More

    ಚುನಾವಣೆಯಲ್ಲಿ ಮೈಮರೆತರೆ ರಾಷ್ಟ್ರದ ವಿನಾಶ – ವಾಜಪೇಯಿ ಜಯಂತ್ಯುತ್ಸವದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಆತಂಕ

    ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಮೈಮರೆತರೆ ರಾಷ್ಟ್ರಮಂದಿರದ ಜತೆಗೆ ರಾಷ್ಟ್ರದ ವಿನಾಶವೂ ಆಗಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದರು.
    ನಗರದ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ವಾಜಪೇಯಿ ಅಭಿಮಾನಿಗಳ ಬಳಗ, ಬಿಜೆಪಿ ಹಿರಿಯ ನಿಷ್ಠಾವಂತ ಕಾರ್ಯಕರ್ತರ ವೇದಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
    ರಾಷ್ಟ್ರಭಕ್ತಿಯ ಜಾಗೃತಿ ಜತೆಗೆ ರಾಮಭಕ್ತಿಯನ್ನು ಹೃದಯದಲ್ಲಿರಿಸಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರವನ್ನು ಚುನಾಯಿಸುವ ನಿರ್ಣಯ ಮಾಡಬೇಕು. ಜನರ ಒಂದೊಂದು ಮತದಿಂದ ರಾಮಮಂದಿರ ನಿರ್ಮಾಣವಾಗಿದೆ. ಚುನಾವಣೆಯಲ್ಲಿ ಮೈಮರೆವು ಬೇಡ ಎಂದು ಕಿವಿಮಾತು ಹೇಳಿದರು.
    ರಾಮಮಂದಿರ ನಿರ್ಮಾಣ ಸಹಿಸದಿದ್ದವರು ಇದೀಗ ರಾಮನ ಪ್ರತಿಷ್ಠಾಪನೆ ಬಗ್ಗೆ ಮಾತನಾಡುತ್ತಿದ್ದಾರೆ. ರಾಮ ಕಾಲ್ಪನಿಕ ವ್ಯಕ್ತಿ ಎಂದು ಪ್ರಮಾಣಪತ್ರ ಕೊಡಲು ಮುಂದಾಗಿದ್ದವರೂ ಇಂದು ನಾವೂ ರಾಮನ ಭಕ್ತರು ಎನ್ನುತ್ತಿದ್ದಾರೆ. ಢೋಂಗಿಗಳ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು.
    ರಾವಣ ಮನಸ್ಥಿತಿಯವರು ರಾಮನ ವೇಷದಲ್ಲಿ ಮೋಸ ಮಾಡಲು ಬರಲಿದ್ದು, ಜನರು ಎಚ್ಚರದಿಂದಿರಬೇಕು. ಕೆಲವರು ರಾಜಕೀಯ ಕಾರಣಕ್ಕಾಗಿ ದುರುದ್ದೇಶದಿಂದ ಹಿಂದುಗಳಲ್ಲಿ ಒಡಕು ತರುತ್ತಿದ್ದಾರೆ. ನಾವೆಲ್ಲ ಹಿಂದು, ನಾವೆಲ್ಲ ಒಂದು ಎಂಬ ಮನೋಭಾವದಿಂದ ತಾಯಿ ಭಾರತಿಗೆ ಶಕ್ತಿ ತುಂಬಬೇಕು. ಜಾತಿ, ಹಣ ಇತರೆ ಭಿಕ್ಷೆಯ ಬದಲಾಗಿ ದೇಶಕ್ಕಾಗಿ ಮತ ಮೀಸಲಿಡುವ ಮೂಲಕ ದೇಶದ ಪ್ರಗತೀಕರಣ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
    ಭಾರತದ ಮೇಲೆ ಸಾಕಷ್ಟು ಆಕ್ರಮಣ ನಡೆದಿವೆ. ಕೆಲವೊಮ್ಮೆ ಅಧಿಕಾರದ ಪಲ್ಲಟಗಳು ಆಗಿವೆ. ಆದರೆ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಉಳಿದಿದೆ. ರಾಮಮಂದಿರ ಮರು ನಿರ್ಮಾಣ ಆಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಶ್ರೀರಾಮನಿಲ್ಲದೆ ಭಾರತವನ್ನು ಪರಿಚಯ ಅಸಾಧ್ಯವಾಗಿದೆ ಎಂದರು.
    ಸರ್ವಧರ್ಮ ಸಮಭಾವವೇ ಹಿಂದುತ್ವವಾಗಿದೆ. ಕಟು ಹಿಂದುತ್ವ ಎಂಬ ಪ್ರತ್ಯೇಕತೆ ಇಲ್ಲ. ರಾಮಮಂದಿರ, ರಾಮನಿಗಾಗಿ ಇರುವ ಗುಡಿ ಮಾತ್ರವಲ್ಲ. ಧರ್ಮ ರಕ್ಷಣೆ, ದುಷ್ಟರ ಶಿಕ್ಷೆಗಾಗಿಯೇ ಇದೆ. ರಾಮ ಯಾರಿಗೂ ಭೇದ ಮಾಡಲಿಲ್ಲ. ಆತನ ಹೆಸರಲ್ಲಿ ನಾವೂ ಭೇದ ಮಾಡಬಾರದು. ರಾಮನ ಗುಣಧಾರಣೆ ಮಾಡುವುದೇ ರಾಮರಾಜ್ಯದ ಸ್ಥಾಪನೆಯಾಗಿದೆ. ಇದಕ್ಕಾಗಿ ನಾವಿಂದು ಸಂಕಲ್ಪ ಮಾಡಬೇಕಿದೆ. ಪೇಜಾವರ ಮಠಾಧೀಶರ ಕರೆಯಂತೆ ಬಡವರಿಗೆ ನೆವಾಗಬೇಕಿದೆ ಎಂದು ಹೇಳಿದರು.
    ಉಪನ್ಯಾಸ ನೀಡಿದ ವಕೀಲ ಜಿ.ಕೆ. ಸುರೇಶ್, ಅಟಲ್ ಬಿಹಾರಿ ವಾಜಪೇಯಿ ಅವರಂಥ ವ್ಯಕ್ತಿತ್ವ ರಾಜಕಾರಣದಲ್ಲಿ ಅತಿ ವಿರಳ. ಕಾರ್ಯಕರ್ತರು ರಾಜಕೀಯ ಇತಿಹಾಸವನ್ನು ಓದಬೇಕು ಎಂದು ತಿಳಿಸಿದರು.
    ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಸರ್ವ ಶಿಕ್ಷ ಅಭಿಯಾನ, ಪಿಎಂ ಗ್ರಾಮ ಸಡಕ್, ಸುವರ್ಣ ಚತುಷ್ಪಥ ರಸ್ತೆ ಮೊಲಾದ ಅನೇಕ ಯೋಜನೆಗಳನ್ನು ನೀಡಿದ್ದ ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು ಎಂದು ಹೆಸರಾಗಿದ್ದರು. ಭಾರತದ ನದಿಗಳ ಜೋಡಣೆ ಮಾಡುವ ಅವರ ಕನಸು ನನಸಾಗಲಿಲ್ಲ ಎಂದರು.
    ದೇಣಿಗೆ ಹಣದಿಂದಲೇ ರಾಮಮಂದಿರವನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಸರ್ಕಾರದ ಒಂದು ರೂ. ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಳಸದೇ ಗಮನ ಸೆಳೆದಿದ್ದಾರೆ. ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಆಶಿಸಿದರು.
    ಶಾಸಕ ಬಿ.ಪಿ.ಹರೀಶ್ ಮಾತನಾಡಿ ಭಾರತ ಅಭಿವೃದ್ಧಿ ಶೀಲ ರಾಷ್ಟ್ರವಾಗಬೇಕು. ದೇಶದ ಧರ್ಮ, ಸಂಸ್ಕೃತಿಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೈ ಬಲಪಡಿಸಬೇಕಿದೆ ಎಂದರು.
    ಎ.ಕೆ. ಫೌಂಡೇಷನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್, ವಾಜಪೇಯಿ ಅವರ ಕುರಿತಾಗಿ ರಚಿಸಿದ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಡಾ.ರವಿಕುಮಾರ್, ಮುಖಂಡರಾದ ಕೃಷ್ಣಮೂರ್ತಿ ಪವಾರ್, ಜಯಪ್ರಕಾಶ್ ಅಂಬರ್‌ಕರ್, ಯಶವಂತರಾವ್ ಜಾಧವ್, ಬಿ.ಎಂ.ಷಣ್ಮುಖಯ್ಯ, ಎಚ್.ಎಸ್. ಲಿಂಗರಾಜು, ಆರ್. ಪ್ರತಾಪ್, ಚಂದ್ರಾನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts