More

    ಚುನಾವಣೆ ಯಲ್ಲಿ ಪಕ್ಷೇತರರ ‘ನಾಮಧೇಯ’ ತಂತ್ರ

    ಸದೇಶ್ ಕಾರ್ಮಾಡ್ ಮೈಸೂರು
    ಚುನಾವಣೆ ಅಂದರೆ ತಂತ್ರ, ಪ್ರತಿತಂತ್ರಗಳು ಸರ್ವೇ ಸಾಮಾನ್ಯ. ಪ್ರತಿಯೊಂದು ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಮತದಾರರನ್ನು ತಬ್ಬಿಬ್ಬುಗೊಳಿಸಲು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಹೆಸರನ್ನು ಹೋಲುವ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ. ಈ ಬಾರಿಯೂ ಪ್ರಮುಖ ಅಭ್ಯರ್ಥಿಗಳ ಹೆಸರು ಹೊಂದಿರುವ ಪಕ್ಷೇತರರು ಕಣಕ್ಕಿಳಿದ್ದಾರೆ.

    ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಕೂಡ ಅತ್ಯಂತ ಮುಖ್ಯ. ಕೇವಲ ಒಂದು ಮತ ಅಭ್ಯರ್ಥಿಯ ಸೋಲು ಗೆಲುವನ್ನು ನಿರ್ಧರಿಸುತ್ತದೆ. ಹೀಗಾಗಿ ಯಾವುದೇ ಮತವನ್ನು ಕಡೆಗಣಿಸುವಂತಿಲ್ಲ. 2004ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಜೆಡಿಎಸ್‌ನ ಎ.ಆರ್. ಕೃಷ್ಣಮೂರ್ತಿ ವಿರುದ್ಧ ಕೇವಲ 1 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಪಕ್ಷೇತರರನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಒಂದುವೇಳೆ ಪಕ್ಷೇತರರ ಹೆಚ್ಚು ಮತ ಪಡೆದರೆ ಫಲಿತಾಂಶವೇ ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಮತದಾರರನ್ನು ತಬ್ಬಿಬ್ಬುಗೊಳಿಸಲು ಹಾಗೂ ಪ್ರಮುಖ ಅಭ್ಯರ್ಥಿಯನ್ನು ಸೋಲಿಸಲು ಅವರ ಹೊಸರನ್ನು ಹೋಲುವ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ.

    ಪ್ರಮುಖ ಅಭ್ಯರ್ಥಿ ಹೆಸರನ್ನು ಹೋಲುವ ಪಕ್ಷೇತರ ಅಭ್ಯರ್ಥಿಗಳು ಗಣನೀಯ ಪ್ರಮಾಣದಲ್ಲಿ ಮತ ಪಡೆಯದೆ ಇದ್ದರೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ‘ನಾಮಧೇಯ’ ಪ್ರಯೋಗ ನಡೆದ ಎರಡು ಸಂದರ್ಭ ಕಾಕತಾಳಿಯ ಎಂಬಂತೆ ಎರಡು ಬಾರಿಯೂ ಪ್ರಬಲ ಅಭ್ಯರ್ಥಿಗಳು ಸೋಲಿನ ಕಹಿ ಕೂಡ ಅನುಭವಿಸಿದ್ದಾರೆ. ಎರಡು ಬಾರಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಎಸ್.ಎ. ರಾಮದಾಸ್ 2004ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದರು. ಅದೇ ಚುನಾವಣೆಯಲ್ಲಿ ರಾಮದಾಸ್ ಎಂಬ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಎಸ್.ಎ. ರಾಮದಾಸ್‌ಗೆ ಜೆಡಿಎಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಎದುರು ಸೋಲುಂಟಾಗಿ ಹ್ಯಾಟ್ರಿಕ್ ಕನಸ್ಸು ಭಗ್ನಗೊಂಡಿತು. ಎಂ.ಕೆ. ಸೋಮಶೇಖರ್ ಪ್ರಥಮ ಬಾರಿಗೆ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ಪಕ್ಷೇತರ ಅಭ್ಯರ್ಥಿ ರಾಮದಾಸ್ ಹೆಚ್ಚೇನು (379) ಮತಗಳನ್ನು ಪಡೆಯಲಿಲ್ಲ. ಕಣದಲ್ಲಿದ್ದ ಒಟ್ಟು 8 ಅಭ್ಯರ್ಥಿಗಳ ಪೈಕಿ 7ನೇ ಸ್ಥಾನ ಪಡೆದುಕೊಂಡರು.

    ಸೋಮಶೇಖರ್‌ಗೆ ಸೋಲು


    2004ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಎಂ.ಕೆ. ಸೋಮಶೇಖರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಈ ಸಂದರ್ಭ ಎಂ. ಸೋಮಶೇಖರ್ ಹೆಸರಿನ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಪಕ್ಷೇತರ ಅಭ್ಯರ್ಥಿ ಎಂ. ಸೋಮಶೇಖರ್ ಕೂಡ ಹೆಚ್ಚಿನ ಮತ (1107) ಪಡೆಯದೆ ಇದ್ದರೂ ಆ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್‌ಗೆ ಸೋಲುಂಟಾಯಿತು. ಪಕ್ಷೇತರ ಅಭ್ಯರ್ಥಿ ಎಂ. ಸೋಮಶೇಖರ್ ಒಟ್ಟು 10 ಅಭ್ಯರ್ಥಿಗಳ ಪೈಕಿ 4ನೇ ಸ್ಥಾನ ಪಡೆದರು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ‘ನಾಮಧೇಯ’ ರಾಜಕೀಯದ ಮಾದರಿಯಲ್ಲಿಯೇ ವಿವಿಧ ಕ್ಷೇತ್ರಗಳಲ್ಲೂ ರಾಜಕೀಯ ತಂತ್ರಗಾರಿಕೆ ನಡೆದರೂ ಕೃಷ್ಣರಾಜ ಕ್ಷೇತ್ರದ ಮಾದರಿಯಲ್ಲಿ ಪ್ರಬಲ ಅಭ್ಯರ್ಥಿಗ ಳಿಗೆ ಸೋಲುಂಟಾಗಲಿಲ್ಲ.

    ಮಂಜುನಾಥ್ ಸ್ಪರ್ಧೆ


    2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಪಿ. ಮಂಜುನಾಥ್ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿ ದಾಗ ಮಂಜುನಾಥ್ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಪಕ್ಷೇತರರಾಗಿ ಕಣಕ್ಕಿಳಿದರೂ 326 ಮತಗಳನ್ನು ಪಡೆದು ಒಟ್ಟು 13 ಅಭ್ಯರ್ಥಿಗಳ ಪೈಕಿ 12ನೇ ಸ್ಥಾನ ಪಡೆದರು. ಮಂಜುನಾಥ್ ಹೆಸರಿನ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿದರೂ ಕ್ಷೇತ್ರದ ಮತದಾರರು ಮಾತ್ರ ಗೊಂದಲಕ್ಕೆ ಒಳಗಾಗದೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಅವರನ್ನು ಗೆಲ್ಲಿಸಿದರು.

    ಮತ್ತೊಬ್ಬ ಸಿದ್ದರಾಮಯ್ಯ ಸ್ಪರ್ಧೆ


    2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಕಣಕ್ಕಿಳಿದರು. ಸಿದ್ದರಾಮಯ್ಯ ಹೆಸರಿನ ವ್ಯಕ್ತಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 533 ಮತಗಳನ್ನು ಪಡೆದು ಒಟ್ಟು 27 ಅಭ್ಯರ್ಥಿಗಳ ಪೈಕಿ 15ನೇ ಸ್ಥಾನ ಪಡೆದರು.

    2013ರ ಚುನಾವಣೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಾಕಷ್ಟು ರಂಗೇರಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್.ಎ. ರಾಮದಾಸ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಕೆ. ಸೋಮಶೇಖರ್, ಕೆಜೆಪಿ ಅಭ್ಯರ್ಥಿಯಾಗಿ ಎಚ್.ವಿ. ರಾಜೀವ್ ಕಣಕ್ಕಿಳಿದರು. ಈ ಮೂವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟ ಸಂದರ್ಭ ಪಿ.ವಿ. ರಾಮದಾಸ್, ಎಂ. ಸೋಮಶೇಖರ್ ಮತ್ತು ಎಂ.ಯು. ರಾಜೀವ್ ಹೆಸರಿನ ಮೂವರು ವ್ಯಕ್ತಿಗಳು ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ಆ ನಂತರ ಈ ಮೂವರು ಪಕ್ಷೇತರರು ನಾಮಪತ್ರ ಹಿಂಪಡೆದುಕೊಂಡರು.

    2018ರ ಚುನಾವಣೆಯಲ್ಲಿ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅವರ ವಿರುದ್ಧ ಆರ್‌ಪಿಎಸ್‌ಎನ್ ಅಭ್ಯರ್ಥಿ ಮಹದೇವ ಸ್ಪರ್ಧಿಸಿ 174 ಮತಗಳನ್ನು ಪಡೆದು ಕಣದಲ್ಲಿ ಕೊನೆಯ ಸ್ಥಾನ (11) ಪಡೆದರು.

    ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್. ಸಿದ್ದೇಗೌಡ ಕಣಕ್ಕಿಳಿದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸಿದ್ದೇಗೌಡ ಸ್ಪರ್ಧಿಸಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಹರೀಶ್ ಗೌಡ ಅಖಾಡಕ್ಕೆ ಇಳಿದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಎಂ.ಎನ್.ಹರೀಶ್ ಗೌಡ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ನಾಮಪತ್ರ ತಿರಸ್ಕೃತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts