More

    ಚತುಷ್ಪಥ ಕಾಮಗಾರಿ ಈಗಲೂ ಅಪಾಯಕಾರಿ

    ಕಾರವಾರ: ಮತ್ತೆ ಮಳೆಗಾಲ ಬಂದಿದೆ. ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಸಂಚರಿಸುವವರು ಕೈಯಲ್ಲಿ ಜೀವ ಹಿಡಿದುಕೊಂಡೇ ಸಾಗಬೇಕಾದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಈ ಹೆದ್ದಾರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚತುಷ್ಪಥ ಕಾಮಗಾರಿ ಮುಂದುವರಿದಿದ್ದು, ಕಡಿದಾದ ಗುಡ್ಡದ ಪ್ರದೇಶದಲ್ಲಿ ಈ ಹಿಂದಿನಂತೆ ಮತ್ತೆ ಅನಾಹುತಗಳು ಸಂಭವಿಸಿ ಸಾವು-ನೋವು ಉಂಟಾಗುವುದೋ ಎಂಬ ಭೀತಿ ಜನರಲ್ಲಿ ತಲೆದೋರಿದೆ.

    ಧೋ ಎಂದು ಸುರಿಯುವ ಮಳೆಗೆ ಇಳೆಯ ಮಣ್ಣೆಲ್ಲ ಒದ್ದೆಯಾಗಿ ಮುದ್ದೆಯಾಗತೊಡಗಿದೆ. ಪಶ್ಚಿಮ ಘಟ್ಟಗಳ ಗುಡ್ಡಗಳು ನೀರು ತುಂಬಿದ ಕೊಡದಂತಾಗಿವೆ. ಗುಡ್ಡ ಯಾವತ್ತು ಒಡೆದು ಮೈಮೇಲೆ ಎರಗುತ್ತದೋ, ಮುಂದೆಲ್ಲಿ ನೀರು ತುಂಬಿದೆಯೋ ಎಂದು ಕ್ಷಣ ಕ್ಷಣಕ್ಕೂ ಆತಂಕದಲ್ಲೇ ವಾಹನ ಸವಾರರು ಸಂಚರಿಸಬೇಕಿದೆ. 150 ಕಿಮೀ ಒಳಗೇ ಎರಡೆರಡು ಕಡೆ ಹೆದ್ದಾರಿ ಶುಲ್ಕ ಕಟ್ಟಿಯೂ ಸುರಕ್ಷಿತವಾಗಿ ಪ್ರಯಾಣಿಸಲಾಗದೆ ಜನರು ಜನಪ್ರತಿನಿಧಿಗಳನ್ನು, ಸರ್ಕಾರವನ್ನು, ಟೋಲ್ ಕಂಪನಿಯನ್ನು ಶಪಿಸುತ್ತ ಸಾಗುವಂತಾಗಿದೆ.

    ಇದೇ ಗೋಳು: 2016ರಿಂದ ಈಚೆಗೆ ಚತುಷ್ಪಥ ಕಾಮಗಾರಿ ಚುರುಕು ಪಡೆದುಕೊಂಡ ನಂತರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವವರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ, ಕೃಷಿಕರಿಗೆ ಪ್ರತಿ ಮಳೆಗಾಲ್ಲೂ ಗುಡ್ಡ ಕುಸಿತ, ಪ್ರವಾಹ ಮುಂತಾದ ಸಮಸ್ಯೆಗಳು ಎದುರಾಗುತ್ತಲೇ ಇವೆ. ಕಾರವಾರದ ಮಾಜಾಳಿಯಿಂದ ಭಟ್ಕಳ ಗೊರಟೆವರೆಗೆ ಒಟ್ಟು 140 ಕಿಮೀ ವ್ಯಾಪ್ತಿಯ ಪೈಕಿ ಸುಮಾರು 5 ಕಿಮೀ ಮಾರ್ಗವು ಕಡಿದಾದ ಗುಡ್ಡಗಳ ಸಾಲನ್ನು ಹೊಂದಿದೆ. ಅಲ್ಲೆಲ್ಲ ಚತುಷ್ಪಥ ನಿರ್ವಣಕ್ಕಾಗಿ ಗುಡ್ಡ ಕೊರೆಯಲಾಗಿದೆ. ಇನ್ನೂ ಕೊರೆಯಲಾಗುತ್ತಿದೆ. ಇದರಿಂದಾಗಿ ಹಲವೆಡೆ ಮಣ್ಣು ತುಂಬಿ, ಸರಾಗವಾಗಿ ಹರಿಯುವ ನೀರಿನ ಮೂಲಗಳನ್ನು ಕಟ್ಟಿ ರಸ್ತೆ ಮಾಡಲಾಗಿದೆ. ಅದು ಪ್ರತಿ ಮಳೆಗಾಲದಲ್ಲೂ ಪ್ರಯಾಣಿಕರಿಗೆ ಸಂಚಕಾರ ಒಡ್ಡುತ್ತಿದೆ. ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿದ್ದರೂ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐಆರ್​ಬಿ ಕಂಪನಿ ಎಚ್ಚೆತ್ತುಕೊಂಡಿಲ್ಲ.

    20ಕ್ಕೂ ಹೆಚ್ಚುಹಾಟ್ ಸ್ಪಾಟ್: ಕಾರವಾರದ ಅರಗಾ, ಮುದಗಾ-ಹಾರವಾಡ ಘಟ್ಟ, ಕುಮಟಾದ ಮಾದನಕೇರಿ ಘಟ್ಟ, ಮಿರ್ಜಾನ್ ಖೈರೆ, ಬರ್ಗಿ, ದುಂಡಕುಳಿ, ತಂಡ್ರಕುಳಿ, ಹೊನ್ನಾವರದ ಕಾಸರಕೋಡು, ಕೆಳಗಿನೂರು, ಎಮ್ಮೆಪೈಲು ಸೇರಿ 20ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕಡಿದಿರುವುದರಿಂದ ಸಮಸ್ಯೆ ಉಂಟಾಗಿದೆ. ಮಳೆಗಾಲ ಬಂದಾಕ್ಷಣ ಅವು ಕುಸಿದು ಬೀಳುತ್ತಿವೆ.

    ತೊಂದರೆಯಾಗುತ್ತಿರುವುದೇಕೆ?: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐಆರ್​ಬಿ ಕಂಪನಿ ಇಲ್ಲಿನ ಭೌಗೋಳಿಕ ಲಕ್ಷಣವನ್ನು ಸಮರ್ಪಕವಾಗಿ ಅಧ್ಯಯನ ನಡೆಸಿಲ್ಲ. ಸ್ಥಳೀಯವಾಗಿ ನೀರು ಉಕ್ಕುವ ಒರತೆಗಳು, ಕುಸಿಯುವ ಮಣ್ಣು, ನೀರು ಹರಿಯುವ ಸ್ಥಳಗಳನ್ನು ಗುರುತಿಸದೇ ಕಾಮಗಾರಿ ನಡೆಸಿದೆ. ನೀರು ಹರಿಯುವ ಜಾಗಗಳನ್ನು ಕಟ್ಟಿದೆ. ಮಾರ್ಗ ಬದಲಿಸಿದೆ. ಕುಮಟಾದ ಕೈರೆಯಲ್ಲಿ ಒರತೆ ಉಕ್ಕುವ ಗುಡ್ಡಕ್ಕೆ ಸಿಮೆಂಟ್ ಹಾಕಿ ಬಂದ್ ಮಾಡುವಂಥ ಅವೈಜ್ಞಾನಿಕ ಯೋಜನೆ ಕೈಗೊಳ್ಳುತ್ತಿದೆ. ಗುಡ್ಡವನ್ನು ಹಂತ ಹಂತವಾಗಿ ಕಡಿಯದೇ ಲಂಬಾಕಾರವಾಗಿ ಕಡಿದು ನಿಲ್ಲಿಸಲಾಗಿದೆ. ಸಾಮಾನ್ಯ ಜನರಿಗೂ ಅರ್ಥವಾಗುವ ಇಂಥ ಅಂಶಗಳು ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ನಡೆಸುವ ಕಂಪನಿ ಇಂಜಿನಿಯರ್​ಗಳಿಗೇಕೆ ಅರ್ಥವಾಗುತ್ತಿಲ್ಲ ಎಂದು ಜನ ಆಡಿಕೊಳ್ಳುವಂತಾಗಿದೆ.

    ಹಿಂದಿನ ಅನಾಹುತಗಳು:
    2017 ರ ಜೂನ್​ನಲ್ಲಿ ಕುಮಟಾ ತಂಡ್ರಕುಳಿ ಸಮೀಪ ಚತುಷ್ಪಥದ ಕೆಳಗೆ ಗುಡ್ಡ ಕುಸಿದು 8ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದವು. ಮೂವರು ಮಕ್ಕಳು ಮೃತಪಟ್ಟಿದ್ದರು. 8 ಜನರಿಗೆ ಗಾಯವಾಗಿತ್ತು.
    ಹೊನ್ನಾವರ ಕೆಳಗಿನೂರು ಸಮೀಪ ಚಲಿಸುತ್ತಿದ್ದ ಬಸ್ ಮೇಲೆ ಗುಡ್ಡದಿಂದ ಬಂಡೆ ಉರುಳಿ ಬಂದು ಬಿದ್ದಿತ್ತು.
    ಹೊನ್ನಾವರ – ಕಾಸರಕೋಡು ಸಮೀಪ ಕೆಲ ದಿನಗಳ ಹಿಂದೆ ಹೆದ್ದಾರಿ ಮೇಲೆ ಬಂಡೆ ಉರುಳಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ.
    ಹೊನ್ನಾವರ ಎಮ್ಮೆಪೈಲ್ ಸಮೀಪ ಬಂಡೆ ಉರುಳಿ ಬಿದ್ದಿತ್ತು.

    ಮತ್ತಷ್ಟು ಆತಂಕ: ಈ ವರ್ಷ ಮಳೆಗಾಲ ಪ್ರಾರಂಭದಲ್ಲೇ ಹೊನ್ನಾವರದಲ್ಲಿ ಕಲ್ಲು ಉರುಳಿಬಿದ್ದಿದೆ. ಮುದಗಾದಲ್ಲಿ ಎರಡು ಬಾರಿ ನೀರು ತುಂಬಿ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಇಂಥ ಸಂದರ್ಭಗಳಲ್ಲಿ ಕನಿಷ್ಠ ಮೂರ್ನಾಲ್ಕು ತಾಸು ಹೆದ್ದಾರಿ ಸಂಚಾರ ಬಂದಾಗುತ್ತಿದೆ. ಆಂಬುಲೆನ್ಸ್​ಗಳು, ತುರ್ತಾಗಿ ಸಂಚರಿಸುವ ನೂರಾರು ಜನ ತೊಂದರೆ ಅನುಭವಿಸುವಂತಾಗಿದೆ. ಕರೊನಾ ಕಾರಣದಿಂದ ಚತುಷ್ಪಥ ಕಾಮಗಾರಿ ಭಾಗಶಃ ಬಂದಾಗಿದೆ. ಐಆರ್​ಬಿ ಕಾಮಗಾರಿ ಹಾಗೂ ಟೋಲ್ ಗೇಟ್​ಗಳಲ್ಲಿನ ಸಿಬ್ಬಂದಿಗೂ ಸೋಂಕು ಖಚಿತವಾಗುತ್ತಿದೆ. ಗುಡ್ಡ ಕುಸಿತದಂಥ ತುರ್ತು ಅವಘಡಗಳು ಸಂಭವಿಸಿದರೆ ರಕ್ಷಣೆಗೆ ಆಗಮಿಸುವ ಸಾಧ್ಯತೆಗಳೂ ಕಡಿಮೆ ಇವೆ.

    ಮಳೆಗಾಲಕ್ಕೂ ಪೂರ್ವದಲ್ಲೇ ತಹಸೀಲ್ದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್​ಬಿ ಇಂಜಿನಿಯರ್​ಗಳು ಜಂಟಿ ಸಮೀಕ್ಷೆ ನಡೆಸಿ ಅಪಾಯ ಉಂಟಾಗುವ ಸ್ಥಳಗಳನ್ನು ಗುರುತಿಸಿದ್ದಾರೆ. ಇದಾದ ನಂತರವೂ ಸಮಸ್ಯೆ ಉಂಟಾಗುವ ಸ್ಥಳಗಳಿದ್ದರೆ ತಕ್ಷಣ ಕ್ರಮ ವಹಿಸಲು ಐಆರ್​ಬಿಗೆ ಸೂಚನೆ ನೀಡಲಾಗುವುದು.
    ಅಜಿತ್ ರೈ ಉಪವಿಭಾಗಾಧಿಕಾರಿ, ಕುಮಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts