More

    ಜಗನ್ನಾಥರಾವ್ ಜೋಶಿ ಭಾಷಣ ನನಗೆ ಸ್ಪೂರ್ತಿ

    ಹುಬ್ಬಳ್ಳಿ: ಕಾಲೇಜು ದಿನಗಳಿಂದಲೇ ಜಗನ್ನಾಥರಾವ್ ಜೋಶಿ ಅವರೊಂದಿಗಿನ ಒಡನಾಟ ಹಾಗೂ ಅವರ ಪ್ರಖರ ಭಾಷಣಗಳೇ ನನಗೆ ರಾಜಕಾರಣಕ್ಕೆ ಸ್ಪೂರ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸ್ಮರಿಸಿದರು.

    ಶ್ರೀ ಜಗನ್ನಾಥರಾವ್ ಜೋಶಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್) ಕಾರ್ಯಾಲಯ ಕೇಶವ ಕುಂಜದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಗನ್ನಾಥರಾವ್ ಜೋಶಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಜೋಶಿ ಅವರು ಹಲವು ಬಾರಿ ನಮ್ಮ ಮನೆಗೆ ಆಗಮಿಸಿದ್ದರು. ಒಮ್ಮೆ ದುರ್ಗದ ಬೈಲ್​ನಲ್ಲಿ ಅವರ ಭಾಷಣ ಕೇಳಲು ನೂಕು ನುಗ್ಗಲು ಉಂಟಾಗಿತ್ತು. ಮಧ್ಯಪ್ರದೇಶದ ಜನ ಅವರನ್ನು ಗುರುತಿಸಿ ಗೆಲ್ಲಿಸಿದರು. ಆದರೆ, ನಮ್ಮ ಧಾರವಾಡ ಜಿಲ್ಲೆಯ ಜನ ಗುರುತಿಸದೇ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು. ಅವರ ಸವಿ ನೆನಪಿಗಾಗಿಯೇ ಬಿಜೆಪಿ ಕಚೇರಿಗೆ ಅವರ ಹೆಸರಿಡಲಾಗಿದೆ ಎಂದರು.

    ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಕುಟುಂಬ ಪ್ರಬೋಧನ ಕಾರ್ಯವಾಹ ಸು. ರಾಮಣ್ಣ ಮಾತನಾಡಿ, ಇಂದು ನಾನು ನಿಮ್ಮ ಮುಂದೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವುದಕ್ಕೆ ಜಗನ್ನಾಥರಾವ್ ಅವರ ಧ್ವನಿ ಮತ್ತು ಒಡನಾಟವೇ ಕಾರಣ. ಜಗನ್ನಾಥರಾವ್ ದುರ್ಗಾ ಮತ್ತು ಸರಸ್ವತಿ ಪುತ್ರರಾಗಿದ್ದರು. ಅವರ ಸಂಪರ್ಕಕ್ಕೆ ಬಂದ ಅನೇಕರು ಇಂದು ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಶ್ಯಾಮಪ್ರಸಾದ ಮುಖರ್ಜಿ ಭಾರತದ ಕೇಸರಿಯಾದರೆ, ಜಗನ್ನಾಥರಾವ್ ಜೋಶಿ ಕರ್ನಾಟಕದ ಕೇಸರಿಯಾದರು. ಅವರಿಗೆ ಗೌರವ ಕೊಡುವುದಾದರೆ ದೇಶವೇ ಕೇಸರಿಮಯವಾಗಬೇಕು ಎಂದರು.

    ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಗೋವಾ ವಿಮೋಚನೆಯಲ್ಲಿ ಜಗನ್ನಾಥರಾವ್ ಅವರ ಪಾತ್ರ ಪ್ರಮುಖವಾದದ್ದು. ಪೋರ್ಚ್​ಗೀಸರನ್ನು ಗೋವಾದಿಂದ ಹೊರಹಾಕಿ ಮಾತೃಭೂಮಿ ಉಳಿಸಿಕೊಳ್ಳಲು ಸೆರೆವಾಸ ಹಾಗೂ ಇತರ ಕಷ್ಟಗಳನ್ನು ಎದುರಿಸಿದ್ದರು ಎಂದರು.

    ಗೋವರ್ಧನರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವನ ಹೊಂಬಾಳಿ ವೈಯಕ್ತಿಕ ಗೀತೆ ಹಾಡಿದರು. ಜಿ.ಟಿ. ಕುಲಕರ್ಣಿ ವಂದಿಸಿದರು. ಲೋಕಹಿತ ಟ್ರಸ್ಟ್​ನ ಶ್ರೀಧರ ನಾಡಿಗೇರ, ಸುಧಾಕರ, ಶಿವಾನಂದ ಅವಟಿ, ಅಲಕಾತಾಯಿ ಮತ್ತಿತರರು ಉಪಸ್ಥಿತರಿದ್ದರು.

    ಚೀನಾ ಬಗ್ಗೆ ಅಂದೇ ಎಚ್ಚರಿಸಿದ್ದರು

    ಜಗನ್ನಾಥರಾವ್ ಅವರು 1960- 70ರ ದಶಕದಲ್ಲೇ ಚೀನಾದ ಕುತಂತ್ರ ರಾಜಕಾರಣವನ್ನು ನೆಹರು ಸರ್ಕಾರಕ್ಕೆ ತಿಳಿಸಿ ತಿದ್ದಿಕೊಳ್ಳಲು ಸಲಹೆ ನೀಡಿದ್ದರು. ದೂರದೃಷ್ಟಿ, ಆಳವಾದ ಜ್ಞಾನ, ಉತ್ಕೃಷ್ಟ ವಿದೇಶಿ ನೀತಿಯನ್ನು ಅವರು ಮೈಗೂಡಿಸಿಕೊಂಡಿದ್ದರು. ವಿರೋಧ ಪಕ್ಷದವರೂ ಅವರ ಭಾಷಣವನ್ನು ಕದ್ದುಮುಚ್ಚಿ ಕೇಳುತ್ತಿದ್ದರು ಎಂದು ಸಚಿವ ಶೆಟ್ಟರ್ ಸ್ಮರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts