More

    ಜಯಂತಿ ಸರಳ ಆಚರಣೆಗೆ ಸಹಕರಿಸಿ

    ಲಕ್ಷ್ಮೇಶ್ವರ: ಏ. 5ರಂದು ಡಾ. ಬಾಬು ಜಗಜೀವನರಾಂ ಅವರ 114 ಹಾಗೂ ಏ. 14ರಂದು ಡಾ. ಬಿ.ಆರ್. ಅಂಬೇಡ್ಕರ್ 130ನೇ ಜಯಂತಿ ಆಚರಣೆ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ, ಎಸ್​ಸಿ/ಎಸ್​ಟಿ ಸಮುದಾಯದ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆ ಶನಿವಾರ ಜರುಗಿತು.

    ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಕರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಏ. 20ರವರೆಗೆ ಹೆಚ್ಚು ಜನರನ್ನೊಳಗೊಂಡ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಡಾ. ಬಾಬು ಜಗಜೀವನರಾಂ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಸರ್ಕಾರಿ ಕಚೇರಿಯಲ್ಲಿ ಸರಳವಾಗಿ ಆಚರಿಸುವಂತೆ ನಿರ್ದೇಶನವಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

    ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸುರೇಶ ನಂದೆಣ್ಣವರ, ಫಕ್ಕಿರೇಶ ಮ್ಯಾಟಣ್ಣವರ, ಕೋಟೆಪ್ಪ ವರ್ದಿ ಮಾತನಾಡಿ, ಸರ್ಕಾರ ಕರೊನಾ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಆದೇಶ ಹೊರಡಿಸುತ್ತದೆ. ಮತ್ತೊಂದೆಡೆ ಚುನಾವಣೆ ಪ್ರಚಾರ ಸಭೆಗಳಿಗೆ, ಸಿನಿಮಾ ಮಂದಿರಗಳಿಗೆ, ಜಾತ್ರೆ, ಸಂತೆ, ಹಬ್ಬ, ಬಣ್ಣದಾಟ, ಬಾರ್-ರೆಸ್ಟೋರೆಂಟ್ ಸೇರಿ ಇತರೆಲ್ಲದಕ್ಕೂ ಅವಕಾಶ ಕಲ್ಪಿಸುತ್ತದೆ. ಆದರೆ, ದೇಶದ ಮಹಾನ್ ನಾಯಕರ ಜಯಂತಿ ಆಚರಣೆ ನಿರಾಕರಿಸುತ್ತದೆ. ಇದು ಯಾವ ನ್ಯಾಯ, ನಿಯಮ ಎಂದು ಪ್ರಶ್ನಿಸಿದರು.

    ಲಕ್ಷ್ಮೇಶ್ವರ ತಾಲೂಕು ಕೇಂದ್ರವಾದ ನಂತರ ಡಾ. ಬಾಬು ಜಗಜೀವನರಾಂ, ಡಾ. ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವೇ ಸಿಗದಂತಾಗಿದೆ. ಏ. 20ರ ನಂತರವಾದರೂ ಅದ್ದೂರಿ ಕಾರ್ಯಕ್ರಮಕ್ಕೆ ಅನುಮತಿ ನೀಡಲೇಬೇಕು. ಯಾವುದೇ ಕಾರಣ ನೀಡದೆ ಅದ್ದೂರಿ ಆಚರಣೆಗೆ ಅನುಮತಿ ನೀಡಬೇಕೆಂದು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ತಹಸೀಲ್ದಾರ್, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಸರ್ಕಾರದ ಮಾರ್ಗಸೂಚಿಯನ್ವಯ ಆಚರಣೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದರು.

    ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಉಪಾಧ್ಯಕ್ಷ ರಾಮಪ್ಪ ಗಡದವರ, ತಾಪಂ ಅಧ್ಯಕ್ಷ ಪರಶುರಾಮ ಇಮ್ಮಡಿ, ತಾಪಂ ಇಒ ಆರ್.ವೈ. ಗುರಿಕಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಬಿ. ಹರ್ತಿ, ಬಿಇಒ ಆರ್.ಎಸ್. ಬುರಡಿ, ಪಿಎಸ್​ಐ ಶಿವಯೋಗಿ ಲೋಹಾರ, ಆರ್.ಎಂ. ಪಾಟೀಲ, ಚನ್ನಪ್ಪ ಜಗಲಿ, ಅನಿಲ ಮುಳಗುಂದ, ಮನೋಹರ ಕರ್ಜಗಿ, ನಂದಾ ನವಲೆ, ಅಶ್ವಿನಿ ಅಂಕಲಕೋಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts