More

    ಚರಂಡಿ ಮುಚ್ಚಳಕ್ಕೆ ಗಂಟುಬಿದ್ದ ಕಳ್ಳರು!

    ಹುಬ್ಬಳ್ಳಿ: ಹುಬ್ಬಳ್ಳಿಯ ಏಕೈಕ ಟೆಂಡರ್ ಶ್ಯೂರ್ ರಸ್ತೆಗೆ ಅತಿಕ್ರಮಣ, ಅಗೆಯುವಿಕೆ ಹೀಗೆ ಒಂದರ ನಂತರ ಒಂದು ಕಾಟ ಉಂಟಾಗುತ್ತಿದೆ. ಈಗ, ಖದೀಮರು ಈ ರಸ್ತೆಯ ಇಕ್ಕೆಲದ ಮಳೆನೀರು ಚರಂಡಿಯ ಮುಚ್ಚಳಕ್ಕೆ ಗಂಟುಬಿದ್ದಿದ್ದಾರೆ!

    ಹೌದು, ಹಾಡಹಗಲಲ್ಲೇ ಖದೀಮರು ಭಾನುವಾರ ಚರಂಡಿ ಮುಚ್ಚಳವನ್ನು ಹಾರೆಯಿಂದ ಮೀಟಿ, ಸೀಲ್ ಮಾಡಿದ್ದ ಜಾಗದಲ್ಲಿ ತುಂಡು ಮಾಡಿಕೊಂಡು ಕದ್ದೊಯ್ದಿದ್ದಾರೆ. ಒಂದಲ್ಲ ಎರಡಲ್ಲ, ಮೂರು ಮುಚ್ಚಳವನ್ನು ಕಿತ್ತುಕೊಂಡು ಹೋಗಿದ್ದಾರೆ.

    ವಿದ್ಯಾನಗರದಲ್ಲಿ ಹಳೆ ಪುಣೆ-ಬೆಂಗಳೂರು ರಸ್ತೆಯಿಂದ ತೋಳನಕೆರೆವರೆಗಿನ ಈ ರಸ್ತೆಯ ಇಕ್ಕೆಲದಲ್ಲೂ ಅಂಗಡಿ ಮುಂಗಟ್ಟುಗಳು, ಶಿಕ್ಷಣ ಸಂಸ್ಥೆಗಳು, ಮನೆಗಳಿವೆ. ಭಾನುವಾರ ಹಾಗೆ ಚರಂಡಿ ಮುಚ್ಚಳ ಅಗೆಯುತ್ತಿರುವವರನ್ನು ಸ್ಥಳೀಯ ಕೆಲವರು ಪ್ರಶ್ನಿಸಿದ್ದಾರೆ. ಕಳ್ಳರು ಜಾಣತನದ ಉತ್ತರ ನೀಡಿದ್ದಾರೆ. ತಾವು ಮಹಾನಗರ ಪಾಲಿಕೆ ಉದ್ಯೋಗಿಗಳು, ಮೇಲಿನವರು ದುರಸ್ತಿಗಾಗಿ ಕಿತ್ತುಕೊಂಡು ಬರಲು ಹೇಳಿದ್ದಾರೆ. ನಂತರ ಮತ್ತೆ ತಂದು ಅಳವಡಿಸುತ್ತೇವೆ ಎಂದು ಹೇಳಿದ್ದಾರೆ. ಪಾಲಿಕೆಯ ಸಿಬ್ಬಂದಿಯೇ ಇರಬಹುದು ಎಂದು ಸ್ಥಳೀಯರು ಸುಮ್ಮನಾಗಿದ್ದಾರೆ.

    ರಸ್ತೆಯಲ್ಲಿ ಕಾಳಿದಾಸ ನಗರ ಕ್ರಾಸ್ ಬಳಿ ಇಕ್ಕೆಲದ ತಲಾ ಒಂದು ಹಾಗೂ ಬೇಸ್ ಕಾಲೇಜ್ ಬಳಿ ಒಂದು ಮುಚ್ಚಳವನ್ನು ಕಾಂಕ್ರೀಟ್ ಕಿತ್ತು, ಕೀಲು ಕತ್ತರಿಸಿ ಒಯ್ದಿದ್ದಾರೆ. ಆ ಭಾಗದ ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ ಏನೋ ಕೆಲಸದ ಮೇಲೆ ಬಂದಾಗ ಚರಂಡಿ ಮುಚ್ಚಳ ಕಿತ್ತೊಯ್ದಿರುವುದು ಕಂಡಿತು. ಸಮೀಪದವರನ್ನು ಕೇಳಿದಾಗ, ಪಾಲಿಕೆಯವರಂತೆ… ಎಂದರು. ಅನುಮಾನಗೊಂಡ ಬುರ್ಲಿ, ಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿದಾಗ, ತಮ್ಮವರಲ್ಲ… ಎಂದರು.ಕೂಡಲೆ ಪಾಲಿಕೆ ಆಯುಕ್ತರನ್ನು ಸಂರ್ಪಸಿದ ಮಹೇಶ ಬುರ್ಲಿ, ವಿಷಯ ತಿಳಿಸಿ ಗಂಭೀರವಾಗಿ ಪರಿಗಣಿಸಲು ಕೋರಿದರು. ತಕ್ಷಣ ಸ್ಪಂದಿಸಿದ ಆಯುಕ್ತ ಡಾ. ಸುರೇಶ ಇಟ್ನಾಳ, ಧಾವಿಸಿ ಬಂದರು. ಮಹೇಶ ಬುರ್ಲಿ ಅಲ್ಲೇ ಕಾದುನಿಂತಿದ್ದರು. ಇಬ್ಬರೂ ಪರಿಶೀಲನೆ ನಡೆಸಿದರು. ಪಾಲಿಕೆ ಸಿಬ್ಬಂದಿ ಮುಚ್ಚಳ ಕಿತ್ತಿಲ್ಲ ಎಂದು ಖಾತ್ರಿಯಾದಾಗ, ಕಳ್ಳರು ಹಗಲಲ್ಲೇ ಕೈಚಳಕ ತೋರಿದ್ದಾರೆಂದು ಸ್ಪಷ್ಟವಾಗಿದೆ. ಪೊಲೀಸ್ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.

    ಕ್ಯಾಮರಾ ಇಲ್ಲದ ಸ್ಥಳ?
    ಟೆಂಡರ್ ಶ್ಯೂರ್ ರಸ್ತೆಯಲ್ಲಿ ಸರ್ಕಾರಿ/ಖಾಸಗಿಯವರ ಹಲವಾರು ಸಿಸಿ ಕ್ಯಾಮರಾಗಳಿವೆ. ವಿಶೇಷ ಎಂದರೆ, ಮುಚ್ಚಳ ಕಿತ್ತಿರುವ ಮೂರೂ ಜಾಗ ಯಾವುದೇ ಕ್ಯಾಮರಾದಲ್ಲಿ ಸೆರೆಯಾಗುವಂತಿಲ್ಲ ಎನ್ನಲಾಗಿದೆ. ಸಚಿವ ಜಗದೀಶ ಶೆಟ್ಟರ್ ಅವರು ವಿಶೇಷ ಆಸಕ್ತಿ ವಹಿಸಿ, ಜಾರಿಗೊಳಿಸಿರುವ ಯೋಜನೆ ಈ ಟೆಂಡರ್ ಶ್ಯೂರ್. ಬೆಂಗಳೂರಿನ ಇಂಜಿನಿಯರ್ ಸ್ವಾತಿ ರಾಮನಾಥನ್ ಅವರ ತಂಡ ರೂಪಿಸಿದ ನಕ್ಷೆಯಂತೆ ಕೆಲಸ ಆಗಿರುವಲ್ಲಿ ಮಳೆ ನೀರು ರಸ್ತೆಯಲ್ಲಿ ನಿಲ್ಲದೇ ಸಲೀಸಾಗಿ ಹರಿದು ಈ ಮುಚ್ಚಳಗಳ ಮೂಲಕ ಮುಚ್ಚಿದ ಚರಂಡಿ ಸೇರಿ ನಾಲಾಕ್ಕೆ ಹೋಗುತ್ತದೆ. ಕಳ್ಳ ಕಾಕರು, ಅಗೆತ ಪ್ರವೀಣರ ದಾಳಿಗೆ ಸುಲಭವಾಗಿ ಸಿಗದಿರಲಿ ಎಂದು ಕಾಸ್ಟ್ ಐರನ್​ನಿಂದ ಇವನ್ನು ಮಾಡಿಸಿ, ಕಾಂಕ್ರೀಟ್ ಹಾಕಲಾಗಿದೆ. ಆದಾಗ್ಯೂ ದುಷ್ಟ ಜನರು ಗಂಟುಬಿದ್ದಿರುವುದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts