More

    ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಎಲ್ಲರಿಗೂ ಪ್ರೇರಣೆ

    ಬೆಳಗಾವಿ: ವೈದ್ಯಕೀಯ ಕೋರ್ಸ್‌ಗಳ ಅರ್ಹತಾ ಪ್ರವೇಶ (ನೀಟ್) ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಹಾಗೂ ರಾಜ್ಯಕ್ಕೆ 2ನೇ ರ‌್ಯಾಂಕ್ ಗಳಿಸಿರುವ ಬೆಳಗಾವಿ ತಾಲೂಕಿನ ರುಚಾ ಪಾವಶೆ ಹಾಗೂ ದೇಶಕ್ಕೆ 196 ರ‌್ಯಾಂಕ್ ಮತ್ತು ರಾಜ್ಯಕ್ಕೆ 149 ರ‌್ಯಾಂಕ್ ಗಳಿಸಿರುವ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಶ್ವೇತಾ ಸಾಂಬ್ರೇಕರ ಅವರನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ತಮ್ಮ ನಿವಾಸದಲ್ಲಿ ಶುಕ್ರವಾರ ಸತ್ಕರಿಸಿದರು.

    ಬಳಿಕ ಮಾತನಾಡಿದ ಕೋರೆ ಅವರು, ನೀಟ್‌ನಲ್ಲಿ ಸಾಧನೆ ಮಾಡಿರುವ ಈ ಇಬ್ಬರು ಕೆಎಲ್‌ಇ ಸಂಸ್ಥೆಯ ಆರ್‌ಎಲ್ ಸೈನ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಎನ್ನುವುದೇ ಹಮ್ಮೆ ಎಂದರು. ರುಚಾ ಪಾವಶೆ ಅವರು ಸಣ್ಣ ಹಳ್ಳಿಯಿಂದ ಬಂದ ಈ ವಿದ್ಯಾರ್ಥಿಯಾಗಿದ್ದು, ಯಾವುದೇ ಟ್ಯೂಷನ್ ಇಲ್ಲದೆ ರ‌್ಯಾಂಕ್ ಪಡೆದಿರುವುದು ವಿಶೇಷವಾಗಿದೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಈ ಸಾಧನೆ ಮಾಡಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ನಮ್ಮ ಸಂಸ್ಥೆಯಲ್ಲಿ ಈ ವಿದ್ಯಾರ್ಥಿಗಳು ಅಭ್ಯಸಿಸಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.

    ಕೆಎಲ್‌ಇ ಸಂಸ್ಥೆಯಲ್ಲಿ ಓದಿದ 65 ವಿದ್ಯಾರ್ಥಿಗಳು ಈ ಬಾರಿ ನೀಟ್‌ನಲ್ಲಿ 600 ರ‌್ಯಾಂಕ್ ಒಳಗೆ ರ‌್ಯಾಂಕ್ ಗಳಿಸಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಲ್‌ಇ ಸಂಸ್ಥೆ ಸಿಬ್ಬಂದಿ ಮಕ್ಕಳಿಗೆ ಸಂಸ್ಥೆಯ ಕಾಲೇಜುಗಳಿಗೆ ಪ್ರವೇಶ ವೇಳೆ ಶುಲ್ಕದಲ್ಲಿ ವಿನಾಯತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
    ಕೆಎಲ್‌ಇ ನಿರ್ದೇಶಕ ಹಾಗೂ ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಸಂಸ್ಥೆಯ ಆಜೀವ ಸದಸ್ಯರಾದ ಎಸ್.ಜಿ. ನಂಜಪ್ಪನವರ, ಡಾ.ಸತೀಶ ಎಂ.ಪಿ., ಪ್ರಾಚಾರ್ಯ ವಿ.ಸಿ.ಕಾಮಗೋಳ, ಉಪ ಪ್ರಾಚಾರ್ಯ ಡಾ.ಎಸ್.ಎ. ಜವಳಿ, ಗಣಿತಶಾಸ್ತ್ರ ಉಪನ್ಯಾಸಕ ಮಾಲತೇಶ ಪಾಟೀಲ ಹಾಗೂ ಇಬ್ಬರು ವಿದ್ಯಾರ್ಥಿಗಳ ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts