More

    ಛಾಯಾಗ್ರಾಹಕರಿಗೆ ಕಲ್ಪಿಸಿ ಪಿಂಚಣಿ  – ಬಸವಪ್ರಭು ಸ್ವಾಮೀಜಿ -ವಿಶ್ವ ಛಾಯಾಗ್ರಹಣ ದಿನಾಚರಣೆ

    ದಾವಣಗೆರೆ: ರಾಜ್ಯ ಸರ್ಕಾರ, ಛಾಯಾಗ್ರಾಹಕರಿಗೆ ಪಿಂಚಣಿ ಅಥವಾ ಇತರ ಪ್ರೋತ್ಸಾಹಕ ಯೋಜನೆಗಳನ್ನು ಕಲ್ಪಿಸಬೇಕು ಎಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಆಗ್ರಹಿಸಿದರು.
    ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ಸ್‌ ಸಂಘದಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಗತ್ತು ಹಾಗೂ ಪ್ರಕೃತಿಯನ್ನು ಸೆರೆ ಹಿಡಿಯುವ ಛಾಯಾಗ್ರಾಹಕರ ಬದುಕಿನಲ್ಲೂ ಕಷ್ಟ-ನಷ್ಟಗಳಿವೆ. ಹೀಗಾಗಿ ಸರ್ಕಾರ ಸೂಕ್ತ ಯೋಜನೆಯನ್ನು ಅವರಿಗೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
    ವ್ಯಕ್ತಿಯ ನಿಜವಾದ ಶೃಂಗಾರವೇ ನಗು. ಎಲ್ಲರನ್ನು ಸ್ಲೈಲ್ ಪ್ಲೀಸ್ ಎನ್ನುತ್ತ ನಗಿಸುತ್ತಲೇ, ಹಸಿವನ್ನೂ ಲೆಕ್ಕಿಸದೇ ನಿತ್ಯದ ಕಾಯಕ ನಿಷ್ಠೆ ಹೊಂದಿರುವ ಛಾಯಾಗ್ರಾಹಕರು ಸಹಜವಾಗಿ ಎಲ್ಲರನ್ನೂ ಎಚ್ಚರಗೊಳಿಸುತ್ತಾರೆ. ಛಾಯಾಚಿತ್ರಗಳಿಂದಾಗಿಯೇ ಅನೇಕ ಸಂಶೋಧನೆಗಳು ನಡೆದಿವೆ. ಛಾಯಾಗ್ರಾಹಕರು ಆಧುನಿಕ ಇತಿಹಾಸ ತಜ್ಞರು ಎಂದು ಬಣ್ಣಿಸಿದರು.
    ಛಾಯಾಗ್ರಾಹಕರು ಎಲ್ಲರ ಸುಂದರ ನಗುವಿನ ಕ್ಷಣಗಳನ್ನು ಸೆರೆ ಹಿಡಿಯುತ್ತಾರೆ. ಮಹಾತ್ಮಗಾಂಧೀಜಿ, ಭಗತ್‌ಸಿಂಗ್, ಸುಭಾಸ್‌ಚಂದ್ರಬೋಸ್ ಮೊದಲಾದ ಸ್ವಾತಂತ್ರೃ ಪುರುಷರ ದರ್ಶನ ಮಾಡಿಸಿದವರು ಫೋಟೋಗ್ರಾಫರ್‌ಗಳು. 12ನೇ ಶತಮಾನದಲ್ಲಿಯೂ ಕ್ಯಾಮರಾ ಇದ್ದಿದ್ದರೆ ಬಸವಣ್ಣ ಹಾಗೂ ಶಿವಶರಣರ ಭಾವಚಿತ್ರಗಳನ್ನು ಕಾಣಬಹುದಿತ್ತು ಎಂದರು.
    ಒಂದೊಂದು ಛಾಯಾಚಿತ್ರ ಕೂಡ ಒಂದೊಂದು ಇತಿಹಾಸವನ್ನು ಹೇಳುತ್ತದೆ. ಅವು ನಮಗೆ ದೇಶ ಹಾಗೂ ಪ್ರಕೃತಿ ಸೇವೆಗೆ ಸ್ಫೂರ್ತಿ ತುಂಬಲಿವೆ. ಹೋಟೆಲ್ ತಿಂಡಿ ನಡುವೆಯೂ ಅಮ್ಮನ ಕೈ ಅಡುಗೆಯೇ ಶ್ರೇಷ್ಠ. ಅದರಂತೆ ಇಂದು ಮೊಬೈಲ್‌ಗಳಲ್ಲಿ ಫೋಟೋ ತೆಗೆಯಲು ಅವಕಾಶವಿದ್ದರೂ, ಗುಣಮಟ್ಟದ ಭಾವಚಿತ್ರಗಳಿಗಾಗಿ ಛಾಯಾಗ್ರಾಹಕರು ಅತ್ಯವಶ್ಯಕ ಎಂದು ಹೇಳಿದರು.
    ಹಿರಿಯ ಛಾಯಾಗ್ರಾಹಕ ಎಚ್.ಬಿ.ಮಂಜುನಾಥ್ ಅವರಿಗೆ ‘ಛಾಯಾ ಚಾಣಕ್ಯ’, ಕರ್ನಾಟಕ ಮಹಿಳಾ ಫೋಟೋಗ್ರಾಫರ್ಸ್‌ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷೆ ಆರ್. ಪ್ರತಿಭಾರಿಗೆ ‘ಛಾಯಾ ಸೃಷ್ಟಿ’, ಹೊಸಪೇಟೆಯ ಖಾಜಾಪೀರ್ ಅವರಿಗೆ ‘ಛಾಯಾ ಶೇಷ್ಠ’, ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ಸ್‌ ಸಂಘದ ಅಧ್ಯಕ್ಷ ಎಂ. ಮನು ಅವರಿಗೆ ‘ಛಾಯಾ ಶಿಲ್ಪಿ’ ಹಾಗೂ ಗ್ರಾಮಾಂತರ ವಿಭಾಗದ ಅಧ್ಯಕ್ಷ ಎಸ್. ರಾಜಶೇಖರ ಕೊಂಡಜ್ಜಿ ಅವರಿಗೆ ‘ಛಾಯಾ ಬಂಧು’ ಬಿರುದಿನೊಂದಿಗೆ ಗೌರವಿಸಲಾಯಿತು.
    ಛಾಯಾಗ್ರಹಣದ ವಿವಿಧ ವಿಭಾಗಗಳಲ್ಲಿ ಗಜಾನನ ಭೂತೆ, ರೇಷ್ಮಾ ಹಂಸರಾಜ್ ಸೇರಿ ಹಲವರಿಗೆ ದಿ ಬೆಸ್ಟ್ ಪ್ರಶಸ್ತಿ ವಿತರಿಸಲಾಯಿತು . ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.
    ಖಾಜಾಪೀರ್ ಮಾತನಾಡಿ ಛಾಯಾಗ್ರಹಣ ಕ್ಷೇತ್ರದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ವೇಗ ವಾಯಾಗ್ರಾಹಕರ ಮುಂದಿನ ಭವಿಷ್ಯದ ಚಿಂತೆಯನ್ನೂ ಹೆಚ್ಚಿಸಿದೆ. ಹೊಸ ಕ್ಯಾಮರಾಗಳು ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಾವು ಬದುಕುತ್ತಿದ್ದೇವಾ ಅಥವಾ ಕ್ಯಾಮರಾ ಕಂಪನಿಗಳನ್ನು ಸಾಕುತ್ತಿದ್ದೇವೆಯೇ ಎಂಬ ಆತಂಕ ಕಾಡುತ್ತಿದೆ. ಛಾಯಾಗ್ರಾಹಕರು ಕೂಡ ಬಂಡವಾಳ ಹೂಡುವ ಕಡೆಗೆ ವಹಿಸುವ ಆಸಕ್ತಿಯನ್ನು ಕೌಶಲ ಕಲಿಯುವತ್ತ ತೋರುತ್ತಿಲ್ಲ ಎಂದು ವಿಷಾದಿಸಿದರು.
    ಕಾರ್ಯಕ್ರಮದಲ್ಲಿ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ಸ್‌ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಎಚ್. ಪಟೇಲ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಸುರಭಿ ಶಿವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts