More

    ಚಿಕಿತ್ಸಾ ಸಲಕರಣೆ ದಾಸ್ತಾನಿಗೆ ಆದ್ಯತೆ ನೀಡಿ

    ಧಾರವಾಡ: ಕರೊನಾ ಚಿಕಿತ್ಸೆಗೆ ಗುರುತಿಸಲಾಗಿರುವ ಆಸ್ಪತ್ರೆಗಳಲ್ಲಿ ಪಿಪಿಇ, ಎನ್95 ಮಾಸ್ಕ್ ಸೇರಿ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಸಾಕಷ್ಟು ದಾಸ್ತಾನು ಮಾಡಿ ಇಟ್ಟುಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತಾ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಕೋವಿಡ್ 19 ನಿರ್ವಹಣೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕರೊನಾ ನಿಯಂತ್ರಣ, ಆರೋಗ್ಯ ಸೇವೆಗೆ ಸರ್ಕಾರ ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್ ಅಡಿ ಹಣ ಒದಗಿಸಿದೆ. ಚಿಕಿತ್ಸೆ ನೀಡುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಪ್ರಮಾಣೀಕರಿಸುವ ಉತ್ತಮ ಗುಣಮಟ್ಟದ ಪರ್ಸನಲ್ ಪೊ›ಟೆಕ್ಷನ್ ಗೇರ್, ಎನ್95 ಮಾಸ್ಕ್, ಸ್ಯಾನಿಟೈಸರ್ ದಾಸ್ತಾನು ಹೊಂದಿರಬೇಕು. ಖರೀದಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಬೇಕು. ಗುಣಮಟ್ಟದಲ್ಲಿ ರಾಜಿಗೆ ಅವಕಾಶವಿಲ್ಲ ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಹುಬ್ಬಳ್ಳಿ ಕಿಮ್ಸ್​ನಲ್ಲಿ 250 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಸಹ ಗುರುತಿಸಲಾಗಿದೆ. ವಲಸೆ ಬಂದಿರುವ 349 ನಿರಾಶ್ರಿತ ಕಾರ್ವಿುಕರಿಗೆ ಸರ್ಕಾರಿ ಹಾಸ್ಟೆಲ್​ಗಳಲ್ಲಿ ವಸತಿ, ಊಟದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪೊಲೀಸ್ ಆಯುಕ್ತ ಆರ್. ದಿಲೀಪ, ಎಸ್​ಪಿ ವರ್ತಿಕಾ ಕಟಿಯಾರ್, ಡಿಸಿಪಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದಿನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಡಾ. ಲಕ್ಷ್ಮೀಕಾಂತ, ಇತರರಿದ್ದರು.

    ಖಾಸಗಿ ವೈದ್ಯರೂ ಕೈಜೋಡಿಸಿ: ಕರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಖಾಸಗಿ ವೈದ್ಯರು ಕೂಡಾ ಕೈಜೋಡಿಸಬೇಕು. ತಮ್ಮ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದ ಮತ್ತು ಉಳಿದ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆ ಸ್ಥಗಿತಗೊಳಿಸಬಾರದು. ಐಎಂಎ ಮತ್ತು ಎಲ್ಲ ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳ ವೈದ್ಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಜನಸಂದಣಿಯನ್ನು ಕಡಿಮೆ ಮಾಡಲು ಸಹಕರಿಸಬೇಕು ಎಂದು ಬೃಹತ್ ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಹಾಗೂ ಖಾಸಗಿ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ಬಹುತೇಕ ಖಾಸಗಿ ಆಸ್ಪತ್ರೆಗಳು ಸ್ಥಗಿತಗೊಂಡಿರುವುದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚು ಹೊರೆ ಬೀಳುತ್ತಿದೆ. ಐಎಂಎ ಹಾಗೂ ಕೆಪಿಎಂಇಯಲ್ಲಿ ನೋಂದಣಿಯಾಗಿರುವ ಎಲ್ಲ ಖಾಸಗಿ ನರ್ಸಿಂಗ್ ಹೋಂ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ. ಅಗತ್ಯ ಬಿದ್ದರೆ ಪೊಲೀಸ್ ಭದ್ರತೆ ಒದಗಿಸಲು ಸಿದ್ಧರಿದ್ದೇವೆ ಎಂದರು. ಖಾಸಗಿ ಆಸ್ಪತ್ರೆಗಳಿಗೆ ಸೇವೆ ನೀಡಲು ತೊಂದರೆಗಳಿದ್ದರೆ ಪರಿಹರಿಸಲು ಜಿಲ್ಲಾಡಳಿತ ಸಹಕಾರ ನೀಡುತ್ತದೆ. ತುರ್ತು ಹಾಗೂ ಸಾಮಾನ್ಯ ಚಿಕಿತ್ಸೆಗಳು ಜನರಿಗೆ ಸಿಗಬೇಕು. ವೈದ್ಯರು ಲಾಭದ ಉದ್ದೇಶವಿಲ್ಲದೆ ಸೇವೆ ನೀಡಬೇಕು ಎಂದು ವಿನಂತಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತಾ ಮಾತನಾಡಿ, ಕೋವಿಡ್ 19 ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳು ನಿಭಾಯಿಸುತ್ತಿವೆ. ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ವೈದ್ಯರು ಸರ್ಕಾರದ ಜೊತೆಗೆ ನಿಲ್ಲಬೇಕು ಎಂದರು. ಶಾಸಕ ಅರವಿಂದ ಬೆಲ್ಲದ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ಐಎಂಎ ಅಧ್ಯಕ್ಷ ಡಾ. ಕ್ರಾಂತಿಕಿರಣ್, ಎಸ್​ಡಿಎಂ ಆಸ್ಪತ್ರೆಯ ಡಾ. ಕಿರಣ ಹೆಗಡೆ, ಡಾ. ಸುಧೀರ ಜಂಬಗಿ, ಡಾ. ಸುಭಾಸ ಬಬ್ರುವಾಡ, ಡಾ. ಆನಂದ ಪಾಂಡುರಂಗಿ, ಡಾ. ಸುಶ್ರುತ, ಡಾ. ಮಂಜುನಾಥ, ಇತರರು ಮಾತನಾಡಿದರು.

    ಜಾತ್ರೆ ಮುಂದೂಡಿಕೆ: ಧಾರವಾಡ ನಗರದ ಕಸಬಾ ಗೌಡರ ಓಣಿಯ ಕಸಬಾ ಶ್ರೀ ದ್ಯಾಮವ್ವ ದುರ್ಗವ್ವ ದೇವಸ್ಥಾನದ ನೂತನ ತೇರಿನ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಏ. 14ರಿಂದ ಏ. 22ರವರೆಗೆ ಏರ್ಪಡಿಸಲಾಗಿತ್ತು. ಆದರೆ, ಕರೊನಾದಿಂದ ಜನ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಮುಂದೂಡಲಾಗಿದೆ. ಲಾಕ್​ಡೌನ್ ಮುಗಿದ ನಂತರ ಸರ್ಕಾರದ ಆದೇಶದ ಪ್ರಕಾರ ದೇವಸ್ಥಾನದ ಕಮಿಟಿ ಸಭೆ ಸೇರಿ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಟ್ರಸ್ಟ್ ಉಪಾಧ್ಯಕ್ಷ ಆನಂದ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts