More

    ಜಮೀನಿನಲ್ಲೇ ಕೊಳೆಯಿತು ಬೆಳೆ

    ಹಾನಗಲ್ಲ: ಕಟಾವಿಗೆ ಬಂದ ಸೋಯಾ, ಅವರೆ, ಶೇಂಗಾ ಬೆಳೆಯು ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಮೀನಿನಲ್ಲಿಯೇ ಕೊಳೆಯುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

    ಈ ವರ್ಷ 18,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 19,700 ಹೆಕ್ಟೇರ್ ಗೋವಿನಜೋಳ, 1620 ಹೆಕ್ಟೇರ್ ಸೋಯಾಬೀನ್, 4700 ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ. ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ವಾಡಿಕೆಯಂತೆ ಹದಭರಿತ ಮಳೆಯಾಗಿದ್ದರಿಂದ ಆಗಸ್ಟ್ ಮೊದಲ ವಾರದವರೆಗೆ ತಾಲೂಕಿನಾದ್ಯಂತ ಎಲ್ಲ ಬೆಳೆಗಳು ಉತ್ತಮವಾಗಿದ್ದವು. ರೈತರೂ ಬಂಪರ್ ಬೆಳೆಯ ಕನಸು ಕಂಡಿದ್ದರು. ಆದರೆ, ನಂತರ ಸುರಿದ ಭಾರಿ ಮಳೆಯಿಂದಾಗಿ ಸೋಯಾಬೀನ್ ಹಾಗೂ ಶೇಂಗಾ ಬೆಳೆಗಳು ಜವಳು ಹಿಡಿದು ಭೂಮಿಯಲ್ಲೇ ಕೊಳೆಯಲಾರಂಭಿಸಿವೆ. ಹೀಗಾಗಿ, ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬಾರದಂಥ ಸ್ಥಿತಿ ನಿರ್ವಣವಾಗಿದೆ. ಮುಖ್ಯವಾಗಿ ಬೊಮ್ಮನಹಳ್ಳಿ ಹೋಬಳಿಯಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಮುಂಗಾರು ಹಂಗಾಮಿನ ಆರಂಭದಲ್ಲಿ ಕೆಲವೆಡೆ ಸೋಯಾಬೀನ್ ಬಿತ್ತನೆ ಮಾಡಿದ ನಂತರ ಮೊಳಕೆಯೊಡೆಯದ ಕಾರಣ ರೈತರು ತೊಂದರೆ ಅನುಭವಿಸಿದ್ದರು. ಈಗ ಕಟಾವಿಗೆ ಬಂದ ಸೋಯಾಬೀನ್ ಮತ್ತು ಶೇಂಗಾ ಬೆಳೆಯೂ ಹಾಳಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

    ಜಂಟಿ ಸಮೀಕ್ಷೆ: ಶೇಂಗಾ- ಸೋಯಾಬೀನ್ ಫಸಲು ಹಾನಿ ಯಾಗಿರುವ ಕುರಿತು ಹಲವು ಗ್ರಾಮಗಳ ರೈತರು ಕೃಷಿ ಇಲಾಖೆಗೆ ಮನವಿ ಸಲ್ಲಿಸಿ, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಕೈಗೊಂಡಿದ್ದಾರೆ.

    ಇನ್ನೂ ಸಿಕ್ಕಿಲ್ಲ ಪರಿಹಾರ: ಕೃಷಿ ಇಲಾಖೆಯ ಮೂಲಗಳ ಪ್ರಕಾರ ತಾಲೂಕಿನಲ್ಲಿ ಮುಂಗಾರಿನಲ್ಲಿ 110 ರೈತರು, 263 ಎಕರೆ ಪ್ರದೇಶದಲ್ಲಿ ಸೋಯಾಬೀನ್ ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆ ಬೀಜಗಳು ಕಳಪೆಯಾಗಿದ್ದರಿಂದ ಮೊಳಕೆ ಬಂದಿರಲಿಲ್ಲ. ರೈತರು, ಕೃಷಿ ಇಲಾಖೆ ಮಧ್ಯಸ್ಥಿಕೆಯಲ್ಲಿ ಮತ್ತೆ ಕಂಪನಿಯವರಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸಲಾಗಿತ್ತು. ಅವು ಕೂಡ ಸರಿಯಾಗಿ ಮೊಳಕೆ ಬಂದಿರಲಿಲ್ಲ. ಈ ನಡುವೆ ಕೃಷಿ ಸಚಿವರೊಂದಿಗೆ ರೈತರು ರ್ಚಚಿಸಿ ಪರಿಹಾರ ವಿತರಣೆಗೆ ಒಪ್ಪಿಸಿದ್ದರು. ಕೃಷಿ ಇಲಾಖೆ ಈ ರೈತರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಇದುವರೆಗೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆಯಾಗಿಲ್ಲ. ಇಷ್ಟೆಲ್ಲ ಸಮಸ್ಯೆಯ ಮಧ್ಯೆ ಬೆಳೆಯಲಾಗಿದ್ದ ಒಂದಷ್ಟು ಸೋಯಾಬೀನ್ ಫಸಲು ಮಳೆಯ ನೀರಿನಲ್ಲಿ ಕೊಳೆಯುತ್ತಿರುವುದು ಸಂಕಷ್ಟ ತಂದೊಡ್ಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts