More

    ಜಂಕ್‌ಫುಡ್ ಬದಲಿಗೆ ಸೇವಿಸಿ ಪೌಷ್ಟಿಕ ಆಹಾರ  – ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಸಲಹೆ -ಪೋಷಣ್ ಮಾಸಾಚರಣೆ

    ದಾವಣಗೆರೆ: ಜನರು ಬೀದಿಬದಿಯ ಆಹಾರ, ಜಂಕ್ ಫುಡ್ ಬದಲಾಗಿ ನಿಸರ್ಗದಲ್ಲಿ ಕಾಲಕಾಲಕ್ಕೆ ದೊರೆಯುವ ಹಣ್ಣು-ತರಕಾರಿಗಳನ್ನು ತಪ್ಪದೇ ಸೇವಿಸಿ ಪೌಷ್ಟಿಕತೆಯ ಮಟ್ಟ ಸುಧಾರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ತಿಳಿಸಿದರು.
    ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ತಾಯಂದಿರು ತಯಾರಿಸುವ ಪೌಷ್ಟಿಕ ಆಹಾರದ ಮೇಲೆ ಕುಟುಂಬದ ಸ್ವಾಸ್ಥ್ಯ ಅವಲಂಬಿತವಾಗಿದೆ. ಹಣ್ಣು- ತರಕಾರಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ರೋಗಗಳು ಕಾಣಿಸಿಕೊಂಡಾಗಲೂ ತ್ವರಿತವಾಗಿ ಗುಣಮುಖರಾಗಬಹುದು. ಊಟದ ವಿಷಯದಲ್ಲಿ ಲಿಂಗ ತಾರತಮ್ಯ ಮಾಡಬಾರದು ಎಂದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ ಅಪೌಷ್ಟಿಕತೆಯಿಂದಾಗಿ ಅನಾರೋಗ್ಯ ಕಾಡಲಿದೆ. ವಯಸ್ಸು-ಲಿಂಗ ಭೇದವಿಲ್ಲದೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಗರ್ಭಿಣಿ ಪಡೆಯುವ ಪೌಷ್ಟಿಕಾಂಶದ ಆಹಾರದ ಮೇಲೆ ಹುಟ್ಟುವ ಮಗುವಿನ ಆರೋಗ್ಯದ ಮಟ್ಟ ನಿರ್ಧಾರವಾಗಲಿದೆ ಎಂದು ಹೇಳಿದರು.
    ರಕ್ತಹೀನತೆಯು ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಲ್ಲಿ ಜ್ವಲಂತ ಸಮಸ್ಯೆಯಾಗಿದೆ. ನಿತ್ಯ ಸಮತೋಲನ ಆಹಾರ ಸೇವನೆಯಿಂದ ರಕ್ತಹೀನತೆ ತಡೆಗಟ್ಟಬಹುದು. ಏಕದಳ, ದ್ವಿದಳ ಧಾನ್ಯಗಳು, ಹಸಿರು ಸೊಪ್ಪು, ತರಕಾರಿ, ಹಣ್ಣು-ಹಂಪಲು ಎಲ್ಲರಿಗೂ ಅತ್ಯಗತ್ಯ ಎಂದರು.
    ಮಕ್ಕಳ ತಜ್ಞೆ ಡಾ. ಸುಧಾ ಪಾಟೀಲ್ ಮಾತನಾಡಿ ಹುಟ್ಟಿದ ಮಗು ಬೆಳೆದು ತಾಯಿಯಾಗುವವರೆಗೂ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟದ ಬಗ್ಗೆ ಕಾಳಜಿ ವಹಿಸಬೇಕು. ಮಗು ಜನಿಸಿದ ತಕ್ಷಣ ನೀಡುವ ತಾಯಿಯ ಹಾಲೇ ಮೊದಲ ರೋಗ ನಿರೋಧಕ ಚುಚ್ಚುಮದ್ದು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದರು.
    ಇದೇ ವೇಳೆ ವಿವಿಧ ಆಹಾರ ಪದಾರ್ಥಗಳಿಂದ ತಯಾರಿಸಿದ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಪದರ್ಶಿಸಲಾಯಿತು.
    ದಾವಣಗೆರೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಸ್.ಅಭಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಶೋಭಾ ವಿ. ಪಟೇಲ್, ರತ್ನಮ್ಮ ರಂಗಣ್ಣನವರ್, ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts