More

    ಚಿತ್ರದುರ್ಗದಲ್ಲಿ ಶೀಘ್ರ ಕಾಯಕ ಜನೋತ್ಸವ  -ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿಕೆ

    ದಾವಣಗೆರೆ: ಬರುವ ಜನವರಿ 5 ಮತ್ತು 6ರಂದು ಚಿತ್ರದುರ್ಗದಲ್ಲಿ ಕಾಯಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಮಡಿವಾಳ ಮಾಚಿದೇವ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
    ಮಡಿಕಟ್ಟೆ (ಧೋಬಿಘಾಟ್) ವೃತ್ತಿಪರ ಮಡಿವಾಳರ ಸಂಘ ಹಾಗೂ ಶ್ರೀ ಮಡಿವಾಳ ಮಾಚಿದೇವ ಜಿಲ್ಲಾ ಸಂಘದ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಎದುರಿನ ಮಡಿಕಟ್ಟೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ಶ್ರೀ ಬನ್ನಿ ಮಹಾಂಕಾಳಿದೇವಿ ಪೂಜಾ ಮಹೋತ್ಸವದಲ್ಲಿ ಮಾತನಾಡಿದರು.
    ಜನೋತ್ಸವದಲ್ಲಿ ಮಡಿವಾಳ ಸಮುದಾಯವನ್ನು ಪ.ಜಾತಿಗೆ ಸೇರ್ಪಡೆ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರ ಎಲ್ಲ ಜಿಲ್ಲೆಗಳಲ್ಲಿ ಹೋರಾಟ, ಪ್ರತಿಭಟನೆ ನಡೆಸಲಾಗುವುದು. ಅದಕ್ಕೂ ಮುನ್ನ ಸಿಎಂ ಬಳಿಗೆ ನಿಯೋಗ ಹೋಗಲಾಗುವುದು ಎಂದು ತಿಳಿಸಿದರು.
    ಮಡಿವಾಳ ಸೇರಿದಂತೆ ಕಾಯಕ ಸಮುದಾಯಗಳು ಹಿಂದುಳಿಯುವ ಸ್ಥಿತಿಯಿದೆ. ಯಾವುದೇ ಸರ್ಕಾರಗಳು, ಜನಪ್ರತಿನಿಧಿಗಳು ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ಸಮುದಾಯದ ಏಳಿಗೆ, ಕಾಯಕಕ್ಕೆ ಮೌಲ್ಯ ನೀಡುವ, ಕುಂದುಕೊರತೆ ಬಗೆಹರಿಸುವ ಕಿಂಚಿತ್ತೂ ಸೌಜನ್ಯ ರಾಜಕಾರಣಿಗಳಿಗೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸಮುದಾಯ ಬೆಳೆಸುವ ನಿಟ್ಟಿನಲ್ಲಿ ನಾವು ಮಾನಸಿಕವಾಗಿ ಸಿದ್ಧರಾಗಬೇಕು. ನಮ್ಮ ಮಕ್ಕಳು ಉತ್ತಮ ಸ್ಥಿತಿಗೆ ಬಂದು ಉನ್ನತ ಹುದ್ದೆ ಅಲಂಕರಿಸಬೇಕು. ಆರ್ಥಿಕ ಬದಲಾವಣೆಯ ಮೂಲಕ ಸಮುದಾಯ ಕಟ್ಟುವುದು ಸುಳ್ಳು. ಸ್ಫೂರ್ತಿದಾಯಕ ಮಾತುಗಳು ಶೋಷಿತರಿಗೆ ಶಕ್ತಿ ತುಂಬುತ್ತವೆ ಎಂದರಲ್ಲದೆ, ಮಡಿಕಟ್ಟೆ ಮಡಿಯ ದೇವಾಲಯ ಆಗಬೇಕು. ದುಶ್ಚಟಗಳ ತಾಣವಾಗಬಾರದು ಎಂದು ಕಿವಿಮಾತು ಹೇಳಿದರು.
    ಸಂಸದ ಡಾ.ಜಿ.ಎಂ. ಸಿದ್ಧೇಶ್ವರ್ ಮಾತನಾಡಿ, ಮಡಿವಾಳ ಸಮಾಜ ಎಲ್ಲ ಸಮುದಾಯಗಳಿಗೆ ಬಟ್ಟೆ ಶುಭ್ರ ಮಾಡಿಕೊಡುವ ಸಮುದಾಯ. ಸಮಾಜ ಪ್ರಗತಿ ಹೊಂದಬೇಕಾದರೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
    ಸಮಾಜದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ ಮಾತನಾಡಿ, ಮಡಿವಾಳ ಸಮುದಾಯವು ನಮಗೆ ಬೇಕಾದ ಹಕ್ಕು ಪಡೆಯಲು ಹೋರಾಟ ಮಾಡುವ ಅಗತ್ಯವಿದೆ. ಪ. ಜಾತಿಗೆ ಸೇರ್ಪಡೆ, ಉಚಿತ ವಿದ್ಯುತ್ ಸೇರಿ ಹಲವು ಬೇಡಿಕೆ ಈಡೇರಿಸಿಕೊಳ್ಳಲು ಜೈಲು ಸೇರಿದರೂ ಸಹ ಸವಲತ್ತು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
    ಮಡಿಕಟ್ಟೆ ವೃತ್ತಿಪರ ಮಡಿವಾಳ ಸಂಘದ ಅಧ್ಯಕ್ಷ ಜಿ. ಕಿಶೋರ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆರ್. ಮಲ್ಲೇಶಪ್ಪ, ಎಂ.ಎನ್. ಶಿವಮೂರ್ತಪ್ಪ, ಡೈಮಂಡ್ ಮಂಜುನಾಥ್, ಜಿ. ವಿಜಯಕುಮಾರ್, ನಾಗಮ್ಮ, ಪತ್ರಕರ್ತ ಎಂ.ವೈ. ಸತೀಶ್, ಮಡಿಕಟ್ಟೆಯ ಆರ್.ಎಂ. ರವಿ, ಬಿ. ಬಸವರಾಜು, ಎಚ್. ಫಕ್ಕೀರಪ್ಪ, ಹನುಮಂತಪ್ಪ, ಎಚ್. ಪ್ರವೀಣ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts