More

    ಜಡಿ ಮಳೆಗೆ ಮತ್ತೆ ತುಂಬಿಕೊಂಡ ಹುಬ್ಬಳ್ಳಿ ರಸ್ತೆಗಳು, ಧಾರಾಕಾರ ಮಳೆಗೆ ಜನಜೀವನ ಅಸ್ತವಸ್ತ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಕೆಲ ದಿನಗಳ ಬಿಡುವಿನ ನಂತರ ಶುಕ್ರವಾರ ಸುರಿದ ಜಡಿ ಮಳೆಯು ತಂಪೆರೆಯಿತು. ಧಾರಾಕಾರ ಮಳೆಯಿಂದಾಗಿ ಅನೇಕ ರಸ್ತೆಗಳು ಜಲಾವೃತವಾಗಿ ಜನಜೀವನ ಕೆಲಕಾಲ ಅಸ್ತವ್ಯಸ್ತವಾಯಿತು.

    ನವರಾತ್ರಿ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದ್ದು, ನಗರದಲ್ಲಿ ಜನದಟ್ಟಣೆ ಅಧಿಕವಾಗಿದೆ. ಶುಕ್ರವಾರ ಮಧ್ಯಾಹ್ನ ಹಾಗೂ ಸಂಜೆ ಹೊತ್ತಿಗೆ ಗಾಳಿಯೊಂದಿಗೆ ಗುಡುಗು ಸಿಡಿಲಿನ ಮಳೆ ಸುರಿಯಿತು.

    ಶುಕ್ರವಾರ ಒಂದೇ ದಿನ ಹುಬ್ಬಳ್ಳಿಯಲ್ಲಿ 15 ಎಂಎಂ, ಛಬ್ಬಿ 10.2 ಎಂಎಂ, ಶಿರಗುಪ್ಪಿ 38 ಎಂಎಂ ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 26.8 ಎಂಎಂ ಮಳೆಯಾಗಿದೆ. ಅಗಡಿ ಗ್ರಾಮದಲ್ಲಿ ಒಂದು ಮನೆ ಭಾಗಶಃ ಹಾನಿಯಾಗಿದೆ, ಇದು ನಿಂಗನಗೌಡ ಪಾಟೀಲ ಅವರಿಗೆ ಸೇರಿದ್ದು ಎಂದು ತಹಸೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.

    ಇದಲ್ಲದೇ ಗುರುವಾರ ರಾತ್ರಿ ಸುರಿದ ಮಳೆಗೆ ಹಳೇಹುಬ್ಬಳ್ಳಿಯ ಸತೀಶ ಎಂಬುವವರ ಮನೆ ಗೋಡೆ ಕುಸಿದಿದೆ. ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ಸೇರಿ ಒಟ್ಟು ಎಂಟು ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಿಆರ್​ಟಿಎಸ್ ಅವಾಂತರ:

    ಅವಳಿ ನಗರ ಮಧ್ಯದ ಬಿಆರ್​ಟಿಎಸ್ ಅಕ್ಕಪಕ್ಕದ ರಸ್ತೆಗಳು ಜಲಾವೃತವಾಗಿ ಸಾರ್ವಜನಿಕರು ಪರದಾಡಿದರು. ಬಿಆರ್​ಟಿಎಸ್ ಯೋಜನೆ ಅನುಷ್ಠಾನವಾದಾಗಿನಿಂದಲೂ ಮಳೆಗಾಲದಲ್ಲಿ ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ. ಪ್ರತಿ ಬಾರಿ ಮಳೆ ಆದಾಗಲೂ ಹಲವು ಜಂಕ್ಶನ್ ಹಾಗೂ ತಿರುವುಗಳಲ್ಲಿ ನಾಲ್ಕೈದು ಅಡಿ ನೀರು ನಿಂತು ಸಂಚಾರ ಸಂಕಟ ತಂದೊಡ್ಡುತ್ತದೆ.

    ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಹಾಗೂ ಚರಂಡಿ ನಿರ್ವಿುಸಿದ್ದರೂ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ನಿರ್ವಹಣೆ ಸರಿಯಾಗಿಲ್ಲ. ಈ ಎಲ್ಲ ಕಾರಣಗಳಿಗೆ ಮಳೆ ನೀರು ಚರಂಡಿಗೆ ಸೇರುವುದಿಲ್ಲ. ಅಲ್ಲಲ್ಲಿ ಬ್ಲಾಕ್ ಆಗುವುದರಿಂದ ಮಳೆ ನಿಂತು ತಾಸು, ಎರಡು ತಾಸಿನ ವರೆಗೂ ನೀರು ಹಾಗೆಯೇ ನಿಂತಿರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಸುರಿದ ಮಳೆ ಸಂದರ್ಭದಲ್ಲಿ ಇಲ್ಲಿಯ ಅಮರಗೋಳ ಕ್ರಾಸ್, ನವನಗರ ಕುವೆಂಪು ರಸ್ತೆ ಕ್ರಾಸ್​ಗಳು ಸಂಪೂರ್ಣ ಮುಳುಗಿ ಹೋಗಿದ್ದವು. ಮಳೆ ನಿಂತು ತಾಸಿನ ನಂತರವೂ ಜನರು ಆ ಕಡೆಯಿಂದ ಈ ಕಡೆ ದಾಟಲು ಹರಸಾಹಸ ಪಟ್ಟರು. ಬೈಕ್ ಸವಾರರು ತೊಂದರೆ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts