More

    ಚುನಾವಣಾ ಪ್ರಚಾರ ಆರಂಭಿಸಿದ ಯದುವೀರ್

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಅಧಿಕೃತವಾಗಿ ಚುನಾವಣಾ ಪ್ರಚಾರ ಪ್ರಾರಂಭಿಸಿದರು. ಕ್ಯಾತಮಾರನಹಳ್ಳಿ ಬಡಾವಣೆಯಿಂದ ಚುನಾವಣೆ ಪ್ರಾರಂಭಿಸಿದ ಅವರು ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದರು.

    ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಅವರು ಇದುವರೆಗೆ ಪಕ್ಷದ ಮುಖಂಡರು ಹಾಗೂ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುವಲ್ಲಿ ನಿರತರಾಗಿದ್ದರು. ಭಾನುವಾರ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕ್ಯಾತಮಾರನಹಳ್ಳಿ ಬಡಾವಣೆಯ ಹುಲಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಮೂಲಕ ಮತ ಯಾಚಿಸಿದರು.

    ಯದುವೀರ್ ರಾಜವಂಶಸ್ಥರಾದ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಜವಂಶಸ್ಥರಿಗೆ ಗೌರವ ಸಲ್ಲಿಸುವ ಸಲುವಾಗಿ ಛತ್ರಿ, ಚಾಮರ, ತಮಟೆ, ಡೊಳ್ಳು ಸೇರಿದಂತೆ ವಿವಿಧ ಜಾನಪದ ವಾದ್ಯಗಳ ಮೂಲಕ ಯದುವೀರ್ ಅವರನ್ನು ಕ್ಯಾತಮಾರನಹಳ್ಳಿಯ ಟೆಂಟ್‌ಹೌಸ್ ವೃತ್ತದಲ್ಲಿ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಯದುವೀರ್ ಪರವಾಗಿ ಘೋಷಣೆ ಕೂಗಿದರು.

    ಯದುವೀರ್ ಸಾಗಿದ ಮಾರ್ಗದುದ್ದಕ್ಕೂ ರಸ್ತೆಗೆ ನೀರು ಸಿಂಪಡಿಸಿ ಸ್ವಚ್ಛ ಮಾಡಲಾಗಿತ್ತು. ಅಲ್ಲದೆ, ಹೂವು ಎರಚಿ, ಮಂಗಳಾರತಿ ಎತ್ತಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಯದುವೀರ್ ಕ್ಯಾತಮಾರನಹಳ್ಳಿ ಬಡಾವಣೆಯ ಹಲವು ಬೀದಿಗಳಲ್ಲಿ ಮತಯಾಚಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಈ ಸಂದರ್ಭ ಯದುವೀರ್ ಮಾತನಾಡಿ, ಕ್ಯಾತವಾರನಹಳ್ಳಿ ಗ್ರಾಮಸ್ಥರು ನೀಡಿದ ಸ್ವಾಗತವನ್ನು ಮರೆಯಲಾರೆ. ಈ ಹಿಂದೆ ಹುಲಿಯಮ್ಮ ದೇವಸ್ಥಾನಕ್ಕೆ ಬಂದಿದ್ದೆ. ಅರಮನೆ ಮತ್ತು ಕ್ಯಾತವಾರನಹಳ್ಳಿ ನಡುವೆ ಭಾವನಾತ್ಮಕ ಸಂಬಂಧವಿದೆ. ಇಲ್ಲಿಯ ಜನರು ನನ್ನನ್ನು ಮಗ ಮತ್ತು ಸಹೋದರನಂತೆ ಕಂಡಿದ್ದಾರೆ ಎಂದರು.

    ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಮೈಸೂರಿನ ಜನರಿಗೆ ತಲುಪಿಸಬೇಕು. ಮೈಸೂರು ಸಂಸ್ಥಾನ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಅದೇ ರೀತಿಯ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದರು.

    ಕ್ಯಾತಮಾರನಹಳ್ಳಿಗೆ ಆಗಿಂದಾಗ್ಗೆ ಭೇಟಿ ನೀಡಿ ನಿಮ್ಮೊಂದಿಗೆ ಇರುತ್ತೇನೆ. ಚಾಮುಂಡಿ ತೇರು ಎಳೆಯುವ ಹಕ್ಕು ನಿಮ್ಮ ಊರಿಗೆ ಇದೆ. ಅಂತಹ ಸಂಬಂಧ ಹೊಂದಿರುವ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕ್ಯಾತಮಾರನಹಳ್ಳಿಯ ಜನರು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು..

    ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ಮಾತನಾಡಿ, ಯದುವೀರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಸಲು ಹಿಂದೇಟು ಹಾಕುತ್ತಿದೆ. ಸಾರ್ವನಿಕರ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಯದುವೀರ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಮಾಜಿ ಮೇಯರ್ ಸಂದೇಶ್ ಸ್ವಾಮಿ ವಾತನಾಡಿ, ಮೈಸೂರನ್ನು ಕಟ್ಟಿ ಬೆಳೆಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲಬೇಕು. ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ ಜನರಿಗೆ ನೀರನ್ನು ಒದಗಿಸಿದರು. ಇದೀಗ ಮತ್ತೆ ಜನರ ಸೇವೆ ಮಾಡಲು ಮೈಸೂರು ರಾಜವಂಶದ ಯದುವೀರ್ ಬಂದಿದ್ದಾರೆ. ಅವರನ್ನು ಎಲ್ಲರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭ ಬಿಜೆಪಿ ಮುಖಂಡರಾದ ಮೈ.ವಿ.ರವಿಶಂಕರ್, ಸಂದೇಶ್ ಸ್ವಾಮಿ, ಸಾತ್ವಿಕ್, ಹೇಮಂತ್ ಕುಮಾರ್ ಗೌಡ, ರೇಣುಕಾ ರಾಜು, ಎಸ್.ಸಾತ್ವಿಕ್, ಮಂಜುನಾಥ್, ಪದ್ಮನಾಭ, ವಸಂತಕುವಾರ್, ಎಚ್.ಜಿ.ಗಿರಿಧರ್, ಶಿವಕುವಾರ್, ಭಾನುಪ್ರಕಾಶ್, ಚಂದ್ರಮೌಳಿ, ಮಂಜುಶ್ರೀ ಗೌಡ, ರೇಣುಕಾರಾಜ್, ಪ್ರಕಾಶ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts