More

    ಚೀಟಿ ವ್ಯವಹಾರದಲ್ಲಿ ವಂಚಿಸಿದ್ದ ಮೂವರ ಬಂಧನ, ಮಾದನಾಯಕನಹಳ್ಳಿ, ಸಿಇಎನ್ ಪೊಲೀಸ್ ಕಾರ್ಯಾಚರಣೆ

    ನೆಲಮಂಗಲ: ಚೀಟಿ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಸಹೋದರನ್ನು ಮಾದನಾಯಕನಹಳ್ಳಿ ಹಾಗೂ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಶಿವನಪುರ ಕಾಲನಿ ನಿವಾಸಿ ವೆಂಕಟೇಶ್ ಬಾಬು (45), ನಟರಾಜು ಬಾಬು (42), ಲೋಕೇಶ್ ಬಾಬು (38) ಬಂಧಿತರು.

    ತುಮಕೂರು ಜಿಲ್ಲೆ ಮಧುಗಿರಿಯ ಸಹೋದರರು 20 ವರ್ಷಗಳಿಂದ ಶಿವನಪುರ ಕಾಲನಿಯಲ್ಲಿ ಅಗರಬತ್ತಿ ಕಂಪನಿ ನಡೆಸುತ್ತಿದ್ದರು. ಮಧ್ಯಮ ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ತಿಂಗಳಿಗೆ ಲಕ್ಷಾಂತರ ರೂಪಾಯಿ ಚೀಟಿ ವ್ಯವಹಾರ ಮಾಡುತ್ತಿದ್ದರು. ವ್ಯವಹಾರ ಕುದುರುತ್ತಿದ್ದಂತೆ ನಟರಾಜ ಟ್ರೇಡರ್ಸ್ ಹಾಗೂ ಬಾಬು ಚಿಟ್ ಫಂಡ್ ಹೆಸರಿನಲ್ಲಿ ನೂರಾರು ನಿವೃತ್ತ ನೌಕರರು, ಉದ್ಯಮಿಗಳು ಸೇರಿ ಅಮಾಯಕ ಜನರಿಗೆ ಅತಿಹೆಚ್ಚು ಬಡ್ಡಿಯ ಆಮಿಷ ಒಡ್ಡಿ ಕೋಟಿ ಕೋಟಿ ಹಣ ಪಡೆದುಕೊಂಡಿದ್ದರು. ಆರು ತಿಂಗಳ ಹಿಂದೆ ವ್ಯವಹಾರ ನಷ್ಟವಾಗಿರುವುದಾಗಿ ಹೇಳಿ, ಕೆಲವರಿಗೆ ಚೆಕ್ ನೀಡಿದ್ದರು. ಇನ್ನೂ ಕೆಲವರಿಗೆ ಆಸ್ತಿ ಮಾರಿ ಹಣ ಹಿಂದಿರುಗಿಸುವುದಾಗಿ ಹೇಳಿ ಕೆಲ ದಿನಗಳ ಬಳಿಕ ಕೋಟ್ಯಂತರ ರೂಪಾಯಿಯೊಂದಿಗೆ ತಲೆಮರೆಸಿಕೊಂಡಿದ್ದರು. ಇವರ ಮನೆ ಬಳಿ ಹೋಗಿ ಬೇಸತ್ತಿದ್ದ ಜನರು ನಾಲ್ಕೈದು ತಿಂಗಳ ಹಿಂದೆ ದೂರು ದಾಖಲಿಸಿದ್ದರು.

    ಸಿಪಿಐ ಕೆ.ಪಿ.ಸತ್ಯನಾರಾಯಣ್ ಹಾಗೂ ಸಿಇಎನ್ ವಿಭಾಗದ ಸಿಪಿಐ ಶ್ರೀನಿವಾಸ್ ನೇತೃತ್ವದಲ್ಲಿ ಬೆಂಗಳೂರು ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕವಸ್ತು ವಿಭಾಗದ ಪೊಲೀಸರನ್ನು ಒಳಗೊಂಡ ವಿಶೇಷ ತಂಡ ರಚನೆಯಾಗಿತ್ತು. ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ ಪೊಲೀಸರ ತಂಡ ಮಾದನಾಯಕನಹಳ್ಳಿ ಠಾಣೆಗೆ ಕರೆತಂದಿದೆ.

    ಹೆಚ್ಚಿನ ಬಡ್ಡಿಯಾಸೆ ತೋರಿಸಿ ವಂಚನೆ: ಚಿಟ್ ಂಡ್ ವ್ಯವಹಾರ ನಡೆಸುತ್ತಿದ್ದ ಸಹೋದರರು ಬಾಬು ಚಿಟ್ ಪಂಡ್ ಪ್ರೈ.ಲಿ., ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಿದ್ದರು. ಹೆಚ್ಚಿನ ಬಡ್ಡಿಯಾಸೆ ತೋರಿಸಿ 500ಕ್ಕೂ ಹೆಚ್ಚು ಮಂದಿಯಿಂದ 8 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಸಂಗ್ರಹಿಸಿದ್ದರು. ಇವರ ಮಾತು ನಂಬಿದ್ದ ಸರ್ಕಾರಿ ನೌಕಕರು, ನಿವೃತ್ತ ನೌಕರರು, ಉದ್ಯಮಿಗಳು ಹಣ ಹೂಡಿಕೆ ಮಾಡಿದ್ದರು. ಹೆಚ್ಚಿನ ಹಣ ಸಂಗ್ರಹವಾಗುತ್ತಿದ್ದಂತೆ, ಕಂಪನಿ ನಷ್ಟವಾಗಿರುವುದಾಗಿ ಹೇಳಿ ತಲೆಮರೆಸಿಕೊಂಡಿದ್ದರು.

    ನಮ್ಮ ಹಣ ಕಳೆದುಹೋಗುವ ಆತಂಕದಲ್ಲಿ ದಿನ ದೂಡುತ್ತಿದ್ದೆವು. ಇದೀಗ ಇವರ ಬಂಧನದಿಂದ ನಿಟ್ಟುಸಿರು ಬಿಡುವಂತಾಗಿದೆ. ಪ್ರಕರಣದ ತನಿಖೆ ನಡೆಸಿ, ಬಂಧಿತರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರಿಗೆ ಹಣ ಹಿಂದಿರುಗಿಸಬೇಕು.
    ಮಹಾಂತೇಶ್, ಹೂಡಿಕೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts