More

    ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆಗೆ ಚಾಲನೆ, ಫೆ.22ರೊಳಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಚುನಾವಣಾ ಆಯೋಗ ಸೂಚನೆ

    ರಾಮನಗರ : ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಂಬಂಧ ಸಿದ್ಧತೆ ಆರಂಭಗೊಂಡಿದೆ. ಕ್ಷೇತ್ರ ಮರುವಿಂಗಡಣೆಗೆ ಚಾಲನೆ ನೀಡಲಾಗಿದ್ದು, ಜಿಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಏರಿಕೆ ಆಗಿದ್ದರೆ, ತಾಪಂ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
    ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ ಫೆ.22ರ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಕಳೆದ ಜಿಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 22 ಜಿಪಂ ಸ್ಥಾನಗಳು ಇದ್ದವು. ಆದರೆ, ಈ ಬಾರಿ ಮಾಗಡಿ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ ತಲಾ ಒಂದು ಸ್ಥಾನ ಹೆಚ್ಚಾಗಿದ್ದು, ಕನಕಪುರ ಮತ್ತು ರಾಮನಗರದಲ್ಲಿ ಯಥಾಸ್ಥಿತಿ ಇದೆ. ಮೊದಲು ಮಾಗಡಿ ಮತ್ತು ಚನ್ನಪಟ್ಟಣ ತಲಾ 5 ಕ್ಷೇತ್ರಗಳಿದ್ದವು. ರಾಮನಗರ ಮತ್ತು ಕನಕಪುರದಲ್ಲಿ ಕ್ರಮವಾಗಿ 4 ಮತ್ತು 8 ಸ್ಥಾನಗಳಿದ್ದು ಇವುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
    ಜನಸಂಖ್ಯೆ ಆಧಾರ: ಕ್ಷೇತ್ರಗಳ ಮರುವಿಂಗಡಣೆ ಜನಸಂಖ್ಯೆ ಆಧಾರದ ಮೇಲೆ ನಿಗದಿಯಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ 35-40 ಸಾವಿರ ಜನಸಂಖ್ಯೆ ಇರಬೇಕು, ಅದೇ ರೀತಿ ಪ್ರತಿ ತಾಪಂ ಕ್ಷೇತ್ರದಲ್ಲಿ 12,500 ಜನಸಂಖ್ಯೆ ನಿಗದಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಒಂದು ಗ್ರಾಪಂ ಎರಡು ಜಿಪಂ ಇಲ್ಲವೇ ತಾಪಂ ವ್ಯಾಪ್ತಿಗೆ ಹಂಚಿಕೆ ಆಗದಂತೆಯೂ ಕ್ರಮ ವಹಿಸುವಂತೆ ಆಯೋಗ ಜಿಲ್ಲಾಡಳಿತಕ್ಕೆ ಸೂಚಿಸಿದೆ.
    ಆಕಾಂಕ್ಷಿಗಳಿಗೆ ತಲೆ ಬಿಸಿ: ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಈಗಾಗಲೇ ಹಲವಾರು ಆಕಾಂಕ್ಷಿಗಳು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕ್ಷೇತ್ರ ಮರುವಿಂಗಡಣೆಯಲ್ಲಿ ಯಾವ ಊರುಗಳು, ಯಾವ ಕ್ಷೇತ್ರದ ಪಾಲಾಗಲಿವೆ ಎನ್ನುವುದು ಖಾತ್ರಿಯಿಲ್ಲದೆ ಇರುವುದು ಈಗಾಗಲೇ ಮಾಡಿದ ಸೇವೆ ಹೊಳೆಯಲ್ಲಿ ಹುಣಸೇಹಣ್ಣು ಕಲಸಿದಂತೆ ಎನ್ನುವಂತಾಗಿದೆ.
    ಸ್ಥಾನ ಕಳೆದುಕೊಂಡ ತಾಪಂ
    ತಾಪಂ ವ್ಯವಸ್ಥೆ ರದ್ದು ಮಾಡಬೇಕು ಎನ್ನುವ ಚರ್ಚೆಗಳು ನಡೆಯುತ್ತಿರುವ ನಡುವೆಯೇ 15 ತಾಪಂ ಸ್ಥಾನಗಳು ಕ್ಷೇತ್ರ ಮರುವಿಂಗಡಣೆಯಲ್ಲಿ ಅಸ್ತಿತ್ವ ಕಳೆದುಕೊಳ್ಳಲಿವೆ. ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ ಒಟ್ಟು 80 ಸ್ಥಾನಗಳಿದ್ದು, ಚುನಾವಣಾ ಆಯೋಗ ಈ ಸಂಖ್ಯೆಯನ್ನು 65ಕ್ಕೆ ಇಳಿಸಿದೆ. ರಾಮನಗರದ 14 ಸ್ಥಾನಗಳಲ್ಲಿ 2 ಸ್ಥಾನ, ಚನ್ನಪಟ್ಟಣದ 19 ಸ್ಥಾನಗಳಲ್ಲಿ 4 ಸ್ಥಾನ, ಕನಕಪುರದ 29 ಸ್ಥಾನಗಳಲ್ಲಿ 6 ಸ್ಥಾನ ಮತ್ತು ಮಾಗಡಿಯ 18 ಸ್ಥಾನಗಳಲ್ಲಿ 3 ಸ್ಥಾನಗಳು ಕಡಿಮೆ ಆಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts