More

    ಚಿಕ್ಕಪುಟ್ಟ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

    ರಾಣೆಬೆನ್ನೂರ: ಈ ಹಿಂದೆ ಸಣ್ಣಪುಟ್ಟ ಜಗಳ, ಗಲಾಟೆ ಮತ್ತಿತರ ಅಪರಾಧ ನಡೆದರೂ ಪೊಲೀಸ್ ಠಾಣೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು. ಆದರೀಗ ಕೇಂದ್ರ ಗೃಹ ಇಲಾಖೆ ಜಾರಿಗೆ ತಂದ 112 ತುರ್ತು ಸ್ಪಂದನಾ ವಾಹನ ವ್ಯವಸ್ಥೆಯಿಂದ ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರೆಯುತ್ತಿದೆ.

    ಪೊಲೀಸರ ನೆರವು ಪಡೆಯಲು ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ ಆರಂಭಗೊಂಡ ‘ಒಂದೇ ಭಾರತ ಒಂದೇ ತುರ್ತು ಕರೆ’ ಪರಿಕಲ್ಪನೆಯ 112 ತುರ್ತು ಸ್ಪಂದನಾ ವಾಹನದ ಸಹಾಯವಾಣಿಗೆ ಇಲ್ಲಿಯವರೆಗೆ 1273 ಕರೆಗಳು ಬಂದಿವೆ. ಈ ಪೈಕಿ 572 ಪ್ರಕರಣಗಳನ್ನು ವಾಹನದ ಸಿಬ್ಬಂದಿ ಸ್ಥಳದಲ್ಲೇ ಬಗೆಹರಿಸಿದ್ದಾರೆ. ಇನ್ನುಳಿದ ಪ್ರಕರಣಗಳಿಗೆ ಸಂಬಂಧಿಸಿ ನೊಂದವರಿಗೆ ತುರ್ತು ಸಹಾಯ ಮಾಡಿ ಆಯಾ ಸ್ಥಳದ ಸಮೀಪವಿರುವ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.

    ನಾನಾ ಬಗೆಯ ಪ್ರಕರಣ: 112 ತುರ್ತು ಸ್ಪಂದನಾ ಸಹಾಯವಾಣಿಗೆ ನಗರ ಹಾಗೂ ಹಳ್ಳಿಗಳಲ್ಲಿ ನಡೆಯುವ ಚಿಕ್ಕಪುಟ್ಟ ಗಲಾಟೆ, ಗಂಡ-ಹೆಂಡತಿ ಜಗಳ, ಮಹಿಳಾ ದೌರ್ಜನ್ಯ, ಕಳ್ಳತನ, ಅಪಘಾತ ಸೇರಿ ನಾನಾ ಬಗೆಯ ಪ್ರಕರಣಗಳ ಕುರಿತು ಕರೆಗಳು ಬಂದಿವೆ. ಇವುಗಳಲ್ಲಿ ಈವರೆಗೆ 294 ಚಿಕ್ಕಪುಟ್ಟ ಜಗಳ, 61 ಅಪಘಾತ, 4 ಮಹಿಳೆಯರ

    ಮೇಲಿನ ದೌರ್ಜನ್ಯ, ಸುಖಾಸುಮ್ಮನೆ ಜಗಳ ಮಾಡುವ 24 ಹಾಗೂ ಇತರ 189 ಪ್ರಕರಣಗಳಿಗೆ 112 ತುರ್ತು ವಾಹನದ ಸಿಬ್ಬಂದಿ ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಅಲ್ಲದೆ,

    ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿರುವ ವಿಷಯ ತಿಳಿದು ಆತನನ್ನು ರಕ್ಷಿಸಿದ್ದಾರೆ.

    ಕರೆ ಮಾಡಿದ ತಕ್ಷಣ ಸ್ಥಳಕ್ಕೆ: ಜಿಲ್ಲೆಯಲ್ಲಿ 112 ತುರ್ತು ಸೇವೆಗಾಗಿ 13 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಒಂದು ವಾಹನದಲ್ಲಿ ಒಬ್ಬ ಎಎಸ್​ಐ, ಕಾನ್​ಸ್ಟೇಬಲ್, ಚಾಲಕ ಇರುತ್ತಾರೆ. ಪೊಲೀಸ್, ಅಗ್ನಿಶಾಮಕದಳ, ಆಂಬುಲೆನ್ಸ್ ಸೇವೆ ಸೇರಿ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ ವ್ಯವಸ್ಥೆಯಡಿ ಎಲ್ಲಿಂದಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿ ರಕ್ಷಣೆ ಒದಗಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 5ರಿಂದ 17 ನಿಮಿಷಗಳಲ್ಲಿ ವಾಹನ ತಲುಪುತ್ತದೆ. 24 ಗಂಟೆಯೂ ಸೇವೆ ಲಭ್ಯವಿರುವುದರಿಂದ ಜನತೆಗೆ ಇನ್ನೂ ಅನುಕೂಲವಾಗಿದೆ.

    ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 112 ತುರ್ತು ಸ್ಪಂದನಾ ವಾಹನ ಸೇವೆ ಆರಂಭಿಸಲಾಗಿತ್ತು. ಈಗ ವಾಹನ ಸೇವೆಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಜಿಲ್ಲೆಯ ಯಾವ ಮೂಲೆಯಿಂದಲೂ ಕರೆ ಬಂದರೂ ತಕ್ಷಣ 112 ವಾಹನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆಗೆ ಪರಿಹಾರ ಕೊಡಿಸುತ್ತಿದ್ದಾರೆ. ಗಂಭೀರ ಪ್ರಕರಣಗಳಿದ್ದಾಗ ಇವುಗಳನ್ನು ಠಾಣೆಯ ಗಮನಕ್ಕೆ ತರುತ್ತಿದ್ದಾರೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು.

    | ಕೆ.ಜೆ. ದೇವರಾಜ ಎಸ್ಪಿ ಹಾವೇರಿ

    ತಪ್ಪಿದ ಸಾರ್ವಜನಿಕರ ಗೋಳಾಟ

    ಜಿಲ್ಲೆಯಲ್ಲಿ 21 ಪೊಲೀಸ್ ಠಾಣೆಗಳಿವೆ. ಸಣ್ಣಪುಟ್ಟ ಜಗಳ, ಆಸ್ತಿ ವಿವಾದ, ಪತಿ-ಪತ್ನಿಯರ ಜಗಳ, ಅಪಘಾತ, ಕಳ್ಳತನ ಪ್ರಕರಣ ಸೇರಿ ನಿತ್ಯವೂ ನಾನಾ ಬಗೆಯ ಅಪರಾಧ ನಡೆಯುತ್ತವೆ. ಜನತೆ ಪ್ರತಿಯೊಂದನ್ನು ಠಾಣೆಗೆ ಹೋಗಿಯೇ ಸರಿಪಡಿಸಿಕೊಳ್ಳಬೇಕಿತ್ತು. ಆದರೆ, ಪೊಲೀಸ್ ಇಲಾಖೆ 112 ತುರ್ತು ಸ್ಪಂದನಾ ವಾಹನ ಮೂಲಕ ಜನಸ್ನೇಹಿ ಆಗಿರುವುದರಿಂದ ಸಾರ್ವಜನಿಕರು ಚಿಕ್ಕಪುಟ್ಟ ಜಗಳಕ್ಕೂ ಪೊಲೀಸ್ ಠಾಣೆಗೆ ಅಲೆದಾಡುವ ಗೋಳಾಟ ತಪ್ಪಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts