More

    ಜನರನ್ನು ಕಂಗೆಡಿಸಿದ ಧೂಳಿನ ಮಜ್ಜನ: 2 ವರ್ಷ ಕಳೆದರೂ ಪೂರ್ಣಗೊಳ್ಳದ ರಸ್ತೆ ಅಭಿವೃದ್ಧಿ ಕಾಮಗಾರಿ

    ಜಿ.ಕೆ. ಸುಗ್ಗರಾಜು ನೆಲಮಂಗಲ
    ನಿತ್ಯವೂ ತಪ್ಪದ ವಾಹನ ದಟ್ಟಣೆ ಕಿರಿಕಿರಿ, ಧೂಳಿನ ಮಜ್ಜನ, ರಸ್ತೆ ಪಕ್ಕದ ಮನೆಯವರಿಗೆ ಹೊರಬರಲಾಗದ ಸ್ಥಿತಿ. ಧೂಳಿನಿಂದಾಗಿ ಹೆಚ್ಚುತ್ತಿರುವ ಶ್ವಾಸಕೋಶದ ಸಮಸ್ಯೆ…
    ಹೌದು. ಅಭಿವೃದ್ಧಿ ಕಾಮಗಾರಿಗಳ ವಿಳಂಬದಿಂದ ಈ ಭಾಗದ ಜನತೆ ತತ್ತರಿಸುವಂತಾಗಿದೆ. ವಾಹನಗಳ ಸುಗಮ ಸಂಚಾರ, ಪ್ರಯಾಣಿಕರು, ವಾಹನ ಸವಾರರ ಸುರಕ್ಷತೆ ಜತೆಗೆ ಸಂಭವಿಸಬಹುದಾದ ಆಕಸ್ಮಿಕ ಅವಘಡ ನಿಯಂತ್ರಣ ಉದ್ದೇಶದಿಂದ ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿ
    ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ವಾಹನ ಸವಾರರ ಜತೆಗೆ ರಸ್ತೆಯುದ್ದಕ್ಕೂ ಇರುವ
    ಆಯಾ ಹಳ್ಳಿಗಳ ಜನರು ನಿತ್ಯವೂ ಧೂಳಿನ ಮಜ್ಜನ ಅನುಭವಿಸಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
    ಕಾಮಗಾರಿ ಕುಂಟುತ್ತಾ ಸಾಗಿದ್ದು, ಹೀಗಾಗಿ ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದ ರಸ್ತೆಗಳಿದರೆ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ
    ಧೂಳಿನ ಅಭಿಷೇಕ ಅನಿವಾರ್ಯವಾಗಿದೆ.


    ಪೂರ್ಣಗೊಳ್ಳದ ಕಾಮಗಾರಿ: ನಗರದ ಬಸವನಹಳ್ಳಿ ಕ್ರಾಸ್‌ನಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 65 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು 2020 ಜೂನ್ 19ರಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ 2 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗೆಯೇ ಗುಂಡಿಗಳಿಂದ ಕೂಡಿರುವ ರಸ್ತೆಗಳಲ್ಲಿ ವಾಹನ ಚಾಲನೆಗೆ ಯಾತನೆ ಅನುಭವಿಸಬೇಕಿದೆ.
    ಜನಜೀವನ ಅಯೋಮಯ: ರಸ್ತೆ ಹಾದುಹೋಗಿರುವ ಹಳ್ಳಿಯಲ್ಲೂ ಧೂಳಿನ ಗೋಳು ಶುರುವಾಗಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಪ್ರಸ್ತುತ ಬೇಸಿಗೆ ಶುರುವಾಗಿರುವುದರಿಂದ ಧೂಳಿನ ಹಾವಳಿ ಹೆಚ್ಚಾಗಿದೆ. ಇದರಿಂದ ಸ್ಥಳೀಯರು ಮನೆ ಬಿಟ್ಟು ರಸ್ತೆಗಳಿಯಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವಾಹನ ಸಂಚರಿಸಿದರೆ ಸಾಕು, ಉಸಿರಾಡುವುದಕ್ಕೂ ಕಷ್ಟವಾಗುವಷ್ಟು ಧೂಳು ಆವರಿಸಲಿದೆ. ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ಹಾಗೂ ತಾಲೂಕಿನ ಹ್ಯಾಡಾಳ್ ಗ್ರಾಮದ ಸರ್ಕಾರಿ ಶಾಲೆ ಬಳಿ ಧೂಳು ಮಕ್ಕಳ ಮೇಲೆ ರಾಚುತ್ತಿದೆ. ಮಳೆಗಾಲದಲ್ಲಿ ಕೆಸರು ಗುಂಡಿಯಿಂದ ಪಡಿಪಾಟಲು ಪಟ್ಟಿದ್ದ ಮಕ್ಕಳು ಈಗ ಧೂಳಿನ ಕಿರಿಕಿರಿ ಅನುಭವಿಸುವಂತಾಗಿದೆ. ರಸ್ತೆ ಬದಿಯಲ್ಲಿರುವ ಸಾಕಷ್ಟು ಮನೆಗಳು ಧೂಳಿನಿಂದ ಆವೃತವಾಗಿವೆ.
    ಅನಾರೋಗ್ಯಕ್ಕೆ ಕಾರಣ: ಉಸಿರಾಟದ ಸಮಸ್ಯೆ ಇರುವವರು ಧೂಳಿನ ಪರಿಣಾಮ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದ ರಸ್ತೆಯಲ್ಲಿ ಓಡಾಡಿದರೆ ಅನಾರೋಗ್ಯವೇ ಭಾಗ್ಯ ಎನ್ನುವಂತಾಗಿದೆ. ಧೂಳಿನ ಅಲರ್ಜಿ, ಉಸಿರಾಟದ ಸಮಸ್ಯೆ ಇರುವವರು ನಿತ್ಯ ಆಕ್ಸಿಜನ್ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಶ್ವಾಸಕೋಶ ಸಮಸ್ಯೆ ಅಸ್ತಮಾ, ಕೆಮ್ಮು ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವ ಆತಂಕ ಎದುರಾಗಿದೆ. 2 ವರ್ಷಗಳಿಂದ ಈ ಧೂಳಿನ ಅಭಿಷೇಕದಲ್ಲಿಯೇ ಕಚೇರಿ, ಮೆನೆ ಸೇರುತ್ತಿದ್ದೇವೆ.
    ರಸ್ತೆಗೆ ಬರಬೇಕು ಎಂದರೆ ಎಲ್ಲಿ ಆಸ್ಪತ್ರೆ ಸೇರಬೇಕಾಗುತ್ತದೊ ಎಂಬ ಆತಂಕದಿಂದ ಓಡಾಡುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಾಂತರ ಜಿಲ್ಲಾಧಿಕಾರಿ
    ಕಚೇರಿ ಸಿಬ್ಬಂದಿಯೊಬ್ಬರು ತಿಳಿಸಿದರು.
    ವ್ಯಾಪಾರಕ್ಕೂ ಅಡಚಣೆ: ಇದೇ ಮಾರ್ಗದಲ್ಲಿರುವ ಹೋಟೆಲ್, ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಳಿಗೆಗಳಿಗೆ ಧೂಳಿನ ಹಾವಳಿ ಕಂಟಕವಾಗಿ ಪರಿಣಮಿಸಿದೆ. ಧೂಳಿನಿಂದಾಗಿ ಹೋಟೆಲ್‌ಗಳಿಗೆ ಊಟಕ್ಕೆ ಜನರೇ ಬರುತ್ತಿಲ್ಲ ಎಂದು ವ್ಯಾಪಾರಿಗಳು ಅಲವತ್ತುಕೊಂಡರೆ, ಚಿಲ್ಲರೆ ಅಂಗಡಿಗಳನ್ನು ಧೂಳಿನಿಂದ ರಕ್ಷಣೆ ಮಾಡುವಲ್ಲಿ ಕಿರಾಣಿ ಅಂಗಡಿಯವರು ಬೇವರು ಹರಿಸುವಂತಾಗಿದೆ.

    ಧೂಳಿನಿಂದಾಗಿ ಉಸಿರಾಟದ ಸಮಸ್ಯೆ ಎದುರಾಗಬಹುದು. ಕಿವಿ, ಮೂಗು, ಚರ್ಮ, ಗಂಟಲು ಮತ್ತು ಶ್ವಾಸಕೋಶದ ಸಮಸ್ಯೆ ಕಾಡಬಹುದು. ನೆಗಡಿ, ಕೆಮ್ಮು ಸರ್ವೇ ಸಾಮಾನ್ಯ. ಹೀಗಾಗಿ ಆದಷ್ಟು ಧೂಳಿನಿಂದ ದೂರವಿದ್ದರೆ ಒಳ್ಳೆಯದು. ಡಸ್ಟ್ ಅಲರ್ಜಿ ಇರುವವರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಡುತ್ತದೆ.
    ಜತೆಗೆ ಸೈನಸೈಟಿಸ್, ಆಸ್ತಮಾ, ಅಲರ್ಜಿ, ನ್ಯುಮೋನಿಯಾ ಸೇರಿ ಕೆಲ ಕಾಯಿಗಳು ಹೆಚ್ಚಾಗಬಹುದು.
    ಗುಂಡಿಗಳಿಂದಾಗಿ ವಾಹನ ಸವಾರರಿಗೆ ಬೆನ್ನುಹುರಿ ಹಾಗೂ ಬೆನ್ನು ಮೂಳೆ ಸಮಸ್ಯೆ ಎದುರಾಗಬಹುದು.
    ಡಾ.ಮಂಜುಳಾದೇವಿ ಆಸ್ಪತ್ರೆ ವೈದ್ಯೆ

    ಪಕ್ಕದಲ್ಲೇ ಇರುವ ತರಕಾರಿ ತರಲು ಅಂಗಡಿಗೆ ಹೋಗಬೇಕಾದರೂ ಮಾಸ್ಕ್ ಧರಿಸಬೇಕು. ಕೋವಿಡ್ ಸಮಯದಲ್ಲೂ ಹೆಚ್ಚು
    ಮಾಸ್ಕ್ ಧರಿಸಿಲ್ಲ. ಆದರೇ ಧೂಳಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಬಳಸುವಂತಾಗಿದೆ. ಧೂಳಿನಿಂದ ಗ್ರಾಮದಲ್ಲಿ ಸಾಕಷ್ಟು ಮಂದಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
    ಸಿದ್ದಮ್ಮ ಗೃಹಿಣಿ, ನೆಲಮಂಗಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts