಒದಗಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್ ಗುರುವಾರ ಸಂಜೆ ಗೋಕರ್ಣಕ್ಕೆ ಬಂದು ಜರ್ಮನ್ ಪ್ರವಾಸಿಗರ ಜೊತೆ ವಿವಿಧ ವ್ಯವಸ್ಥೆ ಕುರಿತು ರ್ಚಚಿಸಿದರು. ಈ ವೇಳೆ ಮಾತನಾಡಿದ ಅವರು ಜರ್ಮನ್ ದೇಶದ ರಾಯಭಾರಿ ಕಚೇರಿ ತನ್ನ ದೇಶದ ಪ್ರಜೆಗಳು ತಾಯ್ನಾಡಿಗೆ ಮರಳಲು ಬೆಂಗಳೂರಿನಿಂದ ಶುಕ್ರವಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ. ರಾಯಭಾರಿ ಕಚೇರಿಯ ಮನವಿ ಮೇರೆಗೆ ಜಿಲ್ಲಾಡಳಿತ ವತಿಯಿಂದ ಜರ್ಮನ್ನರಿಗೆ ಅಗತ್ಯ ಏರ್ಪಾಟು ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಫ್ರೆಂಚ್ ರಾಯಭಾರ ಕಚೇರಿ ಮಾ.29ರಂದು ಇಲ್ಲಿರುವ ತನ್ನ ದೇಶದ ಪ್ರಜೆಗಳಿಗಾಗಿ ಗೋವಾ ಮೂಲಕ ವಿಶೇಷ ವಿಮಾನ ನೀಡಲಿದೆ. ಆ ಬಗ್ಗೆ ಕೂಡ ಪ್ರಯತ್ನಿಸಲಾಗುತ್ತಿದ್ದು ಸದ್ಯ ಓರ್ವ ಫ್ರೆಂಚ್ ಪ್ರವಾಸಿ ಮಾತ್ರ ನಮ್ಮನ್ನು ಸಂರ್ಪಸಿದ್ದಾನೆ. ಈ ಪೈಕಿ ವೀಸಾ ಅವಧಿ ಬಾಕಿ ಇರುವ ವಿದೇಶಿಯರು ಯಾರಾದರೂ ಗೋಕರ್ಣದಲ್ಲಿಯೇ ಇರಲು ಬಯಸಿದರೆ ಜಿಲ್ಲಾಡಳಿತ ಅವರಿಗೆ ಅವಶ್ಯ ಸಹಾಯ ನೀಡಲಿದೆ ಎಂದು ತಿಳಿಸಿದರು.

    ಕೆಲವರ ನಿರಾಕರಣೆ: ಗೋಕರ್ಣದಲ್ಲಿರುವ ಕೆಲವು ವಿದೇಶಿಯರು ಇಲ್ಲಿಂದ ತಾಯ್ನಾಡಿಗೆ ಮರಳಲು ನಿರಾಕರಿಸುತ್ತಿದ್ದಾರೆ. ಗೋಕರ್ಣವೇ ಸೇಫ್ ಎಂಬ ಅಭಿಪ್ರಾಯ ಅವರದಾಗಿದೆ. ಈ ಹಿನ್ನೆಲೆಯಲ್ಲಿ 8 ರಿಂದ 11 ಜರ್ಮನ್ನರು ಮಾತ್ರ ಗುರುವಾರ ರಾತ್ರಿ ವಿಶೇಷ ವಾಹನದ ಮೂಲಕ ಬೆಂಗಳೂರಿಗೆ ಹೊರಡುವ ಸಾಧ್ಯತೆಯಿದೆ.

    ತೀರಾ ಅಸಹಾಯಕ ಸ್ಥಿತಿಯಲ್ಲಿದ್ದ ನಮಗೆ ವಿಶೇಷ ವಿಮಾನ ಬರುತ್ತಿರುವುದು ಸಂತಸ ತಂದಿದೆ. ನಮ್ಮ ಪೈಕಿ ಹೆಚ್ಚಿನವರು ಪ್ರತಿ ವರ್ಷ ಇಲ್ಲಿಗೆ ಬರುತ್ತಿದ್ದೇವೆ. ಈವರೆಗೆ ಗೋಕರ್ಣದಲ್ಲಿರಲು ಅವಕಾಶ ನೀಡಿದ ಎಲ್ಲರನ್ನೂ ನಾವು ಅಭಿನಂದಿಸುತ್ತಿದ್ದೇವೆ. | ವೂಲ್ಪ್​ಗ್ಯಾಂಗ್ ರಿಚರ್ಡ್ ಪೌಲ್ ಜರ್ಮನ್ ಪ್ರವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts