More

    ಚುಂಚನಗಿರಿಯಲ್ಲಿ ಮಹಿಳೆಯರಿಗೆ ಬಾಗಿನ ವಿತರಣೆ

    ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಠದ ಗುರುಭವನದಲ್ಲಿ ಶರನ್ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ ವಿಶ್ವ ಒಕ್ಕಲಿಗರ ಮಹಾವೇದಿಕೆ ಮಹಿಳಾ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೂರಾರು ಮಹಿಳೆಯರಿಗೆ ಬಾಗಿನ ಅರ್ಪಿಸಿದರು.

    ತಾಯಂದಿರು ಮತ್ತು ಮಹಿಳೆಯರಿಗೆ ಆದಿಚುಂಚನಗಿರಿ ಮಠ ತವರು ಮನೆಯಿದ್ದಂತೆ. ಆದ್ದರಿಂದ ವಿಶ್ವ ಒಕ್ಕಲಿಗರ ಮಹಾವೇದಿಕೆಯ ಮಹಿಳೆಯರ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿವರ್ಷ ಕ್ಷೇತ್ರಕ್ಕೆ ಆಗಮಿಸಿ ನೂರಾರು ಮಹಿಳೆಯರಿಗೆ ಬಾಗಿನ ಕೊಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
    ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ, ವಿಶ್ವ ಒಕ್ಕಲಿಗರ ಮಹಾವೇದಿಕೆಯ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶಂಕರ್, ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು ಮತ್ತು ಶ್ರೀಮಠದ ಭಕ್ತರು ಹಾಜರಿದ್ದರು.

    ಶರನ್ನವರಾತ್ರಿ ಪೂಜೆ : ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಠದ ಅಧಿದೇವತೆ ಶ್ರೀ ಕಾಲಭೈರವೇಶ್ವರಸ್ವಾಮಿ ಸೇರಿದಂತೆ ಕ್ಷೇತ್ರದ ಎಲ್ಲ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಜ್ವಾಲಾಪೀಠ ಪೂಜೆ ಮತ್ತು ಹೋಮ ಹವನಾದಿ ಕಾರ್ಯಗಳನ್ನು ನೆರವೇರಿಸಿದರು. ಬಳಿಕ ಚಿನ್ನದ ಕಿರೀಟಧಾರಣೆ ಮತ್ತು ಕಂಠಿ ಹಾರದೊಂದಿಗೆ ಸರ್ವಾಲಂಕೃತಗೊಂಡಿದ್ದ ಶ್ರೀಗಳು ಸಿದ್ಧಸಿಂಹಾಸನ ಹಾಗೂ ಷೋಡಶೋಪಚಾರ ಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ಸಿದ್ಧಸಿಂಹಾಸನದ ಮೇಲೆ ಕುಳಿತು ದರ್ಶನಾಶೀರ್ವಾದ ನೀಡಿದರು.
    ಬುಧವಾರ ರಾತ್ರಿ ಶರನ್ನವರಾತ್ರಿ ಉತ್ಸವದ ಪೂಜಾ ಕೈಂಕರ್ಯವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ನೆರವೇರಿಸಿಕೊಟ್ಟರು. ಶ್ರೀ ಮಠದ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ಚಾಕೇನಹಳ್ಳಿ, ಅಣಕನಹಳ್ಳಿ, ತಿಗಳನಹಳ್ಳಿ, ಶ್ರೀರಂಗಪುರ, ಅಡಕತಹಳ್ಳಿ, ಹುಳ್ಳೇನಹಳ್ಳಿ, ಮೈಲನಹಳ್ಳಿ, ಮಣಿಯೂರು, ಕಾಡುಅಂಕನಹಳ್ಳಿ, ಕಾಡುಅಂಕನಹಳ್ಳಿ ಹೊಸೂರು ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts