More

    ಜನ ವಿರೋಧಕ್ಕೆ ಮಣಿದ ಮಹಾನಗರ ಪಾಲಿಕೆ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 6 ದಿನಗಳಲ್ಲಿ ಆಸ್ತಿ ತೆರಿಗೆ ದರ ಹೆಚ್ಚಳದಲ್ಲಿ ಮರು ಪರಿಷ್ಕರಣೆ ಮಾಡಿದೆ. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು, ಮೇ 16ರಂದು ಆಸ್ತಿ ತೆರಿಗೆ ದರವನ್ನು ಶೇ. 20ರಿಂದ 30ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದ್ದರು. ಈ ಏರಿಕೆಗೆ ನಾಗರಿಕರಷ್ಟೇ ಅಲ್ಲ, ವರ್ತಕರು, ಉದ್ಯಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಏರಿಕೆಯನ್ನು ತುಸು ತಗ್ಗಿಸಿ ಪಾಲಿಕೆ ಆಯುಕ್ತರು ಶುಕ್ರವಾರ ಹೊಸ ಆದೇಶ ಹೊರಡಿಸಿದ್ದಾರೆ. 2020-21ನೇ ಸಾಲಿಗೆ ಆಸ್ತಿ ತೆರಿಗೆಯು ವಾಸದ ಕಟ್ಟಡಗಳ ಮೇಲೆ ಶೇ. 15ರಷ್ಟು (ಹಿಂದಿನ ಆದೇಶದಂತೆ ಶೇ. 20), ವಾಣಿಜ್ಯ ಕಟ್ಟಡಗಳಿಗೆ ಶೇ. 20 (ಶೇ. 30), ವಾಸೇತರ ಮತ್ತು ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ. 20

    (ಶೇ. 25) ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25 (ಶೇ. 30) ರಷ್ಟು ಏರಿಕೆ ಮಾಡಲಾಗಿದೆ. ಹಿಂದಿನ ಆದೇಶದಂತೆ ಏರಿಕೆ ಪ್ರಮಾಣವು ತೀರಾ ಹೆಚ್ಚಳವಾಗಿದೆ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿ ಮರು ಪರಿಶೀಲಿಸಲು ಕೋರಿದ್ದರು. ಅದರಂತೆ ಮರು ಪರಿಷ್ಕರಣೆ ಮಾಡಲಾಗಿದೆ. ಕರದಾತರು ಹೊಸ ದರದಂತೆ ಆಸ್ತಿ ತೆರಿಗೆ ಸಂದಾಯ ಮಾಡಬೇಕು. ಶೇ. 5ರಷ್ಟು ರಿಯಾಯಿತಿ ಸೌಲಭ್ಯವು ಮೇ 31ರವರೆಗೆ ಮಾತ್ರ ಇದ್ದು, ಅಷ್ಟರೊಳಗೆ ಆಸ್ತಿ ತೆರಿಗೆ ಪಾವತಿಸಿ ಪ್ರಯೋಜನ ಪಡೆಯಬೇಕೆಂದು ಪಾಲಿಕೆ ಆಯುಕ್ತರು ಕೋರಿದ್ದಾರೆ.

    ಆದೇಶ ಹಿಂಪಡೆಯಲು ಚಿಂಚೋರೆ ಆಗ್ರಹ: ಹು-ಧಾ ಮಹಾನಗರ ಪಾಲಿಕೆ ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರುವುದನ್ನು ರಾಜ್ಯ ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು.

    ಧಾರವಾಡದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 1ರಿಂದ ಅನ್ವಯವಾಗುವಂತೆ ಆಸ್ತಿ ತೆರಿಗೆ ಪರಿಷ್ಕರಿಸಲಾಗಿದೆ. ಇದು ಖಂಡನೀಯ ಎಂದರು. ಆಸ್ತಿ ಕರವನ್ನು ಏಕಾಏಕಿ ದುಪ್ಪಟ್ಟು ಮಾಡಿರುವುದನ್ನು ಗಮನಿಸಿದರೆ ಜಿಲ್ಲೆಯ ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಂಬ ಸಂಶಯ ಮೂಡುವಂತಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಹಾಗೂ ಸಾಮಾಜಿಕ ತೊಂದರೆಗಳ ನಡುವೆ ತೆರಿಗೆ ಹೆಚ್ಚಳ ಮಾಡಿರುವುದು ನಾಗರಿಕರು ಹಾಗೂ ವರ್ತಕರಲ್ಲಿ ಆತಂಕ ಉಂಟು ಮಾಡಿದೆ ಎಂದು ದೂರಿದರು. ಕೇಂದ್ರ-ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಪ್ರಸ್ತುತ ಹಣಕಾಸಿನ ದುಸ್ಥಿತಿಯಲ್ಲಿ ಹಲವು ಬಗೆಯ ಆರ್ಥಿಕ ನೆರವು ಘೊಷಣೆ ಮಾಡಿವೆ. ಇಂತಹ ಸ್ಥಿತಿಯಲ್ಲಿ ಮಹಾನಗರ ಪಾಲಿಕೆ ನಾಗರಿಕರಿಗೆ ಅನುಕೂಲವಾಗುವಂತೆ ಕೆಲ ರಿಯಾಯಿತಿ ಘೊಷಣೆ ಮಾಡುವ ಬದಲು ಇನ್ನಷ್ಟು ಹೊರೆ ಮಾಡಿದೆ. ತೆರಿಗೆ ವಿಧಿಸುವಲ್ಲಿ ನಂ. 1 ಸ್ಥಾನದಲ್ಲಿರುವ ಹು-ಧಾ ಮಹಾನಗರ ಪಾಲಿಕೆ, ಸೇವೆ ನೀಡುವಲ್ಲಿ ಮಾತ್ರ ಹಿಂದೆ ಬೀಳುತ್ತಿದೆ ಎಂದು ದೂರಿದರು. ಮುಂದಿನ ದಿನಗಳಲ್ಲಿ ಪಾಲಿಕೆ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿಗಳನ್ನೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಮೃತ್ಯುಂಜಯ ಗಾಣಿಗೇರ, ಮುತ್ತು ಕೋಟೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts