More

    ಎದೆಗುಂದದೆ ಕರೊನಾ ಎದುರಿಸಬೇಕಿದೆ

    ಹುಬ್ಬಳ್ಳಿ: ಸಂಕಟ ಬಂದಾಗ ಎದೆಗುಂದದೆ ಎದುರಿಸಿ, ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳುವುದರಲ್ಲಿ ಪುರುಷಾರ್ಥ ಇದೆ. ಹಿಂದೆ ಪ್ರಕೃತಿ ವಿಕೋಪಗಳಾಗಿದ್ದವು. ದೇಶದಲ್ಲಿ ಅನ್ಯರ ಆಡಳಿತ ಇದ್ದಾಗ ಪ್ಲೇಗ್ ಬಂದಿತ್ತು. ಅವನ್ನೆಲ್ಲ ಎದುರಿಸಿರುವ ನಾವು ಈಗ ಕೋವಿಡ್ ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಉತ್ತರ ಕರ್ನಾಟಕದ 9 ಕಡೆ ಕೋವಿಡ್ ಕಾಳಜಿ ಕೇಂದ್ರ ಆರಂಭಿಸಿದೆ ಎಂದು ಆರ್​ಎಸ್​ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

    ಸೇವಾ ಭಾರತಿ ಟ್ರಸ್ಟ್​ನವರು ಕೆಎಲ್​ಇ ಸಂಸ್ಥೆ ಹಾಗೂ ಜಿತೋ (ಜೈನ್ ಇಂಟರನ್ಯಾಷನಲ್ ಟ್ರೇಡ್ ಆರ್ಗನೈಜೇಷನ್) ಬೆಂಬಲದಿಂದ ಇಲ್ಲಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ನಡೆಸುತ್ತಿರುವ ಕರೊನಾ ಸೋಂಕಿತರ ಕಾಳಜಿ ಕೇಂದ್ರಕ್ಕೆ ಕ್ಷಮತಾ ಸೇವಾ ಸಂಸ್ಥೆಯವರು ನೀಡಿದ 5 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಬುಧವಾರ ಸಂಜೆ ಹಸ್ತಾಂತರಿಸಿಕೊಂಡು ಅವರು ಮಾತನಾಡಿದರು.

    ಎಲ್ಲವನ್ನೂ ಸರ್ಕಾರದಿಂದಲೇ ಅಪೇಕ್ಷಿಸುವ ದುರಭ್ಯಾಸವನ್ನು ಹಿಂದೆ ಆಳಿದವರು ಬೆಳೆಸಿದ್ದಾರೆ. ಟೀಕೆ ಟಿಪ್ಪಣೆ ಮಾಡಲು ಶಬ್ದಗಳಷ್ಟೇ ಸಾಕಾಗುತ್ತವೆ ಎಂದು ಸಾಂರ್ದಭಿಕವಾಗಿ ಹೇಳಿದ ಅವರು, ಸೇವಾ ಭಾರತಿಯ ಕಾಳಜಿ ಕೇಂದ್ರಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಮಾಜವೂ ನೆರವಾಗುತ್ತಿದೆ. ಆತ್ಮವಿಶ್ವಾಸದಿಂದ ಕೆಲಸ ಮಾಡುವ ಗುಣ ನಮ್ಮದು. ಸಂಕಷ್ಟದ ಪರಿಸ್ಥಿತಿಯನ್ನು ಗೆಲ್ಲಬೇಕು. ವಿಜಯದ ಆರಾಧನೆ ನಡೆಯಬೇಕು ಎಂಬುದು ನಮ್ಮ ಪ್ರಾರ್ಥನೆಯಾಗಿದೆ ಎಂದರು.

    ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಹಸ್ತಾಂತರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೆಎಲ್​ಇ ಸಂಸ್ಥೆ ಹಾಗೂ ಇತರರ ಸಹಕಾರದಲ್ಲಿ ಸೇವಾ ಭಾರತಿ ಟ್ರಸ್ಟ್ ಅತ್ಯುತ್ತಮ ರೀತಿಯಲ್ಲಿ ಕಾಳಜಿ ಕೇಂದ್ರವನ್ನು ನಡೆಸುತ್ತಿದೆ. ಸದ್ಯದಲ್ಲೇ ಇನ್ನೂ 5 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಕ್ಷಮತಾ ಸಂಸ್ಥೆಯಿಂದ ಈ ಕೇಂದ್ರಕ್ಕೆ ಒದಗಿಸಲಾಗುವುದು ಎಂದರು.

    ಕೆಎಲ್​ಇ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್, ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ, ಆರ್​ಎಸ್​ಎಸ್ ಪ್ರಚಾರಕ ಸುಧಾಕರ, ಶ್ರೀಧರ ನಾಡಗೇರ, ಇತರರು ಇದ್ದರು.

    ಪ್ರೊ. ಸಂದೀಪ ಬೂದಿಹಾಳ ಸ್ವಾಗತಿಸಿದರು. ಕಿರಣ ಗುಡ್ಡದಕೇರಿ ಪರಿಚಯಿಸಿದರು. ಸೇವಾ ಭಾರತಿ ಟ್ರಸ್ಟ್ ಪ್ರಾಂತ ಅಧ್ಯಕ್ಷ ಡಾ. ರಘು ಅಕಮಂಚಿ ಪ್ರಾಸ್ತಾವಿಕ ಮಾತನಾಡಿದರು. ಮಧುಸೂದನ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts