More

    ಚರಂಡಿಗಳಂತೆ ಕಿರಿದಾದ ರಾಜಕಾಲುವೆ

    ಒತ್ತುವರಿಯಿಂದಾಗಿ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗುವ ಆತಂಕ : ಉತ್ತಮ ಮಳೆಯಾದರೂ ತುಂಬುತ್ತಿಲ್ಲ ಕೆರೆಯೊಡಲು

    ಚಿಕ್ಕಬಳ್ಳಾಪುರ: ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವ ಅವಾಂತರಗಳ ನಡುವೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ಉಂಟಾಗುವ ಸಮಸ್ಯೆ ಜನರನ್ನು ತತ್ತರಿಸುವಂತೆ ಮಾಡಿದೆ.
    ಹೌದು! ಕಳೆದ ಎರಡು ವರ್ಷಗಳ ಹಿಂದೆ ಅತಿವೃಷ್ಟಿಯಿಂದಾಗಿ ಬಡಾವಣೆಗಳು ಜಲಾವೃತಗೊಂಡಾಗ ಬಿರುಸಿನ ಕಾರ್ಯಾಚರಣೆ ಕೈಗೊಂಡು ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು. ಈಗ ಪುನಃ ಹಲವೆಡೆ ಕಾಲುವೆಗಳು ಒತ್ತುವರಿಯಾಗಿದ್ದು, ರಾಜಕಾಲುವೆಗಳ ಸ್ಥಿತಿ ಚರಂಡಿ ಮಾದರಿಗೆ ಪರಿವರ್ತನೆಯಾಗುತ್ತಿವೆ.
    ಜಿಲ್ಲೆಯಲ್ಲಿ ಬರೋಬ್ಬರಿ 1981 ಕೆರೆಗಳಿದ್ದು, ಪ್ರತಿವರ್ಷ ಅಕ್ರಮ ಒತ್ತುವರಿ ತೆರವು, ಸಂರಕ್ಷಣೆ ಮತ್ತು ಮತ್ತೆ ಒತ್ತುವರಿ ನಿರಂತರ ಪ್ರಕ್ರಿಯೆಯಾಗಿದೆ. ಸಮಸ್ಯೆಯಾದಾಗ ಎಚ್ಚೆತ್ತುಕೊಳ್ಳುವ ಕೆಲಸದಿಂದ ನಿರೀಕ್ಷೆಯ ಪ್ರಗತಿ ಕಂಡು ಬರುತ್ತಿಲ್ಲ.
    ಈ ಭಾಗದಲ್ಲಿ ಯಾವುದೇ ಶಾಶ್ವತ ನೀರಾವರಿ ಮೂಲಗಳಿಲ್ಲ. ಇದಕ್ಕೆ ಹಿಂದೆ ಹಿರಿಯರು ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಇದರಿಂದಲೇ ಅವಿಭಜಿತ ಕೋಲಾರ ಜಿಲ್ಲೆಗೆ ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಪ್ರದೇಶ ಎಂಬ ಕೀರ್ತಿ ಲಭಿಸಿದೆ.


    ಕಿರಿಕಿರಿ ಸಮಸ್ಯೆಗೆ ಪರಿಹಾರ
    ಮೊದಲಿನಿಂದಲೂ ಕೆರೆ ಮತ್ತು ರಾಜಕಾಲುವೆ ಸಂರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಅಭಿವೃದ್ಧಿ ಯೋಜನೆಗಳು, ಸಂರಕ್ಷಣೆಯ ಕಾರ್ಯಕ್ರಮಗಳು ಮತ್ತು ಅನುದಾನದ ಖರ್ಚು ಅರ್ಧಂಬರ್ಧ ಸಾಧನೆಗೆ ಸೀಮಿತವಾಗಿದೆ. ಅವೈಜ್ಞಾನಿಕ ಕ್ರಮಗಳಿಂದ ಧಾರಾಕಾರ ಮಳೆ ಸುರಿದರೂ ಕೆರೆಗಳಲ್ಲಿ ನೀರನ್ನು ಹಿಡಿದಿಡುವ ಕೆಲಸವಾಗುತ್ತಿಲ್ಲ. ಕೆರೆ ಮತ್ತು ರಾಜಕಾಲುವೆಗಳು ಒತ್ತುವರಿ ಮತ್ತಷ್ಟು ಹಾಹಾಕಾರ ಹೆಚ್ಚಾಗಲು ಕಾರಣವಾಗಿದ್ದು, ಅಂತರ್ಜಲಮಟ್ಟ ಕುಸಿತ ಮತ್ತು ಕೊಳವೆಬಾವಿ ವೈಫಲ್ಯ ಸಮಸ್ಯೆಗೆ ತುತ್ತಾಗಬೇಕಿದೆ.


    ಚರಂಡಿಗಳಾದ ರಾಜಕಾಲುವೆ
    ಜಿಲ್ಲಾ ಕೇಂದ್ರದಲ್ಲಿನ ನಂದಿ ಕೆರೆ, ಕಂದವಾರ ಕೆರೆ ಮತ್ತು ಅಮಾನಿ ಗೋಪಾಲಕೃಷ್ಣ ಕೆರೆಯನ್ನು ಸಂಪರ್ಕಿಸುವ ರಾಜಕಾಲುವೆಗಳು ಕ್ರಮೇಣ ಚರಂಡಿಗಳಾಗುತ್ತಿವೆ. ಇದು ಅಕ್ರಮ ಒತ್ತುವರಿಗೆ ರಾಜಕಾಲುವೆಗಳು ಸ್ವರೂಪ ಕಳೆದುಕೊಳ್ಳುತ್ತಿರುವುದಕ್ಕೆ ನಿದರ್ಶನ.
    ಚಿಕ್ಕಬಳ್ಳಾಪುರದ ಪಂಚಗಿರಿಗಳ ತಪ್ಪಲಿನಲ್ಲಿನ ಮಳೆಯ ನೀರು ಕಂದವಾರ ಕೆರೆಗೆ ರಾಜಕಾಲುವೆ ಮೂಲಕ ಹರಿಯುತ್ತದೆ. ಬಳಿಕ ಅಮಾನಿ ಭೈರಸಾಗರ ಕೆರೆಯನ್ನು ಸೇರುತ್ತದೆ. ಮತ್ತೊಂದೆಡೆ ನೀರಿನ ಸಂಪರ್ಕ ಕೊಂಡಿಗಳಾಗಿರುವ ರಾಜಕಾಲುವೆ ಭಾಗಗಳನ್ನು ಮುಚ್ಚಿ ಹಾಕಲಾಗಿದೆ. ಅತಿವೃಷ್ಟಿಗೆ ಮಳೆಯ ನೀರು ಮನೆಗಳಿಗೆ ನುಗ್ಗಿದ ಸಂದರ್ಭದಲ್ಲಿ ತುರ್ತಾಗಿ ಜೆಸಿಬಿ ಮೂಲಕ ಹೂಳು ತೆಗೆಯುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.


    ಅಕ್ರಮ ಒತ್ತುವರಿ ಕಾರ್ಯಾಚರಣೆ
    ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿನ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಪ್ರಭಾವಿ ರೈತರು ಕೆರೆ ಪ್ರದೇಶವನ್ನು ಕೃಷಿ ಜಮೀನುಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದರೆ, ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಲಾಢ್ಯರು ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
    ಈಗಾಗಲೇ ಜಿಲ್ಲೆಯ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಜತೆಗೆ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ತಾಲೂಕು ಕೆರೆಗಳು
    ಬಾಗೇಪಲ್ಲಿ 515
    ಚಿಕ್ಕಬಳ್ಳಾಪುರ 156
    ಚಿಂತಾಮಣಿ 648
    ಗೌರಿಬಿದನೂರು 244
    ಗುಡಿಬಂಡೆ 91
    ಶಿಡ್ಲಘಟ್ಟ 327
    ಒಟ್ಟು 1981

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts