More

    ಚುನಾವಣಾ ಬಹಿಷ್ಕಾರದ ಎಚ್ಚರಿಕೆ

    ಯಳಂದೂರು: ತಾಲೂಕಿನ ಬನ್ನಿಸಾರಿಗೆ ಗ್ರಾಮದ ನಾಯಕರ ಬೀದಿಯಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ಎದುರಿಸುತ್ತಿದ್ದು ಇದರ ನಿವಾರಣೆಗೆ ಸಂಬಂಧಪಟ್ಟ ಚುನಾಯಿತ ಜನಪ್ರತಿನಿಧಿಗಳು, ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಇಲ್ಲಿನ ವಾಸಿಗಳು ಎಚ್ಚರಿಕೆ ನೀಡಿದ್ದಾರೆ.
    ಈ ಸಂಬಂಧ ಶುಕ್ರವಾರ ಗ್ರಾಮದ ಸಮುದಾಯ ಭವನದ ಬಳಿ ಸಭೆ ಸೇರಿದ್ದ ವಾಸಿಗಳು ಈ ತೀರ್ಮಾನ ಮಾಡಿದ್ದಾರೆ. ಗ್ರಾಮದ ಮುಖಂಡ ಆರ್. ನವೀನ್‌ಕುಮಾರ್ ಮಾತನಾಡಿ, ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದ ಈ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಟ್ಟು ನಮ್ಮ ಜನಾಂಗದ 400 ಕುಟುಂಬಗಳು ವಾಸವಾಗಿವೆ. 800 ಕ್ಕೂ ಹೆಚ್ಚು ಮತದಾರರು ಇದ್ದಾರೆ. ಇಡೀ ಗ್ರಾಮಕ್ಕೆ ಒಂದೇ ಕೊಳವೆ ಬಾವಿ ಇದ್ದು ಇಲ್ಲಿಂದಲೇ ನೀರು ಪೂರೈಕೆಯಾಗಬೇಕು. ಆದರೆ ನಮ್ಮ ಬೀದಿಗೆ ನೀರು ಬರುವುದೇ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ತಹಸೀಲ್ದಾರ್, ತಾಪಂ ಇಒ, ಗ್ರಾಪಂ ಪಿಡಿಒಗೆ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಇದರೊಂದಿಗೆ ಇಲ್ಲಿನ ಚರಂಡಿಯಲ್ಲಿ ಹೂಳು ತುಂಬಿದ್ದು ಇದು ದುರ್ವಾಸನೆ ಬೀರುತ್ತಿದ್ದು ರೋಗಗ್ರಸ್ತ ಪ್ರದೇಶವಾಗಿ ಮಾರ್ಪಟ್ಟಿದೆ. ಈಗ ಬೇಸಿಗೆಯಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ. ಅಲ್ಲದೆ ರಸ್ತೆಯಲ್ಲಿ ಕಸವೂ ತುಂಬಿದ್ದು ಇದರ ಸೂಕ್ತ ವಿಲೇವಾರಿಯಾಗಿಲ್ಲ.
    ಬೇಸಿಗೆ ಕಾಲದಲ್ಲಿ ನೀರಿಗೆ ಹಾಹಾಕಾರ ಹೆಚ್ಚಾಗುತ್ತದೆ. ಕುಡಿಯುವ ನೀರು ಸಂಗ್ರಹಿಸಲು ನಾವು ಪಕ್ಕದ ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಕುಣಗಳ್ಳಿ ಗ್ರಾಮಕ್ಕೆ ತೆರಳುವ ಅನಿವಾರ್ಯತೆ ಇದೆ. ಇಲ್ಲವಾದರೆ ಅಕ್ಕಪಕ್ಕದ ತೋಟದ ಬಾವಿಗಳಿಂದ ನೀರನ್ನು ಸಂಗ್ರಹಿಸಿ ಕುಡಿಯುವ ಅಗತ್ಯತೆ ಸೃಷ್ಟಿಯಾಗಿದೆ. ಇಲ್ಲಿಂದ ಗೆದ್ದ ಚುನಾಯಿತ ಜನಪ್ರತಿನಿಧಿಗಳಿಗೂ ಹಲವು ಬಾರಿ ಈ ಸಮಸ್ಯೆ ನಿವಾರಣೆಗೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಹಾಗಾಗಿ ನಮ್ಮ ಜನಾಂಗದ ಎಲ್ಲರೂ ಸೇರಿ ಈ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು. ಇದಕ್ಕೆ 24 ಗಂಟೆಗಳ ಗಡುವು ನೀಡಲಾಗಿದ್ದು ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸದಿದ್ದರೆ, ಯಾವ ಇಲಾಖೆಯ ಅಧಿಕಾರಿಗಳಿಗೂ ನಮ್ಮ ಬಡಾವಣೆಗೆ ಬಾರದಂತೆ ತಗಡೆಗಟ್ಟಲಾಗುವುದು, ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
    ರಾಜಸ್ವ ನಿರೀಕ್ಷಕ ಹಾಗೂ ಪಿಡಿಒಗೆ ತರಾಟೆ: ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ರಾಜಸ್ವ ನಿರೀಕ್ಷಕ ರಾಜಶೇಖರ್, ಪಿಡಿಒ ರಮೇಶ್‌ರನ್ನು ಬಡಾವಣೆಯ ವಾಸಿಗಳು ತರಾಟೆ ತೆಗೆದುಕೊಂಡರು. ಸ್ಥಳಕ್ಕೆ ಮೇಲ್ಮಟ್ಟದ ಅಧಿಕಾರಿಗಳು ಭೇಟಿ ನೀಡಬೇಕು. ಕೂಡಲೇ ನಮ್ಮ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಇವರನ್ನು ಹಿಮ್ಮೆಟ್ಟಿಸಿದ ಘಟನೆಯೂ ಜರುಗಿತು.

    ಗ್ರಾಮ ರಾಮಕೃಷ್ಣ, ರಂಗಸ್ವಾಮಿ, ಮಂಜು, ರಘು, ಪ್ರೀತನ್, ಪ್ರದೀಪ್, ಗೋಪಾಲನಾಯಕ, ಸುದೀಪ್, ಸುನೀಲ್, ಸತೀಶ್, ರವಿ, ನಟರಾಜು, ಸುರೇಶ್, ಮೂರ್ತಿ, ಸಿದ್ದರಾಜು ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts