More

    ಗ್ಲೂಕೋ ಬಯೋಟೆಕ್ ಕಾರ್ಮಿಕರ ಪ್ರತಿಭಟನೆ

    ನಂಜನಗೂಡು: ತಾಲೂಕಿನ ಗೆಜ್ಜಗನಹಳ್ಳಿ ಬಳಿಯಿರುವ ಗ್ಲೂಕೋ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಆಡಳಿತ ಮಂಡಳಿ ಕಾರ್ಮಿಕರಿಗೆ ವೇತನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಬುಧವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.


    ಕಾರ್ಖಾನೆಯ ಸಮೀಪ ಸಮಾವೇಶಗೊಂಡ ಕಾರ್ಮಿಕರು ಆಡಳಿತ ಮಂಡಳಿಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿ ಘೋಷಣೆ ಕೂಗಿದರು. 6 ವರ್ಷಗಳಿಂದ ದುಡಿಯುತ್ತಿರುವ ಸುಮಾರು 170ಕ್ಕೂ ಹೆಚ್ಚು ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಇದನ್ನು ಪ್ರಶ್ನಿಸುವ ಸಲುವಾಗಿ ಕಾರ್ಮಿಕರು ಸಂಘಟಿತರಾಗಿ ಯೂನಿಯನ್ ಮಾಡಿಕೊಂಡಾಗ ಕನಿಷ್ಠ ವೇತನ ನೀಡಲು ಆಡಳಿತ ಮಂಡಳಿ ಮುಂದಾಯಿತು.

    ಕಾರ್ಖಾನೆಯಲ್ಲಿ ನಿಗದಿಗಿಂತ ಶೇ. 20ರಷ್ಟು ಹೆಚ್ಚು ಉತ್ಪಾದನೆ ಮಾಡುವ ಮೂಲಕ ಲಾಭದಾಯಕವಾಗಿದೆ. ಕಾರ್ಮಿಕರಿಗೆ ವೇತನ ಹೆಚ್ಚಳ ಸೇರಿದಂತೆ ಯಾವುದೇ ಭತ್ಯೆ ನೀಡದೆ ವಂಚಿಸುತ್ತಿದ್ದಾರೆ. ಕಂಪನಿ ಕಾರ್ಮಿಕರನ್ನು ಇನ್ನೂ ಖಾಯಂಗೊಳಿಸಿಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಕಾರ್ಮಿಕರು ಆಪಾದಿಸಿದರು.


    ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಡುವೆ ಜೀವನ ನಡೆಸುವುದೇ ದುಸ್ತರವಾಗಿದೆ. ಕಾರ್ಮಿಕರು ಗೌರವಯುತ ಜೀವನ ಸಾಗಿಸಲು ನ್ಯಾಯಸಮ್ಮತ ವೇತನ ನೀಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.


    ಕಾರ್ಮಿಕರು ಯೂನಿಯನ್ ಮಾಡಿಕೊಳ್ಳುತ್ತಿದ್ದಂತೆ ವಿನಾಕಾರಣ ಆಡಳಿತ ಮಂಡಳಿ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದೆ. ಕಾರ್ಖಾನೆ ಬಳಿ ಕಾರ್ಮಿಕರು ಸಂಘಟಿತರಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನೆಗೆ ಯಾವುದೇ ಅಡ್ಡಿಯಾಗದಂತೆ ಹೋರಾಟ ಮಾಡುತ್ತಿದ್ದೇವೆ. ಸಾಂಕೇತಿಕ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಕಾರ್ಮಿಕರು ಎಚ್ಚರಿಸಿದರು.


    ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಕಾರ್ಯದರ್ಶಿ ಸೂರ್ಯಕುಮಾರ್, ಗೌರವಾಧ್ಯಕ್ಷ ಚಂದ್ರಶೇಖರ್ ಮೇಟಿ, ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಎಚ್.ಹರೀಶ್, ವಿ.ಎಂ.ಗುರುಸ್ವಾಮಿ, ಚಂದನ್, ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts