More

    ಚುನಾವಣೆಯಲ್ಲಿ ಸೋತಿರಬಹುದು, ನಾಯಕನಾಗಿ ಸೋಲು ಕಂಡಿಲ್ಲ; ಗೆದ್ದು ಮಂತ್ರಿಯಾಗುವೆ: ಮಧು ಬಂಗಾರಪ್ಪ

    ಸೊರಬ: ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲುಂಡಿರಬಹುದು. ಆದರೆ ಕ್ಷೇತ್ರದ ಜನತೆಯ ವಿಶ್ವಾಸ ಮತ್ತು ನಾಯಕನಾಗಿ ಎಂದಿಗೂ ಸೋಲು ಕಂಡಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಮಾಜಿ ಶಾಸಕ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
    ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸ ಮಾತನಾಡಿದ ಅವರು, 2023ರಲ್ಲಿ ಯಾವುದೇ ಕ್ಷಣದಲ್ಲಾದರೂ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸನ್ನದ್ಧವಾಗಿದ್ದು, ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ ಹಾಗೂ ನಾನು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಜತೆಗೆ ಜನತೆಯ ಹಿತದೃಷ್ಟಿಯಿಂದ ಸಚಿವ ಸ್ಥಾನವೂ ಲಭಿಸಲಿದೆ ಎಂದರು.
    ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸ್ವಯಂ ಪ್ರೇರಿತರಾಗಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಈಗಾಗಲೇ ಕ್ಷೇತ್ರದಲ್ಲಿ ಶಾಸಕರ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಜನಪ್ರತಿನಿಧಿಯಾದವರು ನೀಚ ಪ್ರವೃತ್ತಿಗೆ ಇಳಿಯುವುದು ಸಲ್ಲದು. ಅಭಿಮಾನಿಗಳು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಡ್ಡಿ ಮಾಡಲಾಗಿದೆ. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
    ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ದೇಶ ಹಾಗೂ ರಾಜ್ಯ ಕಂಡ ಅಪ್ರತಿಮ ನಾಯಕರು. ಬಂಗಾರಪ್ಪ ಅವರಿಗೆ ಬಂಗಾರಪ್ಪ ಅವರೇ ಸಾಟಿ. ಅವರ ಹಾದಿಯಲ್ಲಿ ಮುನ್ನಡೆಯುತ್ತೇನೆ. ಅಂದು ಕ್ಷೇತ್ರದ ಬದಲಾದ ರಾಜಕೀಯ ಸನ್ನಿವೇಶವನ್ನು ಅರಿತ ಬಂಗಾರಪ್ಪ ಅವರು ತಮ್ಮನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯಿಸುವ ಮೂಲಕ ಜನಸೇವೆಗಾಗಿ ಸಮರ್ಪಿಸಿದರು. ಅಂದಿನಿಂದ ಜನರ ನಡುವೆಯೇ ಇದ್ದು ಜನತೆಯ ಹಿತಕ್ಕಾಗಿ ಬಗರ್‌ಹುಕುಂ ಸೇರಿದಂತೆ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡು, ನ್ಯಾಯಕೊಡಿಸಲು ಪ್ರಯತ್ನಿಸಿದ್ದೇನೆ ಎಂದರು.
    ಕಾಂಗ್ರೆಸ್ ಪಕ್ಷ ಮಹತ್ವದ ಜವಾಬ್ದಾರಿಗಳನ್ನು ತಮ್ಮ ಹೆಗಲಿಗೆ ಹಾಕಿದೆ. ರಾಜ್ಯದಲ್ಲಿ ಶೇ.58 ಹಿಂದುಳಿದ ವರ್ಗದ ಜನತೆಯೇ ಇದ್ದಾರೆ. ಅಲ್ಪಸಂಖ್ಯಾತರು, ದಲಿತರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ವಿಶ್ವಾಸ ಪಡೆದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಬಿಜೆಪಿಯ ಭದ್ರಕೋಟೆ ಎಂದೇ ಭಾವಿಸುತ್ತಿದ್ದ ಕರಾವಳಿ ಭಾಗದಲ್ಲಿಯೂ ಕಾಂಗ್ರೆಸ್ ಅಲೆ ಬೀಸುತ್ತಿದೆ ಎಂದು ಹೇಳಿದರು.
    ನಮೋ ವೇದಿಕೆಯಲ್ಲಿ ನುಡಿದಿದ್ದು ಸತ್ಯ: ಕ್ಷೇತ್ರದ ಶಾಸಕರ ಗೆಲುವಿಗೆ ಕಾರಣರಾದ ಬಿಜೆಪಿಯ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಒಂದು ಗುಂಪು ಇದೀಗ ಇರಿಸು ಮುರಿಸು ಅನುಭವಿಸುತ್ತಿದೆ. ಇತ್ತೀಚೆಗೆ ಪಟ್ಟಣದಲ್ಲಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ ನುಡಿದಿದ್ದು ಸತ್ಯವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಅವರ ಪಕ್ಷದವರಿಂದಲೇ ಸತ್ಯಾಂಶ ಹೊರ ಬಂದಿದೆ ಎಂದು ಹೆಸರನ್ನುಚ್ಚರಿಸದೇ ನಮೋ ವೇದಿಕೆಯ ಕಾರ್ಯಕ್ರಮದಲ್ಲಿ ಪದ್ಮನಾಬ್ ಭಟ್ ಅವರು ಶಾಸಕರ ವಿರುದ್ಧ ನೀಡಿದ ಹೇಳಿಕೆಗಳನ್ನು ಸಮರ್ಥಿಸಿಕೊಂಡರು.
    ಆನವಟ್ಟಿಯಿಂದ ಮೆರವಣಿಗೆ: ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಮಧುಬಂಗಾರಪ್ಪ ಅವರನ್ನು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಿದರು. ತಾಲೂಕಿನ ಆನವಟ್ಟಿ ಶ್ರೀ ವಿಠ್ಠಲ ರಖುಮಾಯಿ ದೇವಸ್ಥಾನದಿಂದ ಆರಂಭವಾದ ಬೈಕ್ ರ‌್ಯಾಲಿ, ಕುಪ್ಪಗಡ್ಡೆ, ತವನಂದಿ ಮಾರ್ಗವಾಗಿ ಪಟ್ಟಣದ ಹೊಸಪೇಟೆ ಬಡಾವಣೆ ತಲುಪಿತು. ಮುಖ್ಯ ರಸ್ತೆ ಮಾರ್ಗವಾಗಿ ಬಂಗಾರಧಾಮದವರೆಗೆ ಸಾವಿರಾರು ಬೈಕ್‌ಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ಹಾದಿಯಲ್ಲಿ ಕಾರ್ಯಕರ್ತರು ಮಧುಬಂಗಾರಪ್ಪ ಮತ್ತು ಕಾಂಗ್ರೆಸ್ ಪಕ್ಷದ ಪರ ಘೋಷಣೆಗಳನ್ನು ಮೊಳಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts