More

    ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದಿಸಿ

    ಹಾವೇರಿ: ಜಿಲ್ಲಾ ಕಚೇರಿಯವರೆಗೆ ಹಳ್ಳಿ ಜನರ ದೂರು ಬರದಂತೆ ಗ್ರಾಪಂ, ತಾಪಂ ಹಂತದಲ್ಲೇ ಸಮಸ್ಯೆ ಇತ್ಯರ್ಥಗೊಳಿಸಬೇಕು. ಇದರಿಂದ ಗ್ರಾಮೀಣ ಜನರು ಜಿಲ್ಲಾ ಕಚೇರಿಗೆ ಬರುವ ತಾಪತ್ರಯ ತಪ್ಪುತ್ತದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಜಿಪಂ ಅಧ್ಯಕ್ಷ ಬಸವನಗೌಡ ದೇಸಾಯಿ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ವಿವಿಧ ಮಾಹಿತಿ ಕೇಳಿ ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಬೇಕು. ಯಾವುದೇ ಸಮಸ್ಯೆಗಳನ್ನು ಹೊತ್ತು ಕಚೇರಿಗೆ ಬರುವ ಸಾರ್ವಜನಿಕರಿಗೆ ಸರ್ಕಾರದ ಮಾರ್ಗಸೂಚಿ, ಮಾನದಂಡಗಳಡಿಯಲ್ಲಿ ಪರಿಹಾರ ಕಲ್ಪಿಸಬೇಕು. ಸಾಧ್ಯವಾಗದಿದ್ದರೆ ತಾಳ್ಮೆಯಿಂದ ಮನವರಿಕೆ ಮಾಡಿಕೊಡಿ. ನಿಮ್ಮ ಹಂತದಲ್ಲೇ ಸಮಸ್ಯೆಗಳು ಪರಿಹರಿಸಿದರೆ, ಜನಪ್ರತಿನಿಧಿಗಳ ಹತ್ತಿರ ದೂರು ಬರುವುದು ಕಡಿಮೆಯಾಗುತ್ತದೆ. ಆಡಳಿತ ಸರಳವಾಗುತ್ತದೆ ಎಂದರು.

    ಕೆಳಮಟ್ಟದಲ್ಲಿ ಸಮಸ್ಯೆಗಳು ಇತ್ಯರ್ಥಗೊಂಡಲ್ಲಿ ನಿಮಗೆ ಒತ್ತಡ ಕಡಿಮೆಯಾಗುತ್ತದೆ. ಕಚೇರಿಗಳಿಗೆ ಬರುವ ಜನರು ಕಡಿಮೆಯಾಗುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆ ತಾಲೂಕು ಕಚೇರಿಗೆ ಭೇಟಿ ನೀಡಿ ಆಡಳಿತ ಚುರುಕುಗೊಳಿಸಬೇಕು. ಇದೇ ಮಾದರಿಯಲ್ಲಿ ತಾಲೂಕು ಅಧಿಕಾರಿಗಳು ಹೋಬಳಿ ಹಾಗೂ ಗ್ರಾಪಂಗಳಿಗೆ ಪ್ರವಾಸ ಕೈಗೊಂಡು ಕೆಳಹಂತದಿಂದ ಆಡಳಿತ ಚುರುಕುಗೊಳಿಸಬೇಕು. ಇದರಿಂದ ಸಭೆಯಲ್ಲಿ ಉತ್ತರ ಹೇಳುವ ಅಧಿಕಾರಿಗಳಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಜಿಲ್ಲೆಯ ಸಮಗ್ರ ಮಾಹಿತಿ ದೊರೆಯುತ್ತದೆ ಎಂದರು.

    ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಟ್ಟಡ ನಿರ್ವಣದಲ್ಲಿ ವಿಳಂಬ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಗೆ ಅಂಗನವಾಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಬಾರದು. ಅರಣ್ಯ ಇಲಾಖೆಯಿಂದ ಈ ವರ್ಷ ಬೆಳೆಸಿರುವ ಸಸಿಗಳನ್ನು ವರದಾ ನದಿ ಪಾತ್ರದ ರೈತರಿಗೆ ಆದ್ಯತೆ ಮೇರೆಗೆ ವಿತರಿಸಬೇಕು ಎಂದರು.

    ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಜಲಸಂರಕ್ಷಣೆ ಯೋಜನೆಯಡಿ ಉದ್ಯೋಗ ಖಾತ್ರಿ ಅನುದಾನ ಬಳಸಿ ವರದಾ ನದಿ ಪಾತ್ರದಲ್ಲಿ 123 ಕಿಮೀ ಅರಣ್ಯ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಸಿಗಳನ್ನು ಇಲ್ಲಿ ಬಳಕೆ ಮಾಡಿದರೆ, ಸಸ್ಯ ಸಂರಕ್ಷಣೆ ಯೋಜನೆ ಸಫಲವಾಗುತ್ತದೆ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಮುಖ್ಯಯೋಜನಾಧಿಕಾರಿ ನಿರ್ಮಲಾ ಎನ್.ಕೆ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ಕಿಚನ್ ಗಾರ್ಡನ್ ಬೆಳೆಸಲು ಕ್ರಮ: ಮಳೆಗಾಲ ಆರಂಭವಾಗಿರುವುದರಿಂದ ಈಗಾಗಲೇ ನಿರ್ಧರಿಸಿದಂತೆ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಿವೇಶನ ಲಭ್ಯವಿರುವ ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಕಿಚನ್ ಗಾರ್ಡ್​ನ್ ಬೆಳೆಸಲು ಕ್ರಮವಹಿಸಬೇಕು. ಇದೇ ಮಾದರಿಯಲ್ಲಿ ತೋಟಗಾರಿಕೆ ಇಲಾಖೆಯ ಸಮನ್ವಯತೆಯಿಂದ ಶಾಲಾ ಆವರಣ, ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಕಿಚನ್ ಗಾರ್ಡ್​ನ್ ನಿರ್ವಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts