More

    ಚುನಾವಣೆ ಕಣಕ್ಕೆ ಹೋರಾಟಗಾರರು!

    ಬೆಳಗಾವಿ: ಗಡಿ ವಿವಾದ, ಭಾಷೆ ಆಧಾರದ ಮೇಲೆ ಚುನಾವಣೆಗೆ ಖ್ಯಾತಿ ಹೊಂದಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲು ಕನ್ನಡ ಪರ ಸಂಘಟನೆಗಳು ಸಿದ್ಧತೆ ಆರಂಭಿಸಿವೆ. ಅಲ್ಲದೆ, ಇದೇ ಮೊದಲ ಬಾರಿಗೆ ಎಂಇಎಸ್‌ಗೆ ಸಡ್ಡು ಹೊಡೆಯಲು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇರಾದೆಯಲ್ಲಿವೆ.

    ಪಾಲಿಕೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಚಿಹ್ನೆ ಅಡಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕನ್ನಡಿಗರ ಮತಗಳು ಹಂಚಿ ಹೋಗಿ ಪಾಲಿಕೆಯಲ್ಲಿ ಕನ್ನಡ ಸದಸ್ಯರ ಸಂಖ್ಯೆ ಇಳಿಕೆಯಾಗುತ್ತದೆ. ಹೀಗಾಗಿ ಎಂಇಎಸ್‌ಗೆ ಎದುರಾಳಿಯಾಗಿ ಕನ್ನಡ ಪರ ಸಂಘಟನೆಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿವೆ. ಅಲ್ಲದೆ, 58 ವಾರ್ಡ್‌ಗಳಲ್ಲಿ ಕನ್ನಡ ಮತದಾರು ಎಷ್ಟಿದ್ದಾರೆಂಬ ಮಾಹಿತಿ ಸಂಗ್ರಹಿಸುತ್ತಿವೆ.

    58 ಸದ್ಯರ ಬಲದ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಗಡಿ ವಿವಾದ ಮತ್ತು ಭಾಷೆಯ ಆಧಾರದ ಮೇಲೆಯೇ ಚುನಾವಣೆಗಳು ನಡೆದುಕೊಂಡು ಬರುತ್ತಿವೆ. ಹೀಗಾಗಿ, ಇಲ್ಲಿ ಭಾಷಾವಾರು ಆಧಾರದ ಮೇಲೆ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮೌನವಾಗಿರುತ್ತಾರೆ. ಇದರಿಂದಾಗಿಯೇ ಗಡಿ, ಭಾಷಾ ವಿವಾದಿಂದ ಪಾಲಿಕೆ ಸದಾ ಸುದ್ದಿಯಲ್ಲಿರುತ್ತದೆ.

    ಪಾಲಿಕೆಗೆ 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾರೂ ರಾಜಕೀಯ ಪಕ್ಷಗಳ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಕಣಕ್ಕಿಳದಿದ್ದ ಎಲ್ಲರೂ ಬೆಂಬಲಿತರೇ ಇದ್ದರು. 32 ಎಂಇಎಸ್ ಬೆಂಬಲಿತ ಸದಸ್ಯರು ಹಾಗೂ 26 ಕನ್ನಡ ಮತ್ತು ಉರ್ದು ಭಾಷಿಕ ಸದಸ್ಯರು ಆಯ್ಕೆಯಾಗಿದ್ದರು. ಮೊದಲು ನಾಲ್ಕು ಅವಧಿಗಳಿಗೆ ಎಂಇಎಸ್ ಬೆಂಬಲಿತರೇ ಮೇಯರ್ ಹಾಗೂ ಉಪಮೇಯರ್ ಆಗಿದ್ದರು. ಆದರೆ, ಐದು ವರ್ಷದ ಆಡಳಿತಾವಧಿಯ ಕೊನೆಯ ಅವಧಿಯಲ್ಲಿ ಮೀಸಲಾತಿ ಬಲದಿಂದಾಗಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಒಲಿದಿತ್ತು. ಇದು ಪಾಲಿಕೆ ಇತಿಹಾಸಲ್ಲಿಯೇ ಕನ್ನಡಿಗರೊಬ್ಬರು ಮೇಯರ್ ಆಗಿದ್ದರು. ಮತ್ತೊಂದೆಡೆ, ಎಂಇಎಸ್ ಬೆಂಬಲಿತ ಸದಸ್ಯೆ ಮಧುಶ್ರೀ ಪೂಜಾರಿ ಉಪ ಮೇಯರ್ ಆಗಿದ್ದರು.

    ಈ ಬಾರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷ ಮುಖಂಡರು ಚಿಹ್ನೆಯ ಆಧಾರದ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸುತ್ತಿರುವುದರಿಂದ ಮೇಲ್ನೋಟಕ್ಕೆ ಕನ್ನಡಿಗರಿಗೆ ಹಿನ್ನಡೆಯಾಗುತ್ತದೆ. ಅಲ್ಲದೆ, ಪಕ್ಷಗಳು ತಮ್ಮ ಮತಬ್ಯಾಂಕ್ ಗಟ್ಟಿಗೊಳಿಸುವ ಸಲುವಾಗಿ ಮರಾಠಿ ಭಾಷಿಕರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕನ್ನಡಪರ
    ಧ್ವನಿಗಳು ಪಾಲಿಕೆಯಲ್ಲಿ ಆಡಳಿತ ನಡೆಸಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ತಿಳಿಸಿದ್ದಾರೆ.

    ಕಾಂಗ್ರೆಸ್, ಬಿಜೆಪಿಗೆ ಉಭಯ ಭಾಷಿಕರೂ ಬೇಕು!: ಮಹಾನಗರ ಪಾಲಿಕೆಯ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 40ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಮರಾಠಿಗರ ಪ್ರಾಬಲ್ಯ ಹೊಂದಿರುವ ಕಾರಣ ಈ ಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬಲಿಷ್ಠವಾಗಿದೆ. ಹಾಗಾಗಿ ಕನ್ನಡ ಮತ್ತು ಮರಾಠಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ಕಷ್ಟ. ಯಾರೇ ಸ್ಪರ್ಧಿಸಿದರೂ ಮರಾಠಿಗರ ಬೆಂಬಲ ಅವಶ್ಯಕವಾಗಿದೆ. ನಮಗೆ ಎರಡೂ ಭಾಷಿಕರು ಬೇಕು ಎಂದು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

    ಕನ್ನಡಿಗರ ಮತ ವಿಭಜನೆಯಿಂದಾಗಿಯೇ ಪಾಲಿಕೆಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯರು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಕನ್ನಡಿಗರೆಲ್ಲರೂ ಒಂದಾದರೆ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬಹುದು. ಅದಕ್ಕೆ ಸರ್ಕಾರದ ಸಹಕಾರ ಮುಖ್ಯವಾಗಿದೆ. 2000ನೇ ಅವಧಿಯಲ್ಲಿ ಸರ್ವಭಾಷಿಕ ವಿಚಾರ ವೇದಿಕೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಚುನಾವಣೆ ಎದುರಿಸಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ. ಆದರೆ, ಈ ಬಾರಿ ಪಕ್ಷಗಳು ಚಿಹ್ನೆ ಆಧಾರದ ಮೇಲೆ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಕನ್ನಡಪರ ಸಂಘಟನೆಗಳು ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಸಲು ಚರ್ಚಿಸುತ್ತಿವೆ.
    | ಅಶೋಕ ಚಂದರಗಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts