More

    ಗಬ್ಬೆದ್ದ ರಾಣೆಬೆನ್ನೂರ ಮಿನಿ ವಿಧಾನಸೌಧ

    ರಾಣೆಬೆನ್ನೂರ: ಒಂದೆಡೆ ಕಸದ ರಾಶಿ, ಮತ್ತೊಂದೆಡೆ ಹಂದಿಗಳ ಕಾಟ, ಗೋಡೆಗಳೇ ಮೂತ್ರ ವಿಸರ್ಜನೆ ಸ್ಥಳಗಳು, ಎಲ್ಲೆಂದರಲ್ಲಿ ಗುಡ್ಡೆ ಹಾಕಿರುವ ಕಸದ ರಾಶಿ…

    ಇವು ನಗರದ ಮಿನಿ ವಿಧಾನಸೌಧದಲ್ಲಿ ಕಂಡು ಬರುವ ದೃಶ್ಯಗಳು. ಮಿನಿ ವಿಧಾನಸೌಧದ ಆವರಣಕ್ಕೆ ಕಾಲಿಟ್ಟರೆ ಸಾಕು ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಎಲ್ಲೆಂದರಲ್ಲಿ ಉಗುಳಿದ ಕಲೆಗಳು ಕಾಣುತ್ತವೆ. ಆವರಣದ ಶೌಚಗೃಹಕ್ಕೆ ಬೀಗ ಹಾಕಿದ ಕಾರಣ ಸಾರ್ವಜನಿಕರು ಕಟ್ಟಡದ ಗೋಡೆಗಳನ್ನೇ ಮೂತ್ರ ವಿಜರ್ಸನೆ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಮದ್ಯದ ಹಾಗೂ ಪಾನ್ ಮಸಾಲಾ ತಿಂದು ಎಸೆದ ಪೌಚ್​ಗಳು ಆವರಣದ ಸುತ್ತಲೂ ಬಿದ್ದಿದ್ದು, ಗಬ್ಬು ನಾರುತ್ತಿದೆ. ಮಿನಿ ವಿಧಾನಸೌಧದಲ್ಲಿ ಕಂದಾಯ, ನೋಂದಣಿ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು, ಪಡಸಾಲೆ ಸೇರಿ 10ಕ್ಕೂ ಅಧಿಕ ಕಾರ್ಯಾಲಯಗಳಿವೆ. ಇಲ್ಲಿಗೆ ನಿತ್ಯವೂ ನೂರಾರು ಜನ ಭೇಟಿ ನೀಡುತ್ತಾರೆ. ಇತರರಿಗೆ ಸ್ವಚ್ಛ ಭಾರತ ಅಭಿಯಾನ ನೀತಿ ಪಾಠ ಹೇಳುವ ಅಧಿಕಾರಿಗಳು ತಮ್ಮ ಕಟ್ಟಡದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ನಿಷ್ಕಾಳಜಿ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮಿನಿ ವಿಧಾನಸೌಧಕ್ಕೆ ಬರುವ ಜನರ ಅನುಕೂಲಕ್ಕಾಗಿ ಮಹಿಳೆ ಹಾಗೂ ಪುರುಷರಿಗಾಗಿ ಪ್ರತ್ಯೇಕ ಶೌಚಗೃಹ ನಿರ್ವಿುಸಲಾಗಿದೆ. ಆದರೆ, ನೀರಿನ ಕೊರತೆಯ ನೆಪ ಹೇಳಿ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ. ಆದ್ದರಿಂದ ಜನತೆ ಕಚೇರಿಯ ಹಿಂಭಾಗದ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಹಿಳೆಯರ ಕಷ್ಟವಂತೂ ಹೇಳತೀರದು. ಕಟ್ಟಡದ ಹೊರಗಿನ ವಾತಾವರಣ ಗಬ್ಬೆದ್ದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಅಧಿಕವಾಗುತ್ತಿದೆ. ಕಚೇರಿ ಕೆಲಸಕ್ಕೆ ಬರುವವರು ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ತಹಸೀಲ್ದಾರರು ಕ್ರಮ ಕೈಗೊಂಡು ಸಮಸ್ಯೆಗಳಿಗೆ ಮುಕ್ತಿ ಹಾಡಬೇಕಿದೆ.

    ನೀರಿನ ಸಮಸ್ಯೆಯಿಂದ ಶೌಚಗೃಹ ಬಂದ್ ಮಾಡಲಾಗಿತ್ತು. ಅದನ್ನು ಆರಂಭಿಸಿದರೂ ಜನತೆ ಸ್ವಚ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಇದರಿಂದ ತೊಂದರೆ ಆಗುತ್ತಿದೆ. ಕೂಡಲೆ ಸಿಬ್ಬಂದಿಗೆ ಸೂಚಿಸಿ ಶೌಚಗೃಹ ಆರಂಭಿಸಲು ಹಾಗೂ ಸ್ವಚ್ಛತೆ ಕಾಪಾಡಲು ಸೂಚಿಸುತ್ತೇನೆ. ಜತೆಗೆ ಸರ್ಕಾರದ ಯಾವುದಾದರೂ ಅನುದಾನದಲ್ಲಿ ಪ್ರತ್ಯೇಕ ಶೌಚಗೃಹ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು.
    | ಶಂಕರ ಜಿ.ಎಸ್. ತಹಸೀಲ್ದಾರ್

    ತಹಸೀಲ್ದಾರ್ ಕಚೇರಿಗೆ ಬಂದವರು ಮೂತ್ರ ವಿಸರ್ಜನೆ ಮಾಡಲು ಹೋದರೆ ವಾಂತಿ ಬರುತ್ತದೆ. ಪ್ರತಿ ಗ್ರಾಮಗಳಿಗೂ ಶೌಚಗೃಹ ನಿರ್ವಿುಸಿಕೊಳ್ಳುವ ಕುರಿತು ತಿಳಿ ಹೇಳುವ ಅಧಿಕಾರಿಗಳ ಕಚೇರಿಯಲ್ಲಿಯೇ ಶೌಚಗೃಹವಿಲ್ಲ ಎಂದರೆ ವಿಪರ್ಯಾಸ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.
    | ಮಂಜುನಾಥ ಎಸ್. ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts