More

    ಗ್ರಾಮ ಸಹಾಯಕನ ಕರಾಮತ್ತು

    ಹಾನಗಲ್ಲ: ಅತಿವೃಷ್ಟಿ, ಪ್ರವಾಹದಿಂದಾದ ಬೆಳೆ ಹಾನಿಗೆ ಸರ್ಕಾರದಿಂದ ರೈತರಿಗೆ ನೀಡುವ ಪರಿಹಾರ ಹಣದಲ್ಲಿ ಅಕ್ರಮ ಬಗೆದಷ್ಟು ಆಳವಾಗುತ್ತಿದೆ. ಈ ಬಗ್ಗೆ ತಳಮಟ್ಟದ ತನಿಖೆಯ ಅಗತ್ಯವಿದೆ.

    ಪರಿಹಾರ ವಿತರಣೆಯಲ್ಲಿ ಅಕ್ರಮ, ಅವ್ಯವಹಾರ ನಡೆಸಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಅವರ ಗ್ರಾಮ ಸಹಾಯಕರೇ ದಾಖಲೆ ಒದಗಿಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತವು ಹಾನಗಲ್ಲ, ಶಿಗ್ಗಾಂವಿಗಳಲ್ಲಿ ತಹಸೀಲ್ದಾರ್, ಗ್ರಾಮಲೆಕ್ಕಾಧಿಕಾರಿ, ಡಾಟಾ ಎಂಟ್ರಿ ಆಪರೇಟರ್​ಗಳು ಸೇರಿ 28 ಜನರ ಮೇಲೆ ಎಫ್​ಐಆರ್ ದಾಖಲಿಸಿದೆ. ಆದರೆ, ಗ್ರಾಮ ಸಹಾಯಕರನ್ನು ಈ ಪ್ರಕರಣದಲ್ಲಿ ಕೈಬಿಟ್ಟಿರುವುದು ಗಮನಾರ್ಹ ಅಂಶ. ಅವರ ಪಾತ್ರ ಎಷ್ಟೆಂಬುದರ ಬಗ್ಗೆ ತನಿಖೆಗೊಳಪಡಿಸಿದಾಗಲೇ ತಿಳಿಯಲು ಸಾಧ್ಯ. ಅಂಥ ಹಲವು ಉದಾಹರಣೆಗಳು ಹಾನಗಲ್ಲ ತಾಲೂಕಿನಾದ್ಯಂತ ಲಭ್ಯವಾಗುತ್ತಿವೆ.

    ತಾಲೂಕಿನ ಹಸನಾಬಾದಿ ಗ್ರಾಮದ ನಾಗೇಂದ್ರಪ್ಪ ಬಡಿಗೇರ ಅವರ ರಿಸನಂ. 33/2(2.30 ಎಕರೆ) ಹೊಲದ ಪರಿಹಾರ 46,999 ರೂ. ಹಾಗೂ ಇದೇ ರೈತನ ರಿಸನಂ. 9/1(4.38 ಎಕರೆ) ಹೊಲದ ಪರಿಹಾರ 46,529 ರೂ. ಸೇರಿ ಒಟ್ಟು 93,528 ರೂ.ಗಳನ್ನು ಇಲ್ಲಿನ ಗ್ರಾಮ ಸಹಾಯಕ ತನ್ನ ಪತ್ನಿ ಲತಾ ಗುತ್ತೆಪ್ಪ ವಾಲಿಕಾರ ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

    ಇದೇ ಗ್ರಾಮದ ಗದಿಗೆಪ್ಪ ಅರಳೇಶ್ವರ ಅವರ ರಿಸನಂ.42/1ರ 20 ಗುಂಟೆ ಜಮೀನಿಗೆ 46,999 ರೂ. ಪರಿಹಾರ ನೀಡಲಾಗಿದೆ. ಗಮನಾರ್ಹ ಅಂಶಗಳೆಂದರೆ ರೈತ ಗದಿಗೆಪ್ಪ ಮೃತಪಟ್ಟು ಅಂದಾಜು ಹತ್ತು ವರ್ಷಗಳೇ ಗತಿಸಿವೆ. ಜತೆಗೆ ಇದು ಅಡಕೆ ತೋಟ. ಡಾಟಾ ಎಂಟ್ರಿ ವೇಳೆ ಅಡಕೆ ಬದಲಿಗೆ ಗೋವಿನಜೋಳ ಎಂದು ದಾಖಲಿಸಲಾಗಿದೆ. ಇದರೊಂದಿಗೆ ಇವರದೆ ಖಾತೆಯೊಂದಿಗೆ ಇಲ್ಲಿನ ಚಂದ್ರಗೌಡ ಕಲ್ಲನಗೌಡ ಪಾಟೀಲ ಎಂಬುವರ ರಿಸನಂ.7 ರಲ್ಲಿನ(5.9 ಎಕರೆ) ಪ್ರದೇಶದಲ್ಲಿನ ಮಾವು-ಚಿಕ್ಕು ತೋಟದ ಪಹಣಿ ಪತ್ರಿಕೆ ಸೇರಿಸಿ ಪರಿಹಾರವನ್ನು ಗ್ರಾಮ ಸಹಾಯಕ ತನ್ನ ಸ್ವಂತದ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

    ಇದಲ್ಲದೆ ಸ್ಥಳೀಯ ರೈತರಾದ ಬಸಪ್ಪ ಕೂಡಲ ಅವರ ರಿಸನಂ.34/2ಎ (2ಎಕರೆ), ಮಲ್ಲನಗೌಡ ಪಾಟೀಲ ಅವರ ರಿಸನಂ.29/1ಅ(1.20 ಎಕರೆ), ಕುಬೇರಪ್ಪ ಹೊಸಮನಿ ಸಹೋದರರ ರಿಸನಂ.17/2(1.15 ಎಕರೆ), ಗದಿಗಯ್ಯ ಹಿರೇಮಠ ಇತರರ ರಿಸನಂ.26/1(2.38 ಎಕರೆ), ಬಸವಂತಪ್ಪ ಬಾಣದ ಇತರರ ರಿಸನಂ.13/1(3 ಎಕರೆ), ಶಿವನಗೌಡ ಪಾಟೀಲ ಅವರ ರಿಸನಂ.54/1,2,4,5ಕ(2 ಎಕರೆ) ಇವರೆಲ್ಲರ ಖಾತೆಗಳ ಒಟ್ಟು 46,999 ರೂ. ಪರಿಹಾರವನ್ನು ಗ್ರಾಮ ಸಹಾಯಕ ಗುತ್ತೆಪ್ಪ ವಾಲಿಕಾರ ತನ್ನ ಅತ್ತಿಗೆ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ.

    ಹಸನಾಬಾದಿ ಗ್ರಾಮದ ಉಡಚಪ್ಪ ವಾಲಿಕಾರ ಅವರ ರಿಸನಂ.52/1(1.19 ಎಕರೆ), ಸೋಮಪ್ಪ ವಾಲಿಕಾರ ಅವರ ರಿಸನಂ.5/1(1.20 ಎಕರೆ) ಮಾವಿನ ತೋಟಗಳಿಗೂ ಗೋವಿನಜೋಳ ಎಂದು ದಾಖಲಿಸಿ 27,963 ರೂ.ಗಳನ್ನು ಗ್ರಾಮ ಸಹಾಯಕನ ಸಂಬಂಧಿ ಪರಮೇಶ್ವರಪ್ಪ ದಾನಣ್ಣನವರ ಎಂಬುವವರ ಖಾತೆಗೆ ವರ್ಗಾಯಿಸಲಾಗಿದೆ. ಇಬ್ಬರ ಪಹಣಿ ಪತ್ರಿಕೆಗಳಲ್ಲೂ ಮಾವಿನ ತೋಟವೆಂದು ದಾಖಲಿದೆ. ಇಂಥ ಪ್ರಕರಣಗಳು ಮಾವಕೊಪ್ಪ, ಶಿರಗೋಡ ಸೇರಿ ತಾಲೂಕಿನಾದ್ಯಂತ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇವರೆಲ್ಲರ ಮೇಲೂ ಪ್ರಕರಣ ದಾಖಲಿಸಿ, ತೀವ್ರ ತನಿಖೆಗೊಳಪಡಿಸುವ ಅಗತ್ಯವಿದೆ ಎಂಬುದು ರೈತ ಸಮುದಾಯದ ಒತ್ತಾಯವಾಗಿದೆ.

    ಗ್ರಾಮ ಲೆಕ್ಕಾಧಿಕಾರಿಗಳ ಮನವಿ: ಇತ್ತೀಚೆಗೆ ಜಿಲ್ಲಾಧಿಕಾರಿ ತಾಲೂಕಿನ ಎಲ್ಲ ಗ್ರಾಮಲೆಕ್ಕಾಧಿಕಾರಿ ಹಾಗೂ ಡಾಟಾ ಎಂಟ್ರಿ ಆಪರೇಟರ್​ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರಿಂದಾಗಿ ಎಲ್ಲರೂ ಆತಂಕಕ್ಕೊಳಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಭಾಗಿಯಾದವರು, ಹಣ ಹಾಕಿಸಿಕೊಂಡವರ ಮೇಲೆ ಮಾತ್ರ ಕ್ರಮ ಕೈಗೊಳ್ಳಬೇಕು. ಸಾರಾಸಗಟಾಗಿ ಎಲ್ಲರ ಮೇಲೆ ದೂರು ಸಲ್ಲಿಸಿರುವುದರಿಂದ ತಮ್ಮ ಕಾರ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ. ಈ ದೂರು ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿ, ಶಾಸಕ ಉದಾಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts