More

    ಚಾಳಿಬಿಡದ ಮೋಸಗಾರ; ಆ ಕ್ಷಣ…

    ಚಾಳಿಬಿಡದ ಮೋಸಗಾರ; ಆ ಕ್ಷಣ...

    ಹಾವೇರಿಯ ಬಡ ಕುಟುಂಬದಲ್ಲಿ ಜನಿಸಿದ ಸತೀಶ್ ಪದವಿ ನಂತರ ಬೆಂಗಳೂರಿನ ಜಾಹೀರಾತು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ. ಗ್ರಾಹಕರಿಂದ ಬರಬೇಕಾದ ಹಣವನ್ನು ಸಂಗ್ರಹಿಸಿ ಕಂಪನಿಗೆ ಕಟ್ಟುವುದು ಅವನ ಕೆಲಸವಾಗಿದ್ದರೂ ಸೂಕ್ಷ್ಮಮತಿಯಾಗಿದ್ದ ಸತೀಶ್ ಕೆಲವೇ ವರ್ಷಗಳಲ್ಲಿ ಜಾಹೀರಾತು ಜಗತ್ತಿನ ಎಲ್ಲಾ ಮಜಲುಗಳನ್ನೂ ಅರ್ಥಮಾಡಿಕೊಂಡ. ರೂಪದರ್ಶಿಗಳನ್ನು ಹುಡುಕಿ ಅವರಿಗೆ ಗ್ಲಾಮರ್ ಛಾಯಾಗ್ರಾಹಕರ ಮೂಲಕ ಫೋಟೋ ಶೂಟ್ ಮಾಡಿಸುವುದು, ಹೊಸ ಜಾಹೀರಾತುದಾರರನ್ನು ಪರಿಚಯಮಾಡಿಕೊಳ್ಳುವುದು, ಮಾಧ್ಯಮದವರ ಸಂಪರ್ಕ ಮುಂತಾದವನ್ನು ಕಲಿತ.

    ಜಾಹೀರಾತು ಪ್ರಪಂಚಕ್ಕೂ ಸಿನಿಮಾಕ್ಕೂ ಹತ್ತಿರದ ನಂಟಿರುವ ಕಾರಣ ಸತೀಶ್ ಹಲವಾರು ಸಿನಿಮಾ ನಟನಟಿಯರನ್ನು ಪರಿಚಯಮಾಡಿಕೊಂಡಿದ್ದ. ಪ್ರತಿರಾತ್ರಿಯೂ ಪಾರ್ಟಿಗಳಿಗೆ ಹೋಗುತ್ತಾ ಆತ ಕೆಲವು ನಟಿಯರಿಗೆ ಆಪ್ತನಾದ. ಕಾಲಕ್ರಮೇಣ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹುಚ್ಚು ಹಿಡಿದ ಫಲವಾಗಿ ಅವನಿಗೆ ಗಳಿಸುತ್ತಿದ್ದ ಹಣ ಸಾಲದಾಗುತ್ತಾ ಬಂದಿತು. ಹೀಗಾಗಿ ಕಂಡಕಂಡವರಿಂದ ಸಾಲಮಾಡತೊಡಗಿದ. ಸಾಲಗಾರರ ಕಾಟ ಜಾಸ್ತಿಯಾದಾಗ ಸತೀಶ್ ತನ್ನ ಸಂಸ್ಥೆಗಾಗಿ ಸಂಗ್ರಹಿಸಿದ್ದ ಹಣವನ್ನು ದುರುಪಯೋಗ ಮಾಡಿದ. ಸಂಸ್ಥೆ ಅವನನ್ನು ಕೆಲಸದಿಂದ ವಜಾಮಾಡಿತು. ಮುಂದೇನು ಮಾಡುವುದೆಂದು ತೋಚದ ಆತ ತನ್ನ ತವರೂರಿಗೆ ವಾಪಸಾಗಿ ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಗೆ ಸೇರಿದ. ಆದರೆ ಗ್ಲಾಮರ್ ಪ್ರಪಂಚದ ಗೀಳು ಅಂಟಿದ್ದ ಕಾರಣ ಕೆಲವೇ ವಾರಗಳ ಬಳಿಕ ಮತ್ತೆ ಬೆಂಗಳೂರಿಗೇ ವಾಪಸಾಗಿ ಕೆಲಸಗಳಿಗಾಗಿ ಹುಡುಕಾಡತೊಡಗಿದ. ಅವನ ಅವ್ಯವಹಾರದ ಬಗ್ಗೆ ಮಾಧ್ಯಮ ರಂಗದವರಿಗೆ ಮಾಹಿತಿಯಿದ್ದ ಕಾರಣ ಅವನಿಗೆ ಯಾವ ಕೆಲಸವೂ ಸಿಗಲಿಲ್ಲ. ಆದರೂ ಬಣ್ಣದ ಜಗತ್ತಿನವರೊಂದಿಗೆ ನಂಟನ್ನು ಮುಂದುವರಿಸಿದ್ದ ಸತೀಶ್ ಪಾರ್ಟಿಗಳಿಗೆ ಹೋಗುವುದನ್ನೇನೂ ಕಡಿಮೆ ಮಾಡಲಿಲ್ಲ. ಆರಂಭದಿಂದಲೂ ಫೇಸ್​ಬುಕ್, ಇನ್​ಸ್ಟ್ಟಾಗ್ರಾಂ ಮತ್ತು ಟ್ವಿಟರ್​ಗಳಲ್ಲಿ ಚುರುಕಾಗಿದ್ದ ಆತ ತನ್ನ ಪುಟಗಳಲ್ಲಿ ತಾನು ವಿವಿಧ ಸಿನಿಮಾ ತಾರೆಯರೊಡನೆ ಪಾರ್ಟಿಗಳಲ್ಲಿ ಮೋಜು ಮಾಡುತ್ತಿರುವ ಫೋಟೋಗಳನ್ನು ಹಾಕುತ್ತಿದ್ದ. ಕೈಯಲ್ಲಿದ್ದ ಹಣವೆಲ್ಲಾ ಖರ್ಚಾದಾಗ ಮುಂದೇನು ಮಾಡುವುದೆಂದು ಸತೀಶನಿಗೆ ತೋಚದಾಯಿತು. ಆಗ ಅವನಿಗೊಂದು ಯೋಚನೆ ಹೊಳೆಯಿತು. ಆತ ಯುವಕ ಯುವತಿಯರಿಗೆ ಮಾಡೆಲಿಂಗ್ ಅವಕಾಶಗಳನ್ನು ಕೊಡಿಸುವೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ. ಸೂಕ್ತ ಅಭ್ಯರ್ಥಿಗಳಿಗೆ ಸಿನಿಮಾ ಮತ್ತು ಟೆಲಿವಿಷನ್​ಗಳಲ್ಲಿಯೂ ಅವಕಾಶ ಕೊಡಿಸುವೆನೆಂದು ಸಾರಿದ. ಆತ ಹೆಸರಾಂತ ನಟ ನಟಿಯರೊಡನೆ ತೆಗೆಸಿಕೊಂಡಿದ್ದ ಚಿತ್ರಗಳನ್ನು ನೋಡಿದ ಹಲವರು ಅವನನ್ನು ನಂಬಿ ಅವಕಾಶಗಳಿಗಾಗಿ ಸಂರ್ಪಸತೊಡಗಿದರು. ಇವರಲ್ಲಿ ಶ್ರೀಮಂತರೆಂದು ಕಂಡುಬಂದ ಕೆಲವು ಯುವತಿಯರನ್ನು ಆರಿಸಿಕೊಂಡು ಅವರನ್ನು ಸಂರ್ಪಸಿ, ‘ಸಿನಿಮಾ ಅಥವಾ ಟಿವಿ ನಟಿ ಅಥವಾ ರೂಪದರ್ಶಿಯಾಗಬೇಕಾದರೆ ಉತ್ತಮ ಅಂಗಸೌಷ್ಟವ ಹೊಂದಿರಬೇಕಾದ್ದು ಅತಿ ಮುಖ್ಯ, ಹೀಗಾಗಿ ವಿವಿಧ ಭಂಗಿಗಳಲ್ಲಿನ ನಿಮ್ಮ ಫೋಟೋಗಳನ್ನು ಕಳುಹಿಸಿಕೊಡಿ, ಅವನ್ನು ನಾನು ಜಾಹೀರಾತು ಕಂಪನಿಗಳಿಗೆ ಕಳುಹಿಸಿಕೊಟ್ಟು ಅವರ ಅಭಿಪ್ರಾಯವನ್ನು ನಿಮಗೆ ರವಾನಿಸುತ್ತೇನೆ’ ಎಂದು ಅವರಿಂದ ಫೋಟೋಗಳನ್ನು ತರಿಸಿಕೊಂಡ.

    ನಂತರ ಆ ಯುವತಿಯರ ವೈಯಕ್ತಿಕ ವಿವರಗಳನ್ನು ಕಲೆಹಾಕಿ ಕೆಲವರನ್ನು ಮತ್ತೆ ಸಂರ್ಪಸಿದ. ‘ಜಾಹೀರಾತು ಸಂಸ್ಥೆಯೊಂದು ನಿಮ್ಮನ್ನು ಹೆಸರಾಂತ ಆಭರಣ ಸಂಸ್ಥೆಯ ಜಾಹೀರಾತಿಗಾಗಿ ಶಾರ್ಟ್ ಲಿಸ್ಟ್ ಮಾಡಿದೆ. ನೀವು ಅದೇ ಸಂಸ್ಥೆಯ ಛಾಯಾಗ್ರಾಹಕರಿಂದ ಫೋಟೋ ಶೂಟ್ ಮಾಡಿಸಲು ತಿಳಿಸಿದ್ದಾರೆ. ಇದಕ್ಕಾಗಿ ಒಂದು ಲಕ್ಷ ರೂವರೆಗೆ ಖರ್ಚು ಬರುತ್ತದೆ. ನೀವು ಈ ಹಣವನ್ನು ನಾನು ನಮೂದಿಸಿದ ಅಕೌಂಟ್​ಗೆ ವರ್ಗಾವಣೆ ಮಾಡಿದ ನಂತರ ನಿಮ್ಮ ಫೋಟೋ ಶೂಟ್ ಮಾಡಿಸಲಾಗುವುದು’ಎಂದು ಅವರಿಗೆ ತಿಳಿಸಿದ. ದೇಶದ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದ ಆರು ಯುವತಿಯರು ಆತನ ಮಾತುಗಳಿಗೆ ಮರುಳಾಗಿ ಅವನು ಸೂಚಿಸಿದ ಬ್ಯಾಂಕ್ ಅಕೌಂಟ್​ಗಳಿಗೆ ಮತ್ತು ಆತ ಕೊಟ್ಟ ಕ್ಯೂಆರ್ ಕೋಡ್​ಗೆ ಹಣ ಹಾಕಿದರು. ಐದು ಲಕ್ಷ ರೂಗಳು ತನ್ನ ಬ್ಯಾಂಕ್ ಖಾತೆಗೆ ಜಮೆಯಾದ ಕೂಡಲೇ ಸತೀಶ್ ತನ್ನ ಫೇಸ್​ಬುಕ್ ಮತ್ತಿತರ ಅಕೌಂಟ್​ಗಳಲ್ಲದೇ ಬ್ಯಾಂಕ್ ಖಾತೆಯನ್ನೂ ಬಂದ್ ಮಾಡಿದ. ಆತನ ಬಗ್ಗೆ ಸೂಕ್ತ ವಿವರಗಳು ತಿಳಿಯದಿದ್ದ ಕಾರಣ ಯಾರೂ ಪೊಲೀಸರಿಗೆ ದೂರು ಕೊಡಲಿಲ್ಲ. ಇದರಿಂದ ಧೈರ್ಯ ಪಡೆದ ಸತೀಶ್ ಕೆಲವು ತಿಂಗಳ ನಂತರ ರಮೇಶ್ ಮತ್ತು ಮುಕುಂದ್ ಎನ್ನುವ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್​ಗಳನ್ನು ತೆರೆದ. ತಾನು ಸಿನಿಮಾ ನಟನಟಿಯರ ಜೊತೆ ಇದ್ದ ಫೋಟೋಗಳನ್ನು ಹಾಕಿ ತಾನೊಬ್ಬ ಸಹಾಯಕ ನಿರ್ದೇಶಕ ಎಂದು ಬಿಂಬಿಸಿದ. ಹಲವಾರು ಯುವಕ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಟಿವಿ ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿಕೊಂಡ. ತನ್ನ ಸಂಪರ್ಕಕ್ಕೆ ಬಂದ ಪರವೂರಿನ ಕೆಲವು ಯುವಕ ಯುವತಿಯರನ್ನು ಕೆಲವು ನಿರ್ದೇಶಕರಿಗೆ ಪರಿಚಯ ಮಾಡಿಕೊಟ್ಟು ಪುಟ್ಟ ಅವಕಾಶಗಳನ್ನು ಕೊಡಿಸಿ ಸಾಕಷ್ಟು ಹಣ ವಸೂಲಿ ಮಾಡಿದ. ‘ಮುಂದೆ ನಿಮಗೆ ಖಂಡಿತವಾಗಿಯೂ ದೊಡ್ಡ ಪಾತ್ರ ಕೊಡಿಸುತ್ತೇನೆ’ ಎಂದು ಅವರಿಂದ ಲಕ್ಷಾನುಗಟ್ಟಲೆ ಹಣ ಪಡೆದು ಅವರ ಸಂಪರ್ಕವನ್ನೇ ಕಡಿತಗೊಳಿಸಿದ. ಇದೇ ರೀತಿ ಹಲವರಿಗೆ ಮೋಸಮಾಡಿದ. ಅಷ್ಟರಲ್ಲಿ ಸತೀಶ್​ನಿಗೆ ಸಂಧ್ಯಾ ಎನ್ನುವ ವಿವಾಹಿತ ಗೃಹಿಣಿ ಫೇಸ್​ಬುಕ್ ಮೂಲಕ ಪರಿಚಯವಾದಳು. ತಾನು ಸಿನಿಮಾ ರಂಗ ಪ್ರವೇಶಿಸಬೇಕೆಂದು ಉದ್ದೇಶಿಸಿದ್ದು, ತನ್ನ ಗಂಡ ಇದಕ್ಕೆ ಒಪ್ಪುತ್ತಿಲ್ಲವೆಂದು ಆಕೆ ಹೇಳಿದಳು. ‘ನೀನೇನೂ ಯೋಚನೆ ಮಾಡಬೇಡ, ನಿನ್ನನ್ನು ಖ್ಯಾತ ಸಿನಿಮಾ ನಟಿಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ. ಹೆಸರಾಂತ ನಿರ್ವಪಕರೊಬ್ಬರು ಹೊಸದಾಗಿ ಬಹುಭಾಷಾ ಚಿತ್ರ ಮಾಡುತ್ತಿದ್ದಾರೆ. ನಾನೇ ಅದರ ಸಹಾಯಕ ನಿರ್ದೇಶಕ. ಮುಂದಿನ ವಾರದಿಂದ ಮಡಿಕೇರಿಯಲ್ಲಿ ಶೂಟಿಂಗ್ ಆರಂಭವಾಗುತ್ತಿದೆ. ನೀನು ನನ್ನ ಜೊತೆ ಮಡಿಕೇರಿಗೆ ಬಂದರೆ ನಿರ್ವಪಕ ಹಾಗೂ ನಿರ್ದೇಶಕರನ್ನು ಪರಿಚಯ ಮಾಡಿಕೊಟ್ಟು ಅವಕಾಶ ಕೊಡಿಸುತ್ತೇನೆ’ ಎಂದ ಸತೀಶ್. ಅವನ ಆಹ್ವಾನ ಒಪ್ಪಿದ ಸಂಧ್ಯಾ ಅವನನ್ನು ಬೆಂಗಳೂರಿನ ಹೋಟೆಲೊಂದರಲ್ಲಿ ಭೇಟಿಯಾದಳು. ಆಕೆಯ ಮೂಲಕವೇ ಬಾಡಿಗೆಗೆ ಪಡೆದ ಟ್ಯಾಕ್ಸಿಯಲ್ಲಿ ಸತೀಶ್ ಅವಳೊಡನೆ ಮಡಿಕೇರಿಗೆ ತೆರಳಿದ.

    ಅವರ ವಾಹನ ಪಿರಿಯಾಪಟ್ಟಣವನ್ನು ತಲುಪಿದಾಗ ಆತ ಸಿನಿಮಾ ನಿರ್ದೇಶಕರಿಗೆ ಫೋನ್ ಮಾಡುವೆ ಎಂದು ಯಾರೊಡನೆಯೋ ಮೊಬೈಲ್ ಫೋನಿನಲ್ಲಿ ಮಾತನಾಡಿದಂತೆ ನಟಿಸಿದ. ಆನಂತರ ಗಾಬರಿಯ ಮುಖ ಮಾಡಿಕೊಂಡು ‘ಸಂಧ್ಯಾ, ಎಡವಟ್ಟಾಗಿದೆ, ಸಿನಿಮಾ ನಿರ್ವಪಕರ ಹೆಂಡತಿ ಅಕಸ್ಮಾತ್ತಾಗಿ ನಿಧನ ಹೊಂದಿದ ಕಾರಣಕ್ಕಾಗಿ ಶೂಟಿಂಗ್ ರದ್ದಾಗಿದೆಯಂತೆ’ ಎಂದ. ಮುಂದೇನು ಮಾಡುವುದು ಎಂದು ಆಕೆ ಕೇಳಿದಾಗ ‘ಹೇಗಿದ್ದರೂ ಇನ್ನು ಒಂದು ಗಂಟೆಯೊಳಗೆ ನಾವು ಮಡಿಕೇರಿ ತಲುಪುತ್ತೇವೆ, ಅಲ್ಲಿ ಸಿನಿಮಾ ನಿರ್ಮಾಣ ತಂಡದ ಯಾರಾದರೂ ಇರುತ್ತಾರೆ, ಅವರಿಗೆ ನಿನ್ನನ್ನು ಪರಿಚಯಿಸುತ್ತೇನೆ’ ಎಂದ. ಮಡಿಕೇರಿ ತಲುಪಿದ ನಂತರ ಹೋಟೆಲ್ಲಿನಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆದು ಸಂಧ್ಯಾಳಿಂದಲೇ ಅಡ್ವಾನ್ಸ್ ಹಣ ಕೊಡಿಸಿದ. ಆನಂತರ ಅವಳ ಜೊತೆ ಎರಡು ದಿನ ಅಲ್ಲಿಯೇ ತಂಗಿದ. ಆತ ಸಂಧ್ಯಾಳ ವೈವಾಹಿಕ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ. ‘ನೀನು ವಿವಾಹಿತೆ ಎಂದು ತಿಳಿದರೆ ಸಿನಿಮಾರಂಗದಲ್ಲಿ ಅವಕಾಶಗಳು ತೀರಾ ಕಡಿಮೆಯಾಗುತ್ತವೆ, ನೀನಿನ್ನೂ ಅವಿವಾಹಿತೆ ಎಂದು ಬಿಂಬಿಸಬೇಕಾಗಿದೆ, ಹೀಗಾಗಿ ನೀನು ಕೂಡಲೇ ವಿಚ್ಛೇದನ ಪಡೆಯಬೇಕು’ ಎಂದು ಅವಳನ್ನು ಪ್ರಚೋದಿಸಿದ. ಸತೀಶನ ಮಾತುಗಳನ್ನು ನಂಬಿದ ಸಂಧ್ಯಾ ಊರಿಗೆ ವಾಪಸ್ ಆದ ಕೂಡಲೇ ಗಂಡನಿಗೆ ವಿಚ್ಛೇದನದ ನೋಟಿಸ್ ಕೊಟ್ಟಳು. ವಿಚ್ಛೇದನ ಪ್ರಕ್ರಿಯೆ ಸಾಕಷ್ಟು ಕಾಲ ತೆಗೆದುಕೊಳ್ಳುತ್ತದೆಯೆಂದು ಅರಿತಿದ್ದರಿಂದಲೂ, ಸಂಧ್ಯಾಳ ಸಹವಾಸ ಬೇಸರ ತಂದಿದ್ದರಿಂದಲೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಸಂಧ್ಯಾಳ ಪತಿ ತಯಾರಾದ. ಗಂಡನಿಂದ 50 ಲಕ್ಷ ರೂ. ಪರಿಹಾರ ಪಡೆಯಲು ಸತೀಶ ಸಂಧ್ಯಾಳಿಗೆ ಸೂಚಿಸಿ, ವಿಚ್ಛೇದನವಾದ ನಂತರ ತಾನೇ ಅವಳನ್ನು ಲಗ್ನವಾಗುವುದಾಗಿ ತಿಳಿಸಿದ. ಸಂಧ್ಯಾಳ ಪತಿ 30 ಲಕ್ಷ ರೂಗಳ ಪರಿಹಾರ ಕೊಟ್ಟು ಆಕೆಯಿಂದ ವಿಚ್ಛೇದನ ಪಡೆದ. ಆನಂತರ ಸತೀಶ್ ಸಂಧ್ಯಾಳ ಜತೆಯೇ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ. ಸಿನಿಮಾದಲ್ಲಿ ಅವಕಾಶ ಕೊಡಿಸುವೆನೆಂದು ಆಕೆಯಿಂದ ಕಾಲಕಾಲಕ್ಕೆ ಹಣ ಪಡೆಯುತ್ತಾ ಒಂದು ದಿನ ಪರಾರಿಯಾದ. ಅವಳಿಂದ ಆತ ಸುಮಾರು 20 ಲಕ್ಷ ರೂಗಳನ್ನು ಕಬಳಿಸಿದ್ದ. ಸತೀಶನಿಂದ ನಾನಾ ರೀತಿಯಲ್ಲಿ ಮೋಸಹೋಗಿದ್ದ ಸಂಧ್ಯಾ ಪೊಲೀಸರಿಗೆ ದೂರಿತ್ತಳು. ಮೋಸ ಹಾಗೂ ರೇಪ್ ಪ್ರಕರಣ ದಾಖಲಾಯಿತು. ಫೇಸ್​ಬುಕ್​ನಲ್ಲಿನ ಪೋಸ್ಟುಗಳ ಮೂಲಕವೇ ಪೊಲೀಸರು ಸತೀಶನನ್ನು ಹುಬ್ಬಳ್ಳಿಯಲ್ಲಿ ಪತ್ತೆ ಮಾಡಿದರು. ನ್ಯಾಯಾಲಯ ಅವನಿಗೆ ಎರಡು ವರ್ಷಗಳ ಕಾರಾಗೃಹದ ಶಿಕ್ಷೆ ವಿಧಿಸಿತು.

    ಕಾರಾಗೃಹದಿಂದ ಬಂದ ನಂತರ ಮತ್ತೊಮ್ಮೆ ಸತೀಶ್ ತಾನು ಕಿರುತೆರೆಯ ಡೈರೆಕ್ಟರ್ ಎಂದು ಬಿಂಬಿಸುತ್ತಾ ಇನ್ನಿಬ್ಬರಿಗೆ ಮೋಸ ಮಾಡಿದ. ಆತ ಸುಷ್ಮಾ ಎನ್ನುವವಳಿಗೆ ಮೋಸ ಮಾಡಲು ಹೊರಟಾಗ ಎಚ್ಚೆತ್ತುಕೊಂಡ ಆಕೆ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ನೀಡಿದಳು. ಸತೀಶನನ್ನು ಬಂಧಿಸಿದಾಗ ಅಲ್ಲಿಯವರೆವಿಗೆ ತಾನು 11 ಜನರಿಗೆ ಮೋಸ ಮಾಡಿರುವುದಾಗಿ ಹೇಳಿ 70 ಲಕ್ಷ ರೂಗಳಿಗೂ ಹೆಚ್ಚು ಹಣವನ್ನು ಗಳಿಸಿದ್ದೇನೆ ಎಂದ. ಈ ಪ್ರಕರಣದಲ್ಲಿ ಆತನಿಗೆ ಐದು ವರ್ಷಗಳ ಕಾರಾಗೃಹದ ಶಿಕ್ಷೆಯಾಯಿತು. ‘ಎನಿಸು ಕಾಲ ಕಲ್ಲು ನೀರೊಳಗಿದ್ದರೇನು ನೆನೆದು ಮೃದುವಾಗಬಲ್ಲದೇ?’ ಎಂದು ಬಸವಣ್ಣನವರು ಹೇಳಿದಂತೆ ಜ್ಯೆಲಿಗೆ ಹೋದರೂ ಸತೀಶನೇನೂ ಸುಧಾರಿಸಲಿಲ್ಲ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts