More

    ಚಿಂಚೋಳಿಯಲ್ಲಿ ಮುಂದುವರಿದ ಮಳೆ, 71 ಮನೆಗಳಿಗೆ ಹಾನಿ

    ಚಿಂಚೋಳಿ: ಗಡಿ ತಾಲೂಕಿನಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ನದಿ-ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಮಂಗಳವಾರದವರೆಗೂ ತಾಲೂಕಿನಲ್ಲಿ ಸುಮಾರು 71 ಮನೆಗಳಿಗೆ ಹಾನಿಯಾಗಿದೆ.

    ಸೋಮವಾರ ರಾತ್ರಿ ನಾಗರಾಳ ಹಾಗೂ ಚಂದ್ರಂಪಳ್ಳಿ ಜಲಾಶಯಗಳಿಂದ ಹೆಚ್ಚಿನ ನೀರನ್ನು ಭೋಗಾವತಿಗೆ ಹರಿಸಿದ್ದು, ಮಂಗಳವಾರ ನದಿ ಪಾತ್ರದ ಗಾರಂಪಳ್ಳಿ, ತಾಜಲಾಪುರ, ಕನಕಪುರ, ಗರಗಪಳ್ಳಿ ಸೇತುವೆಗಳು ಜಲಾವೃತಗೊಂಡವು. ಇದರಿಂದ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರಿಗೆ ಜಲ ದಿಗ್ಬಂಧನ ಹಾಕಿದಂತಾಗಿದೆ. ಚಿಂಚೋಳಿಯ ಬಡಿದರ್ಗಾ ಹಾಗೂ ಗರಗಪಳ್ಳಿಯ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ದವಸ- ಧಾನ್ಯ ಹಾಳಾಗಿವೆ.

    ನಾಗರಾಳ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರನ್ನು ಭೋಗಾವತಿ ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಹಳ್ಳಿ ಜನರು ಎಚ್ಚರ ವಹಿಸಬೇಕು ಎಂದು ಸಹಾಯಕ ಅಭಿಯಂತರ ವಿನಾಯಕ ರಾಠೋಡ್ ತಿಳಿಸಿದ್ದಾರೆ.

    ಕುಂಚಾವರಂನಲ್ಲಿ 90.4 ಮಿಮೀ ಮಳೆ ಸುರಿದರೆ, ಚಿಂಚೋಳಿ-49, ನಿಡಗುಂದಾ-40, ಚಿಮ್ಮನಚೋಡ- 56.2, ಐನಾಪುರ- 72.5, ಸುಲೇಪೇಟ- 32.8 ಮಿಮೀ. ಮಳೆಯಾಗಿದೆ. ಕೃಷಿ ಇಲಾಖೆಯಿಂದ ಜಮೀನುಗಳಿಗೆ ನೀರು ನುಗ್ಗಿ, ಬೆಳೆ ಹಾನಿಯಾದ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ಗಾರಂಪಳ್ಳಿ ಸುತ್ತಮುತ್ತಲಿನ ಸುಮಾರು 150ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಬೆಳೆ ಹಾನಿಯಾಗಿದೆ. ಇನ್ನೂಳಿದ ನದಿ ಪಾತ್ರದ ಗ್ರಾಮಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. 2-3 ದಿನದಲ್ಲಿ ಸಮಗ್ರ ವರದಿ ಸಿಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ್ ಮಾಹಿತಿ ನೀಡಿದ್ದಾರೆ.

    ಚಂದ್ರಂಪಳ್ಳಿ ಜಲಾಶಯಕ್ಕೆ ಸರಳ ನದಿಯಿಂದ 4900 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ 4302 ಕ್ಯೂಸೆಕ್ ನೀರನ್ನು ಭೋಗಾವತಿ ನದಿಗೆ ಹರಿಸಲಾಗಿದೆ. ಮಂಗಳವಾರ ರಾತ್ರಿ ಈ ಪ್ರಮಾಣ ಹೆಚ್ಚಾಗಲಿದ್ದು, ಸುತ್ತಲಿನ ಹಳ್ಳಿಗಳ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಚಂದ್ರಂಪಳ್ಳಿ ಜಲಾಶಯದ ಅಭಿಯಂತರ ಚೇತನ ಕಳಸ್ಕರ್ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts