More

    ಗ್ರಾಮೀಣಾಭಿವೃದ್ಧಿ ವಿವಿ ಪ್ರಗತಿಗೆ ಶ್ರಮ

    ಗದಗ: ಕುಲಪತಿಯಾಗಿ ಶಿಕ್ಷಣದ ಜತೆಗೆ ಸಮಾಜ ಸೇವೆ ಮಾಡು ಅವಕಾಶ ಸಿಕ್ಕಿದೆ. ಲಭಿಸಿರುವ ಅವಕಾಶವನ್ನು ಬಳಸಿಕೊಂಡು ಸಮಾಜಮುಖಿ ಕಾರ್ಯ ಮಾಡಲಾಗುವುದು. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. 40 ವರ್ಷಗಳ ಅಧ್ಯಾಪಕ ಜೀವನದ ಅನುಭವವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ (ಆರ್​ಡಿಪಿಆರ್) ನೂತನ ಕುಲಪತಿ ಡಾ. ವಿಷ್ಣುಕಾಂತ ಚಟಪಳ್ಳಿ ಹೇಳಿದರು.

    ಸ್ಥಳೀಯ ಆರ್​ಡಿಪಿಆರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಸುರೇಶ ನಾಡಗೌಡರ ಅವರಿಂದ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

    ದೇಶದ ಏಕೈಕ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವವಿದ್ಯಾಲಯದಲ್ಲಿ ತರಬೇತಿ, ಸಂಶೋಧನೆ ವಿಸ್ತರಣೆ ಮಾಡಿ ಬಲಪಡಿಸಲಾಗುವುದು. ವಿಶ್ವವಿದ್ಯಾಲಯ ಆರಂಭಿಸಿದವರ ಆಸೆ ಮತ್ತು ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

    ವಿಶ್ವವಿದ್ಯಾಲಯದ ಮೊದಲ ಕುಲಪತಿ ತಿಮ್ಮೇಗೌಡ ಮತ್ತು ಕುಲಸಚಿವ ಸುರೇಶ ನಾಡಗೌಡರ ಸಾಕಷ್ಟು ಶ್ರಮವಹಿಸಿ ವಿಶ್ವವಿದ್ಯಾಲಯಕ್ಕೆ ರೂಪ ಕೊಟ್ಟಿದ್ದು ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

    ಮೇ 26ರಂದು ಬೆಂಗಳೂರಿನಲ್ಲಿರುವ ಆರ್​ಡಿಪಿಆರ್ ಶಾಖಾ ಕಚೇರಿಯಲ್ಲಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದು, ಶುಕ್ರವಾರ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಜಾರ್ಚ್ ತೆಗೆದುಕೊಂಡಿದ್ದೇನೆ. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.

    ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಶಾಂತಿನಾಥ ದಿಬ್ಬದ ಮಾತನಾಡಿ, ಆರ್​ಡಿಪಿಆರ್​ಗೆ ನೂತನ ಕುಲಪತಿಯಾಗಿ ನೇಮಕಗೊಂಡಿರುವ ಡಾ.ವಿಷ್ಣುಕಾಂತ ಚಟಪಳ್ಳಿ ಅವರು ಹಿಡಿದ ಕೆಲಸವನ್ನು ಮಾಡಿ ಮುಗಿಸುವವರಿಗೂ ವಿರಮಿಸುವುದಿಲ್ಲ. ಇದೀಗ ಸಿಕ್ಕಿರುವ ಜವಾಬ್ದಾರಿಯನ್ನು ಉತ್ತಮವಾಗಿ ಬಳಸಿಕೊಂಡು ವಿಶ್ವವಿದ್ಯಾಲಯ ಏಳ್ಗೆಗೆ ಶ್ರಮಿಸಲಿದ್ದಾರೆ ಎಂದರು.

    ಕುಲಸಚಿವ ಸುರೇಶ ನಾಡಗೌಡರ ಮಾತನಾಡಿ, 2016ರಲ್ಲಿ ವಿಶ್ವವಿದ್ಯಾಲಯ ಆರಂಭವಾಗಿದ್ದು, 4 ವರ್ಷಗಳ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, ವಿಶ್ವವಿದ್ಯಾಲಯದ ನೂತನ ಕಟ್ಟಡಕ್ಕಾಗಿ 300 ಎಕರೆ ಜಾಗವನ್ನು ಸರ್ಕಾರ ಖರೀದಿಸಿದೆ ಎಂದರು.

    ವಿಶ್ವವಿದ್ಯಾಲಯದ ಎರಡನೇ ಕುಲಪತಿಯಾಗಿ ಡಾ. ವಿಷ್ಣುಕಾಂತ ಚಟಪಳ್ಳಿ ಅಧಿಕಾರ ಸ್ವೀಕರಿಸಿದ್ದು, ಸ್ಕಿಲ್ ಡೆವಲಪ್​ವೆುಂಟ್​ನಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರಿಂದ ವಿಶ್ವವಿದ್ಯಾಲಯ ಇನ್ನಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸುಧೀರ ಸಿಂಗ್ ಘೊರ್ಪಡೆ, ಪಿ.ಆರ್.ಇನಾಂದಾರ, ಡಿ.ಕೆ. ದೇಶಪಾಂಡೆ , ಕೃಷ್ಣಾ ಹೊಂಬಾಳಿ, ರಮೇಶ ಸಜ್ಜಗಾರ ಹಾಗೂ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts