More

    ಜನರ ಜೋಶ್, ಡಾಲಿ ಅಬ್ಬರದ ನಡುವೆ ಯುವ ಸಂಭ್ರಮಕ್ಕೆ ಚಾಲನೆ

    ಮೈಸೂರು: ಯುವ ಜನರ ಜೋಶ್, ಡಾಲಿ, ಡಾಲಿ ಎಂಬ ಸಭಿಕರ ಜಯಘೋಷ, ನಟ ಡಾಲಿ ಧನಂಜಯ್ ಧಮಾಕ್ ಡೈಲಾಗ್…!

    ಈ ರೀತಿ ಹಿಮ್ಮೇಳದೊಂದಿಗೆ ‘ದಸರಾ ಯುವ ಸಂಭ್ರಮ’ಕ್ಕೆ ಶುಕ್ರವಾರ ಮುಸ್ಸಂಜೆಯಲ್ಲಿ ಅದ್ದೂರಿ ಚಾಲನೆ ದೊರೆಯಿತು. ಇದರೊಂದಿಗೆ 2022ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಯಿತು. ಕರೊನಾ ಕಾರಣಕ್ಕೆ ಕಳೆದ ಎರಡು ವರ್ಷ ಮರೆಯಾಗಿದ್ದ ಯುವ ಸಂಭ್ರಮ ನಗರದ ಮಾನಸಗಂಗೋತ್ರಿ ಬಯಲುರಂಗಮಂದಿರದಲ್ಲಿ ಈ ಸಲ ವರ್ಣರಂಜಿತವಾಗಿ ಗರಿಬಿಚ್ಚಿಕೊಂಡಿತು. ಮೊದಲ ದಿನವೇ ಯುವ ಪಡೆಯ ಸಡಗರಕ್ಕೆ ಕಿಚ್ಚು ಹಚ್ಚಿಸಿತು.

    ಡಾಲಿ ಮಿಂಚು;

    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದೀಪ ಬೆಳೆಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲ ಗಣ್ಯರು ಸೇರಿಕೊಂಡು ನಗಾರಿ, ಕಂಸಾಳೆ ಡೊಳ್ಳು ಬಾರಿಸುವ ಮೂಲಕ ಮೆರುಗು ತಂದುಕೊಟ್ಟರು. ಬಿಳಿಯ ಶರ್ಟ್, ಪಂಚೆ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ನಟ ಡಾಲಿ ಧನಂಜಯ ಜನಸ್ತೋಮದ ಮಧ್ಯೆ ಮಿಂಚಿದರು. ಸಭಿಕರ ಸಮೂಹದಿಂದ ಡಾಲಿ, ಡಾಲಿ, ಡಾಲಿ ಜಯಘೋಷ ಪದೇ ಪದೆ ಮಾರ್ದನಿಸಿತು.

    ನಿರಂಕುಶಮತಿಗಳಾಗಿ:
    ಮೈಕ್ ಹಿಡಿದು ಮಾತಿಗಿಳಿದ ಧನಂಜಯ್ ಅವರು, ರಾಷ್ಟ್ರಕವಿ ಕುವೆಂಪು ಹೇಳಿದಂತೆ ಪ್ರತಿಯೊಬ್ಬರೂ ನಿರಂಕುಶಮತಿಗಳಾಗಬೇಕು. ಇದು ಸಂಯಮ ಪೂರ್ಣವಾದ ಬುದ್ಧಿ ಸ್ವಾತಂತ್ರ್ಯ. ಸ್ವಂತಿಕೆ ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ ಮೀರಿ ಜೀವನವನ್ನು ರೂಪಿಸಿಕೊಳ್ಳಬೇಕು. ದೇಶ ಮತ್ತು ನಾಡು ಕಟ್ಟಬೇಕು ಎಂದು ಯುವ ಜನರಿಗೆ ಕಿವಿಮಾತು ಹೇಳಿದರು.
    ಇದೀಗ ನಿರಂಕುಶಗಳ ಹಾವಳಿ ಹೆಚ್ಚಾಗಿದೆ. ವಿವಿಧ ರೀತಿಯಲ್ಲಿ ಅಂಕುಶ ಹಾಕಿ ಜನರನ್ನು ನಿಯಂತ್ರಣ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ನಾವು ನಿರಂಕುಶದಿಂದ ನಿರಂಕುಶಮತಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.

    ನಾನು ದಸರಾದಲ್ಲಿ ಸಂಭ್ರಮಿಸಿರುವೆ:
    ನನಗೆ ಮೈಸೂರು ಮತ್ತು ಇಲ್ಲಿಯ ದಸರಾ ಅಂದರೆ ಸಾಕಷ್ಟು ನೆನಪುಗಳು ಬರುತ್ತವೆ. ನಾನು ಓದಿದ್ದು ಮಾನಸಗಂಗೋತ್ರಿಯಲ್ಲೇ. ಆಗ ಬಯಲು ರಂಗಮಂದಿರದಲ್ಲಿ ಯುವ ದಸರಾ ನಡೆಯುತ್ತಿತ್ತು. ನಾನು ಸಹ ಚೆನ್ನಾಗಿ ಕುಣಿದು ಸಂಭ್ರಮಿಸುತ್ತಿದ್ದೆ ಎಂದು ಸ್ಮರಿಸಿಕೊಂಡರು.

    ರಾತ್ರೋರಾತ್ರಿ ಬೆಳೆಯಲ್ಲ:
    ಪ್ರತಿಯೊಬ್ಬರು ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಯಶಸ್ಸು ಖಂಡಿತ ದೊರೆಯುತ್ತದೆ. ‘ನಮ್ಮ ಏಳ್ಗಿಗೆಗೆ ನಾವೇ ಶಿಲ್ಪಿಗಳು’ ಎಂಬ ಸ್ವಾಮಿ ವಿವೇಕಾನಂದರ ಮಾತು ನಮಗೆ ದಾರಿದೀಪವಾಗಬೇಕು. ಯಾರೂ ಕೂಡ ರಾತ್ರೋರಾತ್ರಿ ಬೆಳೆಯಲು ಸಾಧ್ಯವಿಲ್ಲ ಎಂದರು.

    2010ರಲ್ಲಿ ಓದು ಮುಗಿಸಿ ಮೈಸೂರಿನಿಂದ ಬೆಂಗಳೂರಿಗೆ ಹೋದೆ. ಮೂರು ವರ್ಷದ ಬಳಿಕ 2013ರಲ್ಲಿ ನನ್ನ ಮೊದಲ ಸಿನಿಮಾ ಬಿಡುಗಡೆ ಆಯ್ತು. ಹೀಗೆ 12 ವರ್ಷ ನಾನು ಕಷ್ಟಪಟ್ಟಿರುವೆ. ಪ್ರತಿಯೊಬ್ಬರೂ ಸುದೀರ್ಘ ಕಾಲದ ಗುರಿಯನ್ನು ಇಟ್ಟುಕೊಂಡು, ಅದನ್ನು ಸಾಧಿಸಲು ಕಠಿಣ ಪರಿಶ್ರಮ ಹಾಕಬೇಕು ಎಂದು ಯುವ ಜನರಿಗೆ ಸಲಹೆ ನೀಡಿದರು.
    ನಮ್ಮ ಕೈಯಲ್ಲಿ ಏನಾಗುತ್ತೆ ಅಷ್ಟು ಸಹಾಯ ಮಾಡಬೇಕು. ಎಲ್ಲರೂ ಜತೆಗೆ ನಗುತ್ತಾ ಇರಬೇಕು. ನಿಮ್ಮ ಒಂದು ನಗು, ಇನ್ನೊಬ್ಬರ ಬದುಕನ್ನು ಬದಲಿಸಬಹುದು ಎಂದ ಅವರು, ಬಸವಣ್ಣನವರ ವಚನ ಹೇಳುತ್ತ ಯುವ ಜನತೆಗೆ ಬುದ್ಧಿ ಮಾತು ಹೇಳಿದರು.

    ಹೊಸ ನಿರ್ದೇಶಕರಿಗೆ ಅವಕಾಶ:

    ಕಷ್ಟಪಟ್ಟು ಬಡವ ರಾಸ್ಕಲ್ ಸಿನಿಮಾ ನಿರ್ಮಾಣ ಮಾಡಿದೆ. ಜನರ ಅಭಿಮಾನದಿಂದ ಅದು ಜಯಕಂಡಿತು. ಅದಕ್ಕೆ ಸಾಕ್ಷಿ ನೀವೇ. ಅದು ನಾನು ಕನ್ನಡ ಸಿನಿಮಾಕ್ಕೆ ಕೊಟ್ಟ ಸಣ್ಣ ಕೊಡುಗೆ. ಹೀಗೆ ಪ್ರತಿ ವರ್ಷ ಇಬ್ಬರು ಹೊಸಬರಿಗೆ ಸಿನಿಮಾ ನಿರ್ದೇಶನ ಮಾಡಲು ಅವಕಾಶ ನೀಡುವೆ. ಅಂತೆಯೇ ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

    ಪಂಚಿಂಗ್ ಡೈಲಾಗ್:
    ಮುಂದಿನ ತಿಂಗಳು ‘ಹೆಡ್ ಬುಷ್’ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಎಂದು ಹೇಳಿದರು. ಪ್ರೇಕ್ಷಕರ ಒತ್ತಾಯದ ಮೇರೆಗೆ ಟಗರು, ಬಡವ ರಾಸ್ಕಲ್, ಮಾನ್ಸೂನ್ ರಾಗ್ ಸಿನಿಮಾದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು. ಇದಕ್ಕೆ ಸಭಿಕರಿಂದ ಭರ್ಜರಿ ಸ್ಪಂದನೆ ಬರುವ ಮೂಲಕ ಜೋರಾಗಿ ಕೂಗಿದರು.

    ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಯುವ ಸಂಭ್ರಮಕ್ಕೆ 152 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದು ಪ್ರತಿಭೆಯನ್ನು ಪ್ರದರ್ಶಿಸಲು ಸುವರ್ಣ ಅವಕಾಶ. ಹೀಗಾಗಿ ಇಂತಹ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
    ಮೇಯರ್ ಶಿವಕುಮಾರ್, ಉಪಮೇಯರ್ ಜಿ.ರೂಪಾ, ಶಾಸಕ ಎಲ್.ನಾಗೇಂದ್ರ, ನಿಗಮ-ಮಂಡಳಿಯ ಅಧ್ಯಕ್ಷರಾದ ಎಸ್.ಮಹದೇವಯ್ಯ, ಆರ್.ರಘು, ಎಂ.ಶಿವಕುಮಾರ್, ಮಿರ್ಲೆ ಶ್ರೀನಿವಾಸ್, ಎಂಎಲ್‌ಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್‌ಪಿ ಆರ್.ಚೇತನ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್ ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts