More

    ಚತುಷ್ಪಥ ಕಾಮಗಾರಿಗೆ ಅಡ್ಡಿಪಡಿಸದಂತೆ ಗ್ರಾಮಸ್ಥರಿಗೆ ಮನವಿ

    ಕುಮಟಾ: ಚತುಷ್ಪಥ ಕಾಮಗಾರಿಯಲ್ಲಿ ಬಂಡೆ ಸ್ಪೋಟಿಸುವ ವೇಳೆ ಹಾನಿಗೊಳಗಾದ ತಂಡ್ರಕುಳಿಯ ಕುಟುಂಬಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. ನಿಮ್ಮ ಪುನರ್ವಸತಿ ಬಗ್ಗೆಯೂ ಪ್ರಯತ್ನಿಸುತ್ತೇನೆ. ಆದರೆ, ಚತುಷ್ಪಥ ಕಾಮಗಾರಿಗೆ ಅಡ್ಡಿಪಡಿಸಬೇಡಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ಶುಕ್ರವಾರ ತಂಡ್ರಕುಳಿ ಶಾಲೆಯಲ್ಲಿ ಚತುಷ್ಪಥ ಕಾಮಗಾರಿ ಕುರಿತು ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅವರು ರ್ಚಚಿಸಿದರು.

    ಈ ವೇಳೆ ಗ್ರಾಮಸ್ಥರ ಪರವಾಗಿ ಮಾತನಾಡಿದ ರಾಘವೇಂದ್ರ ಅಂಬಿಗ, ಸುಮಾರು ಎರಡೂವರೆ ವರ್ಷದ ಹಿಂದೆ ಚತುಷ್ಪಥ ಕಾಮಗಾರಿಗಾಗಿ ಬಂಡೆ ಒಡೆಯುವಾಗ ಸ್ಪೋಟದ ತೀವ್ರತೆಗೆ ಮನೆ, ಕಟ್ಟಡಗಳು ಹಾನಿಗೊಳಗಾಗಿತ್ತು. ಗೋಡೆಗಳು ಬಿರುಕು ಬಿಟ್ಟಿತ್ತು. ಆ ಸಂದರ್ಭದಲ್ಲಿ ನಮಗೆ ಮನೆ ಕಟ್ಟಿಕೊಳ್ಳಲು ಸೂಕ್ತ ಪರಿಹಾರದ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಈಡೇರಿಲ್ಲ. ಇಂದಿಗೂ ಗ್ರಾಮಸ್ಥರು ಬಿರುಕು ಬಿಟ್ಟ ಮನೆಯಲ್ಲೇ ಭಯದಲ್ಲಿ ವಾಸಿಸುತ್ತಿದ್ದೇವೆ. ನಮಗೆ ಪುನರ್ವಸತಿಯನ್ನಾದರೂ ಕಲ್ಪಿಸಿ ಅಥವಾ ಈಗಿರುವ ಜಾಗದಲ್ಲೇ ಮನೆ ಕಟ್ಟಿಕೊಡಿ. ನಮ್ಮ ಬೇಡಿಕೆ ಈಡೇರದೇ ಚತುಷ್ಪಥ ಕಾಮಗಾರಿ ಮುಂದುವರಿಸುವುದಕ್ಕೆ ಗ್ರಾಮಸ್ಥರ ಒಪ್ಪಿಗೆ ಇಲ್ಲ ಎಂದರು.

    ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ಅತಿವೃಷ್ಟಿ ಹಾಗೂ ಪ್ರವಾಹ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲೂ ಬಂದು ನೆರವಿಗೆ ನಿಂತಿದ್ದೇನೆ. ನಿಮಗೆ ಪುನರ್ವಸತಿ ಅಥವಾ ಹೊಸ ಮನೆ ಕಟ್ಟಿಸಿಕೊಡುವುದು ಸುಲಭವಲ್ಲ. ಈಗಾಗಲೇ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಇನ್ನೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರೋಪಾಯಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.

    ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಮಾತನಾಡಿ, ಕೆಲ ವರ್ಷದ ಹಿಂದೆ ಚತುಷ್ಪಥ ಕಾಮಗಾರಿಯಲ್ಲಿ ಗುಡ್ಡ ಕುಸಿತದಿಂದ ತಂಡ್ರಕುಳಿ ಗ್ರಾಮದ ಜನತೆ ಜೀವ ಹಾನಿ ಎದುರಿಸುವಂತಾದ ಬಗ್ಗೆ ಬೇಸರವಿದೆ. ಆದರೆ, ಚತುಷ್ಪಥ ಕಾಮಗಾರಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ತಂಡ್ರಕುಳಿಯಲ್ಲಿ ಕಾಮಗಾರಿ ನಿಲ್ಲಿಸಿದ್ದರಿಂದ ಅಪಘಾತದ ಅಪಾಯ ಹೆಚ್ಚಿರುವ ಜತೆಗೆ ಮಳೆಗಾಲದಲ್ಲಿ ಗುಡ್ಡದ ನೀರು ಕೂಡಾ ಮನೆಗಳಿಗೆ ನುಗ್ಗುತ್ತಿದೆ. ಇನ್ನೂ ವಿಳಂಬ ಮಾಡಲು ಸಾಧ್ಯವಿಲ್ಲ. ಇಲ್ಲಿ ಬಾಕಿ ಇರುವ ಕಾಮಗಾರಿಯನ್ನು ಮುಂದುವರಿಸುವಾಗ ಎಲ್ಲ ಮುಂಜಾಗ್ರತೆ ಹಾಗೂ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಸ್ವತಃ ನಾನೇ ಹಾಜರಿದ್ದು ನಿರ್ವಹಿಸುತ್ತೇನೆ. ಗ್ರಾಮಸ್ಥರು ಒಪ್ಪದಿದ್ದರೆ ಸುರಕ್ಷಾಬಲದ ಸಹಯೋಗ ಪಡೆದು ಕಾಮಗಾರಿ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು, ಅಂತಿಮವಾಗಿ ಗ್ರಾಮಸ್ಥರು ಪ್ರತ್ಯೇಕವಾಗಿ ಸಭೆ ನಡೆಸಿ, ತೀರ್ಮಾನ ತಿಳಿಸುವುದಕ್ಕೆ ಅವಕಾಶ ಕೊಡಬೇಕೆಂದು ವಿನಂತಿಸಿದರು. ಇದಕ್ಕೆ ಶಾಸಕ ದಿನಕರ ಶೆಟ್ಟಿ ಹಾಗೂ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಒಪ್ಪಿಗೆ ಸೂಚಿಸಿದರು.

    ಬಂಡೆ ಸ್ಪೋಟದಿಂದ ಹಾನಿಪರಿಹಾರ ಮಂಜೂರಾದ 14 ಫಲಾನುಭವಿಗಳ ಯಾದಿಯನ್ನು ಹೇಮಂತಕುಮಾರ ಗಾಂವಕರ ಓದಿದರು. ದೀವಗಿ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಅಂಬಿಗ, ಉಪಾಧ್ಯಕ್ಷ ಸಂಗೀತ್ ದೇಶಭಂಡಾರಿ, ಸದಸ್ಯರಾದ ಪ್ರವೀಣ ಅಂಬಿಗ, ಮಂಗಲಾ ಭಟ್, ಲೀನಾ ಫರ್ನಾಂಡೀಸ್, ನಾಗು ಅಂಬಿಗ, ಶಿವು ಅಂಬಿಗ ಇನ್ನಿತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts