More

    ಗ್ರಾಮ ಲೆಕ್ಕಾಧಿಕಾರಿ, ಮೂವರು ವಿದ್ಯಾರ್ಥಿಗಳ ಬಂಧನ

    ರಾಣೆಬೆನ್ನೂರ: ಜಿಲ್ಲೆಯ ನೆರೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಹಾವೇರಿ ಜಿಲ್ಲೆಯಷ್ಟೆ ಅಲ್ಲ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಖದೀಮರ ನಂಟಿರುವುದು ಪತ್ತೆಯಾಗಿದೆ.

    ‘ನೆರೆವು ಕನ್ನ’ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಗ್ರಾಮೀಣ ಠಾಣೆ ಸಿಪಿಐ ಸುರೇಶ ಸಗರಿ ನೇತೃತ್ವದ ತಂಡ ಬೆಳಗಾವಿ ಜಿಲ್ಲೆಯ ಒಬ್ಬ ಗ್ರಾಮ ಲೆಕ್ಕಾಧಿಕಾರಿ, ಇಬ್ಬರು ವಿದ್ಯಾರ್ಥಿಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಒಬ್ಬ ವಿದ್ಯಾರ್ಥಿ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಾಡಗಿ ನಿವಾಸಿ ಹಾಗೂ ಸವದತ್ತಿ ತಾಲೂಕಿನ ಅಸುಂಡಿ-ಕೆರೆಕಟ್ಟೆ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಅಪ್ಪಾಸಾಬ ಹುನ್ನೂರ (21), ಈತನಿಗೆ ಸಹಕರಿಸಿದ ಅಥಣಿ ತಾಲೂಕು ಐಗಳಿ ಗ್ರಾಮದ ಸಹೋದರರಾದ ಬಸವರಾಜ ಸದಾಶಿವ ಎಳ್ಳೂರು (21), ಶಿವಾನಂದ ಸದಾಶಿವ ಎಳ್ಳೂರು (19) ಮತ್ತು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಅಮಿತ್ ಯಲ್ಲಮ್ಮ ವೆಂಕಪ್ಪಗೋಳ(21) ಬಂಧಿತ ಆರೋಪಿಗಳು. ಇವರಿಂದ 42 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಮೂವರು ರೈತರ ಹೆಸರಿನಲ್ಲಿ ಹಣ ಲೂಟಿ: ಗ್ರಾಮ ಲೆಕ್ಕಿಗ ಬಸವರಾಜ ಹುನ್ನೂರ 26-3-2018ರಿಂದ 27-6-2019ರವರೆಗೆ ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಂತರ ಇಲ್ಲಿಯ ಕೆಲಸಕ್ಕೆ ರಾಜೀನಾಮೆ ನೀಡಿ ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿ ಅಲ್ಲಿ ಕೆಲಸಕ್ಕೆ ನೇಮಕವಾಗಿದ್ದ. ನಂತರ ಸವದತ್ತಿ ತಾಲೂಕಿನ ಅಸುಂಡಿ-ಕೆರೆಕಟ್ಟೆ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ.

    ನೆರೆ ಪರಿಹಾರ ವಿತರಣೆ ಮಾಡುವ ಸಂದರ್ಭದಲ್ಲಿ ದೇವರಗುಡ್ಡ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರ ನೀಡಿದ್ದ ಬೆಳೆ ತಂತ್ರಾಂಶದ ಐಡಿ ಹಾಗೂ ಪಾಸ್​ವರ್ಡ್ ಬಳಸಿಕೊಂಡು ದೇವರಗುಡ್ಡ-ಕಜ್ಜರಿ ಗ್ರಾಮದ ಮೂವರು ರೈತರ ಜಮೀನಿನ ಹೆಸರಿನಲ್ಲಿ 91 ಸಾವಿರ ರೂ. ಲೂಟಿ ಮಾಡಿದ್ದನು. ಈ ಹಣವನ್ನು 46 ಸಾವಿರ ರೂ., 35 ಸಾವಿರ ರೂ. ಹಾಗೂ 10 ಸಾವಿರ ರೂ.ನಂತೆ ತನ್ನ ಮೂವರು ಸ್ನೇಹಿತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ. ಪ್ರಕರಣದ ಕುರಿತು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ತನಿಖೆಯ ವೇಳೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಗ್ರಾಮ ಲೆಕ್ಕಾಧಿಕಾರಿಯ ಕೈಚಳಕ ಬೆಳಕಿಗೆ ಬಂದಿತ್ತು. ಇದೀಗ ಅಕ್ರಮ ನಡೆಸಿದವರು ಪೊಲೀಸರ ಅತಿಥಿಯಾಗಿದ್ದಾರೆ.

    ಬಂಧಿತರು ಫಸ್ಟ್ ಕ್ಲಾಸ್ ಸ್ಟೂಡೆಂಟ್: ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹುನ್ನೂರ ಪಿಯುಸಿಯಲ್ಲಿ ಶೇ. 96ರಷ್ಟು ಅಂಕ ಗಳಿಸಿದ್ದಾನೆ. ಬಿಎ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಬಸವರಾಜ ಎಳ್ಳೂರ ಪಿಯುಸಿಯಲ್ಲಿ ಶೇ. 74, ಅಮಿತ್ ಶೇ. 65 ಹಾಗೂ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿರುವ ಶಿವಾನಂದ ಶೇ. 69 ಅಂಕ ಪಡೆದಿದ್ದಾನೆ. ಆದರೆ, ಸರ್ಕಾರದ ಹಣ ಲೂಟಿ ಮಾಡಿ ದಿಢೀರನೆ ಶ್ರೀಮಂತರಾಗುವ ಕನಸು ಕಂಡ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹುನ್ನೂರ ಜೊತೆ ಕೈಜೋಡಿಸಿ ತಮ್ಮ ಖಾತೆಗಳಿಗೆ ಹಣ ಹಾಕಿಸಿಕೊಂಡು ಇದೀಗ ಕಂಬಿ ಎಣಿಸುವಂತಾಗಿದೆ.

    ಬಸವರಾಜನಿಗೆ ವೆಂಕಟೇಶ ಸಾಥ್!: ಮಾ. 10ರಂದು ಬಂಧಿತನಾದ ತಾಲೂಕಿನ ಕಾಕೋಳ ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಮಡಿವಾಳರ ಹಾಗೂ ಬಸವರಾಜ ಹುನ್ನೂರ ಅಕ್ಕಪಕ್ಕದ ಗ್ರಾಮಗಳ ಲೆಕ್ಕಾಧಿಕಾರಿಗಳಾಗಿದ್ದರು. ಒಂದೇ ಬಾರಿಗೆ ಕರ್ತವ್ಯಕ್ಕೆ ಸೇರಿದ್ದರು. ರಾಣೆಬೆನ್ನೂರಿನಲ್ಲಿ ಒಟ್ಟಿಗೆ ರೂಂ ಮಾಡಿಕೊಂಡಿದ್ದರು. ಆದ್ದರಿಂದಲೇ ಇಲ್ಲಿಯ ನೆರೆ ಪರಿಹಾರ ವಿತರಣೆ ಕುರಿತ ಮಾಹಿತಿಯನ್ನು ವೆಂಕಟೇಶ, ಬಸವರಾಜ ಹಂಚಿಕೊಂಡು ಮಾಡುತ್ತಿದ್ದರು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts