More

    ಜನರಿಗೆ ಪಕ್ಷಾತೀತ ಸಹಾಯ ಹಸ್ತ – ಎಂ.ಬಿ. ಝಿರಲಿ

    ಬೆಳಗಾವಿ: ಕರೊನಾ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಬಿಜೆಪಿ ವತಿಯಿಂದ ಪಕ್ಷಾತೀತವಾಗಿ ಸಹಾಯ ಮಾಡಲಾಗುತ್ತಿದೆ. ಶಾಸಕರು, ಸಚಿವರು, ಸಂಸದರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಸಹ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಝಿರಲಿ ತಿಳಿಸಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ದಕ್ಷಿಣದ ಶಾಸಕ ಹಾಗೂ ಉತ್ತರ ಕ್ಷೇತ್ರದ ಶಾಸಕರು ಸೇರಿ ನಗರದಲ್ಲಿರುವ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಅನುಕೂಲಕರವಾಗಿಸಿದ್ದು, ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಿದ್ದಾರೆ. ಅಲ್ಲದೆ, 2 ಆಂಬುಲೆನ್ಸ್ ಹಾಗೂ ಲಕ್ಷಾಂತರ ರೂ.ಮೌಲ್ಯದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಒದಗಿಸಿದ್ದಾರೆ. ರೋಗಿಗಳೊಂದಿಗೆ ಬರುವವರಿಗೆ ಸಂಜೆ 7ರಿಂದ 9ರ ವರೆಗೆ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

    ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಹೋದರನ ಪುತ್ರನ ಸಾವಿನ ನೋವಲ್ಲೂ ಸಹ ಅಥಣಿಯಲ್ಲಿ ಕೋವಿಡ್ ಕೇರ್ ಕೇಂದ್ರಕ್ಕೆ 50 ಲಕ್ಷ ರೂ. ಮೌಲ್ಯದ ಉಪಕರಣ ದೇಣಿಗೆ ನೀಡಿದ್ದಾರೆ. ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ ದಂಪತಿ ಸಹ ಚಿಕ್ಕೋಡಿಯಲ್ಲಿ ಆಸ್ಪತ್ರೆ ಆರಂಭಿಸಿದ್ದಾರೆ. ಮುಖಂಡ ಪ್ರಭಾಕರ ಕೋರೆ ಅವರು ಪ್ರಕಾಶ ಹುಕ್ಕೇರಿ ಜೊತೆ ಸೇರಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದ್ದಾರೆ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಐದು ಸಾವಿರ ಮೆಡಿಕಲ್ ಕಿಟ್ ವಿತರಿಸಿದ್ದಾರೆ ಎಂದರು.

    ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ನಿಜ. ಅಂತೆಯೇ ಗುಣಮುಖ ಆಗುವವರ ಸಂಖ್ಯೆಯೂ ಹೆಚ್ಚಿದೆ. ಸಾಮಾನ್ಯ ಜ್ವರ ಬಂದರೂ ಭಯದಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಬೆಡ್ ಹಾಗೂ ಆಕ್ಸಿಜನ್ಸೌ ಲಭ್ಯದಲ್ಲಿ ಗೊಂದಲ ಉಂಟಾಗುತ್ತಿದೆ. ಅವಶ್ಯಕತೆ ಇದ್ದವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಉಳಿದವರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುವಂತೆ ಪಕ್ಷದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

    ಯುವಕರ ಸಾವಿನ ಪ್ರಕರಣಗಳೂ ವರದಿಯಾಗುತ್ತಿವೆ. ಪ್ರತಿಯೊಬ್ಬರೂ ಹೆದರಿದ್ದಾರೆ. ಹೀಗಿರುವಾಗ, ಕೆಲವರು ಸಾಮಾಜಿಕ ಜಾಲತಾಣದಲ್ಲಿ
    ಭಯ ಉಂಟು ಮಾಡುತ್ತಿದ್ದಾರೆ. ಸಕಾರಾತ್ಮಕ ವಿಷಯಗಳನ್ನು ಹೆಚ್ಚು ಪ್ರಸಾರ ಮಾಡುವ ಮೂಲಕ ಜನತೆಗೆ ಸೋಂಕು ಎದುರಿಸುವಂತೆ ಧೈರ್ಯ ತುಂಬುವ ಕಾರ್ಯ ಮಾಧ್ಯಮಗಳಿಂದಲೂ ಆಗಬೇಕಿದೆ ಎಂದು ತಿಳಿಸಿದರು.

    ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಮೇಲಿಂದ ಮೇಲೆ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ವಿಧಾನಸಭಾ ಕ್ಷೇತ್ರವಾರು ವರ್ಚ್ಯೂವಲ್ ಸಭೆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸುತ್ತಿದ್ದೇನೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಇತರರಿದ್ದರು.

    ಜಿಲ್ಲೆಯಲ್ಲೂ ಬ್ಲಾೃಕ್ ಫಂಗಸ್!?

    ಹುಕ್ಕೇರಿ ತಾಲೂಕಿನ ಸಂಕೇಶ್ವರದ ವ್ಯಕ್ತಿಯೊಬ್ಬರಲ್ಲಿ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಈ ವಿಚಾರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಕೋವಿಡ್ ಜತೆಗೆ ಶಿಲೀಂಧ್ರ ಸೋಂಕು ಬಾಧಿಸುತ್ತಿರುವುದು ಆತಂಕ ಮೂಡಿಸಿದೆ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ
    ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ ಮುನ್ಯಾಳ, ‘ಬ್ಲ್ಯಾಕ್ ಫಂಗಸ್ ಸಮಸ್ಯೆ ಗಂಭೀರವಾದುದೇನಲ್ಲ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಬ್ಲಾೃಕ್ ಫಂಗಸ್ ಸೋಂಕು ದೃಢಪಟ್ಟಿರುವುದು ವರದಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಎಲ್‌ಇಯಿಂದ ಉಚಿತ ಚಿಕಿತ್ಸೆ ನೀಡಲು ಚರ್ಚೆ: ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆ ಎಂಬ ಖ್ಯಾತಿ ಪಡೆದಿರುವ ಕೆಎಲ್‌ಇ ಆಸ್ಪತ್ರೆಯಲ್ಲಿ ಕೇವಲ 200 ಬೆಡ್ ಮೀಸಲಿಟ್ಟಿರುವುದು ಸಮಂಜಸವೇ? ಕನಿಷ್ಠ 500 ಹಾಸಿಗೆ ಮೀಸಲಿಟ್ಟು ಉಚಿತ ಚಿಕಿತ್ಸೆ ನೀಡುವಂತೆ ಮನವೊಲಿಸಬಹುದಲ್ಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ. ಝಿರಲಿ, ಈ ಬಗ್ಗೆ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts