More

    ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕೆ ಮನವಿ

    ಬಸವನಬಾಗೇವಾಡಿ: ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಇತ್ಯರ್ಥ ಪಡಿಸುವುದು ಹಾಗೂ ಬಳೂತಿ ಜಾಕ್‌ವೆಲ್ ದುರಸ್ತಿಗೆ ಹಣ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಸೂಚಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಮನವಿ ಸಲ್ಲಿಸಿದರು.

    ತಾಲೂಕಿನ ಉತ್ನಾಳ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ತಾಲೂಕು ಅಧ್ಯಕ್ಷ ಸಿದ್ರಾಮ ಅಂಗಡಗೇರಿ ನೇತೃತ್ವದಲ್ಲಿ ರೈತರು ಜಗದ್ಗುರುಗಳಿಗೆ ಮನವಿ ಸಲ್ಲಿಸಿದರು.

    ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಹಾಗೂ ರೈತ ಸಂಘದ ಅರವಿಂದ ಕುಲಕರ್ಣಿ ಮಾತನಾಡಿ, ಹಲವು ವರ್ಷಗಳಿಂದ ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥ ಪಡಿಸಲು ಸರ್ಕಾರಕ್ಕೆ ಒತ್ತಾಯಪಡಿಸಲಾಗುತ್ತಿದೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ನಿತ್ಯ ಹಳ್ಳಿಗಳಲ್ಲಿ ದಾರಿಗಾಗಿ ಹೊಡೆದಾಟ ನಡೆಯುತ್ತಿವೆ. ಸಮಸ್ಯೆ ಗಂಭೀರವಾಗಿದ್ದು, ಕೂಡಲೇ ಸರ್ಕಾರ ದಾರಿ ಸಮಸ್ಯೆ ಬಗೆಹರಿಸಬೇಕು ಎಂದರು.

    ಅದರಂತೆ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಬಳೂತಿ ಜಾಕ್‌ವೆಲ್‌ನ ಯಂತ್ರೋಪಕರಣಗಳು 18 ತಿಂಗಳ ಹಿಂದೆ ವಿದ್ಯುತ್ ಅವಘಡದಿಂದ ಸುಟ್ಟು ಹೋಗಿವೆ. ನಾಡಿನ ಮಠಾಧೀಶರ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಸಮ್ಮಿಶ್ರ ಸರ್ಕಾರಕ್ಕೆ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದರು. ಈಗ ಒಂದೇ ವಿದ್ಯುತ್ ಪರಿವರ್ತಕ ಕಾರ್ಯನಿರ್ವಹಿಸುತ್ತಿರುವುದರಿಂದ ಅದರ ಮೇಲೆ ಒತ್ತಡ ಬೀಳುತ್ತಿದೆ. ಇದರಿಂದ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಕಾಲುವೆಗಳಿಗೆ ನೀರು ಹರಿಸುವುದು ತೊಂದರೆಯಾಗುತ್ತದೆ. ಯಾವ ಸಂದರ್ಭದಲ್ಲಾದರೂ ಇರುವ ಒಂದು ಟಿಸಿ ಸುಟ್ಟು ಹೋಗುವ ಹಂತದಲ್ಲಿದೆ. ಒಂದು ವೇಳೆ ಟಿಸಿ ಸುಟ್ಟರೆ ಕೃಷಿ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿನ ತೊಂದರೆ ಎದುರಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಹೊಸ ವಿದ್ಯುತ್ ಪರಿವರ್ತಕ ಅಳವಡಿಸಲು ಕ್ರಮಕೈಗೊಳ್ಳುವಂತೆ ಸಿಎಂಗೆ ನಿರ್ದೇಶನ ನೀಡಬೇಕೆಂದು ರೈತರು ಜಗದ್ಗುರುಗಳಲ್ಲಿ ಮನವಿ ಮಾಡಿಕೊಂಡರು.

    ಶಿವಪುತ್ರಯ್ಯ ಸ್ವಾಮೀಜಿ, ತಾಲೂಕಾಧ್ಯಕ್ಷ ಸಿದ್ರಾಮಪ್ಪ ಅಂಗಡಗೇರಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts