More

    ಚುನಾವಣೆಯಲ್ಲಿ ಸ್ಥಳೀಯರಿಗೇ ಟಿಕೆಟ್ ನೀಡಿ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ತಾಲೂಕಿನಲ್ಲಿ ಪರಸ್ಥಳದವರಿಂದ ಆಡಳಿತ ನಡೆಯುತ್ತಿದೆ. ಜನರು ಈ ಗುಲಾಮಗಿರಿ ವಿರೋಧಿಸಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಹಕ್ಕೊತ್ತಾಯ ಮಂಡಿಸಬೇಕು ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹೇಳಿದರು.

    ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಭಾನುವಾರ ಸರ್ವ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್​ಬಹಾದೂರ್ ಶಾಸ್ತ್ರೀಜಿ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಥಳೀಯರಿಗೆ ರಾಜಕೀಯ ಸ್ಥಾನಮಾನಗಳ

    ಕುರಿತು ಸ್ವಾಭಿಮಾನಿಗಳ ಒಕ್ಕೂಟ ಸ್ಥಾಪಿಸಲಾಗಿದೆ. ಕಳೆದ ಎರಡು ಚುನಾವಣೆ ಗಳಲ್ಲಿ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದು ಬೇಡ. ಕಾಂಗ್ರೆಸ್, ಬಿಜೆಪಿ ಹಾಗೂ

    ಜೆಡಿಎಸ್​ನಲ್ಲಿ ಬೇರೆ ತಾಲೂಕಿನವರನ್ನು ಅಭ್ಯರ್ಥಿ ಯನ್ನಾಗಿಸುವ ಪರಿಪಾಠ ಬೆಳೆದಿದೆ. ಇದು ಸ್ಥಳೀಯರಿಗೆ ಮಾಡುತ್ತಿರುವ ಅವಮಾನವಾಗಿದೆ. ಈ ಬಾರಿ ಎಲ್ಲ ಪಕ್ಷಗಳ ಹೈಕಮಾಂಡ್​ಗೆ ಎಚ್ಚರಿಕೆ ಸಂದೇಶ ನೀಡಬೇಕು. 2023ರ ಚುನಾವಣೆಯಲ್ಲಿ ಸ್ಥಳೀಯರನ್ನೇ ಅಭ್ಯರ್ಥಿ ಮಾಡಬೇಕು. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿಗಳನ್ನು ಬಹಿಷ್ಕರಿಸಿ ಸ್ಥಳೀಯರನ್ನು ಒಕ್ಕೂಟದಿಂದ ಕಣಕ್ಕಿಳಿಸಲಾಗುವುದು. ಅಗತ್ಯಬಿದ್ದಲ್ಲಿ ತಾವೇ ಕಣಕ್ಕಿಳಿಯುವುದಾಗಿ ತಹಸೀಲ್ದಾರ್ ಘೊಷಿಸಿದರು. ಹಿಂದೆ ಕಲಘಟಗಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾದಾಗ ಸ್ವಾಭಿಮಾನಿ ಒಕ್ಕೂಟ ಸ್ಥಾಪನೆಯಾದ ಬಳಿಕವೇ ರಾಜಕೀಯ ಧ್ರುವೀಕರಣ ನಡೆದಿತ್ತು. ಅದೇ ಘಟನೆ ಹಾನಗಲ್ಲ ತಾಲೂಕಿನಲ್ಲೂ ಪುನರಾವರ್ತನೆಯಾಗಲಿದೆ ಎಂದು ಮನೋಹರ ತಹಶೀಲ್ದಾರ್ ಹೇಳಿದರು.

    ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ತಾಲೂಕಿನ ಜನರು ಸ್ವಾಭಿಮಾನಿಗಳಾಗಬೇಕು. ಎಲ್ಲ ಪಕ್ಷಗಳಲ್ಲಿ ಸ್ಥಳಿಯರಿಗೇ ಟಿಕೆಟ್ ನೀಡುವಂತೆ ಹಕ್ಕೊತ್ತಾಯ ಮಾಡಬೇಕು. ಇದನ್ನು ಹೈಕಮಾಂಡ್​ಗೆ ಮನವರಿಕೆ ಮಾಡಬೇಕು. ಪಕ್ಷದ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಒಕ್ಕೂಟವನ್ನು ಬೆಳೆಸಲು ತಾಲೂಕಿನ ಜನತೆ ಕೈ ಜೋಡಿಸಬೇಕು ಎಂದರು.

    ಬಿಜೆಪಿ ಮುಖಂಡ ಕಲ್ಯಾಣಕುಮಾರ ಶೆಟ್ಟರ್, ಮಾಲತೇಶ ಸೊಪ್ಪಿನ, ಎಸ್.ಎಂ. ಕೋತಂಬರಿ, ಕೃಷ್ಣಾ ಈಳಿಗೇರ, ಶಿವಲಿಂಗಪ್ಪ ತಲ್ಲೂರ, ಬಸವರಾಜ ಹಾದಿಮನಿ, ರಾಜು ಗೌಳಿ ಮಾತನಾಡಿ, ಜನಪ್ರತಿನಿಧಿಗಳಿಗೆ ರಾಜಕಾರಣ ಉದ್ದೇಶ ಆಗಬಾರದು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ತಾಲೂಕಿನಲ್ಲಿ ಬದಲಾವಣೆಯ ಕಾಲಘಟ್ಟ ಸನ್ನಿಹಿತವಾಗಿದೆ. ಮತದಾರರನ್ನು ಹಣಕೊಟ್ಟು ಓಲೈಸುವ ಕಾಲ ಕೊನೆಯಾಗಲಿ ಎಂದರು.

    ಜೆಡಿಎಸ್ ತಾಲೂಕಾಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ಒಕ್ಕೂಟದ ಮೂಲಕ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಬೇಕು. ಎಲ್ಲ ಪಕ್ಷದಲ್ಲೂ ಸ್ಥಳೀಯರಿಗೆ

    ಆದ್ಯತೆ ಸಿಗಬೇಕು. ಪಕ್ಷದ ಚೌಕಟ್ಟಿನಿಂದ ಹೊರಬಂದು ಹೈಕಮಾಂಡ್ ಅನ್ನು ಪ್ರಶ್ನಿಸಬೇಕಿದೆ. ನಮ್ಮ ತಾಲೂಕಿನ ಆಡಳಿತ ಚಿಕ್ಕಾಣಿ ಬೇರೆಯವರಿಗೆ ನೀಡುವುದನ್ನು ವಿರೋಧಿಸೋಣ ಎಂದರು.

    ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾರುತಿ ಪುರ್ಲಿ, ಸುಭಾಸ ಗಡ್ಡದವರ, ವಿನಾಯಕ ಕುರಬರ, ಸತೀಶ ದೇಶಪಾಂಡೆ, ಶಿವಯೋಗಿ ಹಿರೇಮಠ, ಬಸವರಾಜ ನರೇಂದ್ರ, ಎಂ.ಕೆ. ಲಾಲಖಾನವರ, ಬಿ.ಆರ್. ಪಾಟೀಲ, ಸಿದ್ದಪ್ಪ ಹಿರಗಪ್ಪನವರ, ಜಿ.ಎಂ. ಮುಲ್ಲಾ, ರವೀಂದ್ರ ಚಿಕ್ಕೇರಿ, ಎಸ್.ಆರ್. ಪಾಟೀಲ, ಸಿ.ಎಸ್. ಬಡಿಗೇರ, ಕೆ.ಎಲ್. ದೇಶಪಾಂಡೆ, ನಾಗಪ್ಪ ಸವದತ್ತಿ, ಪುಟ್ಟಪ್ಪ ವಾಸನ, ಹಾಶಂಪೀರ ಇನಾಮದಾರ ಇದ್ದರು.

    ವಿಧಾನಸಭೆ ಚುನಾವಣೆಗೆ ಆರು ತಿಂಗಳ ಮುಂಚೆಯೇ ಸ್ಥಳೀಯರಿಗೆ ಟಿಕೆಟ್ ನೀಡುವ ಹಕ್ಕೊತ್ತಾಯವನ್ನು ಮಂಡಿಸಿದ್ದೇವೆ. ಹೋರಾಟಕ್ಕಾಗಿ ಒಕ್ಕೂಟ ಸ್ಥಾಪಿಸಿ, ಸರ್ವ ಪಕ್ಷದ ಮುಖಂಡರ ನೇತೃತ್ವದಲ್ಲಿ ಪ್ರಮುಖ ನಿರ್ಣಯ ಕೈಗೊಂಡಿದ್ದೇವೆ. ಕಳೆದ ಬಾರಿಯಂತೆ ಈ ಬಾರಿ ಮತದಾರರನ್ನು ಯಾಮಾರಿಸಲು ಸಾಧ್ಯವಿಲ್ಲ.
    ಮನೋಹರ ತಹಶೀಲ್ದಾರ್, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts