More

    ಗ್ರಾಮೀಣ ಠಾಣೆಗೆ ಕೇಸ್ ಹಸ್ತಾಂತರ

    ಹುಬ್ಬಳ್ಳಿ: ಪಾಕಿಸ್ತಾನ್ ಪರ ಘೊಷಣೆ ಕೂಗಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹಿ ಕೃತ್ಯದ ಪ್ರಕರಣವನ್ನು ಹು-ಧಾ ಪೊಲೀಸ್ ಕಮಿಷನರೇಟ್​ದವರು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಹಸ್ತಾಂತರಿಸಿ ಕೈ ತೊಳೆದುಕೊಂಡಿದ್ದಾರೆ.

    ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಿಂದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ, ಆರೋಪಿತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವವರೆಗೆ ಪೊಲೀಸ್ ಕಮಿಷನರೇಟ್ ಚುರುಕಿನಿಂದಲೇ ಕೆಲಸ ಮಾಡಿತ್ತು. ಗುರುತರ ಆರೋಪದ ಪ್ರಕರಣದಲ್ಲಿ ಆರೋಪಿತರಿಂದ ಪೊಲೀಸ್ ಠಾಣೆಯಲ್ಲೇ ಬಾಂಡ್ ಪಡೆದು ಬಿಟ್ಟು ಕಳುಹಿಸಿದ್ದು, ಭಾನುವಾರ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಯಾರದ್ದೋ ಮರ್ಜಿಗೆ ಬಿದ್ದು ಕೆಲಸ ಮಾಡುತ್ತಿದ್ದಾರೆ. ದೇಶದ್ರೋಹಿಗಳನ್ನೇ ಬಿಟ್ಟು ಕಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಹೀಗಾಗಿ, ಪೇಚಿಗೆ ಸಿಲುಕಿದ್ದ ಪೊಲೀಸರು ಆರೋಪಿತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಮತ್ತೆ ಬಂಧಿಸಿ ಕರೆತಂದು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

    ಪ್ರಕರಣ ಬೆಳಕಿಗೆ ಬಂದಿದ್ದು ಗೋಕುಲ ರಸ್ತೆ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ. ಪ್ರಾಂಶುಪಾಲರು ದೂರು ನೀಡಿದ್ದು ಗೋಕುಲ ರಸ್ತೆ ಠಾಣೆಗೆ. ಪ್ರಾಥಮಿಕ ವಿಚಾರಣೆಯಲ್ಲಿ- ಕಾಶ್ಮೀರಿ ವಿದ್ಯಾರ್ಥಿಗಳು ವಿಡಿಯೋ ಮಾಡಿದ್ದು ತಾಲೂಕಿನ ಕೊಟಗುಂಡಹುಣಸಿ ಗ್ರಾಮದಲ್ಲಿರುವ ವಸತಿ ನಿಲಯದಲ್ಲಿ ಎಂದು ಪೊಲೀಸರಿಗೆ ತಿಳಿದುಬಂದಿತ್ತು. ಆಗಲೇ ಪ್ರಕರಣವನ್ನು ಗ್ರಾಮೀಣ ಠಾಣೆಗೆ ವರ್ಗಾಯಿಸುವ ಚರ್ಚೆ ನಡೆದಿದೆ ಎಂದು ಹೇಳಲಾಗಿತ್ತು.

    ಯಾವುದೋ ಕಾರಣದಿಂದ ವ್ಯತಿರಿಕ್ತ ತೀರ್ಮಾನ ತೆಗೆದುಕೊಂಡಿದ್ದ ಕಮಿಷನರೇಟ್ ಪೊಲೀಸರು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಆರೋಪಿತರನ್ನು ಪುನಃ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಹಸ್ತಾಂತರಿಸಲು ಅನುಮತಿ ಪಡೆದು ಕ್ರಮ ಜರುಗಿಸಿದ್ದಾರೆ.

    ಅಂತೂ ಪ್ರಕರಣ ಈಗ ಕಮಿಷನರೇಟ್ ವ್ಯಾಪ್ತಿಯಿಂದ ಧಾರವಾಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಹೋಗಿದೆ. ಮುಂದಿನ ತನಿಖೆಯನ್ನು ಗ್ರಾಮೀಣ ಪೊಲೀಸರು ಎಸ್​ಪಿ ವರ್ತಿಕಾ ಕಟಿಯಾರ್ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ.

    ವಕೀಲರು ಇಲ್ಲ, ಬರಲಿದ್ದಾರೆ:

    ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಆರೋಪಿತ ಕಾಶ್ಮೀರಿ ವಿದ್ಯಾರ್ಥಿಗಳು, ನಿಮ್ಮ ಪರ ಯಾರಾದರೂ ವಕೀಲರು ಇದ್ದಾರೆಯೆ? ಯಾರನ್ನಾದರೂ ನೇಮಿಸಬೇಕೆ ಎಂಬ ನ್ಯಾಯಾಲಯದ ಪ್ರಶ್ನೆಗೆ ಈಗ ಯಾರೂ ವಕೀಲರು ಇಲ್ಲ. ತಮ್ಮ ವಕೀಲರು ಬರಲಿದ್ದು ಸ್ವಲ್ಪ ಕಾಲಾವಕಾಶ ನೀಡಿ ಎಂದು ಕೇಳಿಕೊಂಡರು. ಅವರಿಗೆ ಮಾ. 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ದೇಶದ್ರೋಹಿ ಘೊಷಣೆ ಕೂಗಿದವರ ವಿರುದ್ಧ ಯಾರೂ ವಕಾಲತ್ತು ವಹಿಸದಂತೆ ಹುಬ್ಬಳ್ಳಿ ವಕೀಲರ ಸಂಘ ತೀರ್ಮಾನ ತೆಗೆದುಕೊಂಡಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

    ಹಿಂದುಪರ ಸಂಘಟನೆಗಳ ಪ್ರತಿಭಟನೆ

    ಧಾರವಾಡ: ಪಾಕಿಸ್ತಾನ ಪರ ಘೊಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದುಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

    ಹುಬ್ಬಳ್ಳಿಯಲ್ಲಿ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೊಷಣೆ ಕೂಗಿ ಅವಳಿನಗರದ ಶಾಂತಿ ಕದಡಿದ್ದಾರೆ. ದೇಶ ವಿರೋಧಿ ಘೊಷಣೆಗಳ ಮೂಲಕ ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿಂದು ಪರಿಷತ್ ಅಧ್ಯಕ್ಷ ನಾಗರಾಜ ಯಾದವ, ಮಂಜುನಾಥ ಹೊಂಗಲ, ಶಕ್ತಿ ಹಿರೇಮಠ, ಶ್ರೀರಾಮ ಸೇನೆಯ ಮಡಿವಾಳ ಜಾಧವ, ಮಂಜುನಾಥ ಮಾಯಣ್ಣಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts