More

    ಜಮೀನು ಮಂಜೂರಿಗೆ ಸತಾಯಿಸುತ್ತಿರುವ ಸರ್ಕಾರ

    ಕಾರವಾರ: ತಮಗೆ ಅರ್ಧ ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ಸತಾಯಿಸುತ್ತಿರುವ ಕುರಿತು ನಿವೃತ್ತ ಸೈನಿಕ ಮಲ್ಲಾಪುರ ಮಧುಕರ ದೇವದಾಸ ಬೇಸರ ವ್ಯಕ್ತಪಡಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತ ನಾಡಿದ ಅವರು, ‘1965 ರಲ್ಲಿ ಭಾರತೀಯ ಸೇನೆ ಸೇರಿದ ನಾನು 71 ರ ಬಾಂಗ್ಲಾ ಯುದ್ಧದಲ್ಲಿ ಭಾಗವಹಿಸಿದ್ದೆ. ಪಾಕಿಸ್ಥಾನ ಗಡಿಯಲ್ಲಿ ಹಲ ವರ್ಷ ಕಾರ್ಯನಿರ್ವಹಿಸಿದ್ದೆ. ಸೇವೆಗೆ ಮೆಚ್ಚಿ ಸೇನಾ ಮೆಡಲ್ ನೀಡಲಾಗಿದೆ. ಹಲವು ಸಂಘಟನೆಗಳು ನನ್ನನ್ನು ಸನ್ಮಾನಿಸಿವೆ. ಆದರೆ, ಸರ್ಕಾರ ಯಾವುದನ್ನೂ ಪರಿಗಣಿಸುತ್ತಿಲ್ಲ. ನಿವೃತ್ತಿಯ ನಂತರ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಈಡೇರಿಲ್ಲ’ ಎಂದು ಕಣ್ಣೀರು ಹಾಕಿದರು. ‘ನಿವೃತ್ತ ಸೈನಿಕರಿಗೆ ಸರ್ಕಾರದಿಂದ ನೀಡಬೇಕಾದ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ಅದನ್ನು ನೀಡಿಲ್ಲ. 1955 ರಲ್ಲಿ ತಂದೆ ಮಲ್ಲಾಪುರದಲ್ಲಿ ಅತಿಕ್ರಮಣ ಮಾಡಿಕೊಂಡ 20 ಗುಂಟೆ ಅರಣ್ಯ ಜಮೀನನ್ನು ಮಂಜೂರು ಮಾಡುವಂತೆ ಅದೆಷ್ಟೋ ಬಾರಿ ಮನವಿ ಸಲ್ಲಿಸಿ ಸೋತಿದ್ದೇನೆ. 1955ರಲ್ಲೇ ಜಮೀನು ಅತಿಕ್ರಮಣವಾದ ಬಗ್ಗೆ ಆಗಿನ ಪಂಚಾಯಿತಿ ಚೇರ್ಮನ್ ಪತ್ರ ನೀಡಿದ್ದಾರೆ. 1998ರಲ್ಲಿ ಅರಣ್ಯ ಅತಿಕ್ರಮಣದ ಬಗ್ಗೆ ಪಂಚನಾಮೆ ನಡೆಸಲಾಗಿತ್ತು. ನಂತರ ಎರಡು ಬಾರಿ ನಾನು ಪ್ರಧಾನಿ, ರಾಷ್ಟ್ರಪತಿ ಅವರಿಗೆ ಪತ್ರ ಬರೆದೆ. ಅಲ್ಲಿಂದ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಎಲ್ಲ ದಾಖಲೆಗಳೂ ಇವೆ. ಆದರೂ ನನ್ನ ಕೆಲಸವಾಗಿಲ್ಲ. ಜಮೀನು ನನ್ನ ಹೆಸರಿಗಾದಲ್ಲಿ ಅದರಿಂದ ಸಾಲ ಪಡೆದು ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂಬ ಯೋಚನೆಯಲ್ಲಿದ್ದೇನೆ. ಇತ್ತೀಚಿನ 15 ವರ್ಷದಲ್ಲಿ ಬಂದ ಎಲ್ಲ ಜಿಲ್ಲಾಧಿಕಾರಿ ಅವರನ್ನೂ ಭೇಟಿಯಾದೆ. ಎಲ್ಲರೂ ಭರವಸೆ ನೀಡುತ್ತಾರೆಯೇ ಹೊರತು ಯಾರೂ ಕೆಲಸ ಮಾಡಿಕೊಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಡಾ. ಶ್ರೀನಿವಾಸ ದೇವರಾಯ ರಾಯ್ಕರ್, ವೆಂಕಟೇಶ ವೆರ್ಣೆಕರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts