More

    ಚಿಗರಿ ದಾಳಿಗೆ ಬೆಳೆ ಹಾನಿ

    ಹುಬ್ಬಳ್ಳಿ: ಈಗಷ್ಟೇ ಕುಡಿಯೊಡೆದು ಬೆಳವಣಿಗೆ ಹಂತದಲ್ಲಿರುವ ಮುಂಗಾರು ಹಂಗಾಮಿನ ಬೆಳೆಗಳ ಮೇಲೆ ಚಿಗರಿ ಹಿಂಡು ದಾಳಿ ಮಾಡುವ ಮೂಲಕ ರೈತರ ನಿದ್ದೆಗೆಡಿಸಿವೆ.

    ತಾಲೂಕಿನ ಅಮರಗೋಳ, ಧಾರವಾಡ ತಾಲೂಕಿನ ನವಲೂರ, ಹೆಬ್ಬಳ್ಳಿ, ಶಿವಳ್ಳಿ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ ಹಿಂಡು ಹಿಂಡಾಗಿ ಇವು ಕಾಣಿಸಿಕೊಳ್ಳುತ್ತಿವೆ. ಬಿತ್ತನೆ ಮಾಡಿದ ಜಮೀನುಗಳಲ್ಲಿ ಚಿಗರಿ, ಜಿಂಕೆಗಳು ಓಡಾಡಿ ಈಗಷ್ಟೇ ಬೆಳೆದಿರುವ ಬೆಳೆಗಳ ಚಿಗುರುಗಳನ್ನು ತಿಂದು ಹಾಕುತ್ತಿವೆ ಎಂದು ರೈತರು ದೂರಿದ್ದಾರೆ.

    ನಿರಂತರ ಮಳೆ ಸುರಿಯುತ್ತಿರುವುದರಿಂದ ಜಮೀನು ಹಸಿಯಾಗಿದೆ. ಈ ಸಂದರ್ಭದಲ್ಲಿ ಚಿಗರಿಗಳು ಹೊಲಕ್ಕೆ ನುಗ್ಗುತ್ತಿರುವುದರಿಂದ ಬೆಳೆಗಳು ಹಾಳಾಗುತ್ತಿವೆ. ಸಸಿ ಹಂತದಲ್ಲಿರುವ ಬೆಳೆಯನ್ನು ತಿನ್ನುವುದರಿಂದ ಅವು ಮುಂದೆ ಬೆಳವಣಿಗೆಯಾಗುವುದಿಲ್ಲ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಚಿಗರಿ ಹಿಂಡು ಜಮೀನುಗಳಿಗೆ ನುಗ್ಗದಂತೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಮರಗೋಳದ ಸಿದ್ದಪ್ಪ ಡೊಂಕನವರ ಹಾಗೂ ಇತರರು ಆಗ್ರಹಿಸಿದ್ದಾರೆ.

    ಕೆಲವೆಡೆ ಚಿಗರಿ, ಜಿಂಕೆಗಳ ದಾಳಿಯಾಗುತ್ತಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ತುರ್ತು ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ತಿಳಿಸಿದ್ದಾರೆ.

    ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ಹಾಳಾದರೆ ರೈತರು ಸೂಕ್ತ ದಾಖಲೆಗಳೊಂದಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಸರ್ಕಾರದ ಮಾರ್ಗದರ್ಶಿ ಪ್ರಕಾರ ಹಾನಿಯಾದ ಜಮೀನುಗಳ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts