More

    ಗ್ರಾಮಾಭಿವೃದ್ಧಿಗೆ ಮೀಸಲು ಜಾಗ ಉಳಿಸಲು ಒತ್ತಾಯ: ಮಕ್ಕಳೊಂದಿಗೆ ಧರಣಿ ಕುಳತಿ ಭೈರೇಕೊಪ್ಪ ಗ್ರಾಮಸ್ಥರು

    ಸೊರಬ: ಗ್ರಾಮದ ಅಭಿವೃದ್ಧಿಗೆ ಮೀಸಲಿಟ್ಟ ಜಾಗವನ್ನು ಕೆಲ ವ್ಯಕ್ತಿಗಳು ಅತಿಕ್ರಮಿಸಿ ಸಾಗುವಳಿ ಮಾಡಲು ಮುಂದಾಗಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಬೈರೇಕೊಪ್ಪ ಗ್ರಾಮಸ್ಥರು ಶಾಲಾ ಮಕ್ಕಳೊಂದಿಗೆ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಉಳವಿ ಹೋಬಳಿ ವ್ಯಾಪ್ತಿಯ ಬೈರೇಕೊಪ್ಪ ಗ್ರಾಮದ ಸರ್ವೆ ನಂ.24ರಲ್ಲಿ ಹಲವಾರು ವರ್ಷಗಳಿಂದ ಸುಮಾರು 5 ಎಕರೆ ಭೂಮಿಯನ್ನು ಗ್ರಾಮದ ಅಭಿವೃದ್ಧಿಗೆ ಕಾಯ್ದಿರಿಸಲಾಗಿತ್ತು. ಬೈರೇಕೊಪ್ಪ ಗ್ರಾಮದ ಕೆಲವರು 2015ರಲ್ಲಿ ರಾತ್ರೋರಾತ್ರಿ ಅಕ್ರಮ ಮನೆ ನಿರ್ಮಿಸಿಕೊಂಡು ಜಾಗ ಕಬಳಿಸಲು ಮುಂದಾಗಿದ್ದಾರೆ ಎಂದು ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಮಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
    ಭೂ ಕಬಳಕೆ ಮಾಡಿದವರ ವಿರುದ್ಧ ಗ್ರಾಮಸ್ಥರೆಲ್ಲರೂ ಒಗ್ಗೂಡಿ 5 ವರ್ಷದ ಹಿಂದೆಯೇ ತಾಲೂಕು ಕಚೇರಿ ಬಳಿ ಪ್ರತಿಭಟನೆ ಮಾಡಿದ ಪರಿಣಾಮ ತಾಲೂಕು ಆಡಳಿತ ಅಂದು ನಿಷೇಧಾಜ್ಞೆ ಜಾರಿಗೊಳಿಸಿ ಆಕ್ರಮಿತ ಪ್ರದೇಶದಲ್ಲಿ ನಿಷೇಧಿತ ಪ್ರದೇಶವೆಂದು ನಾಮಫಲಕ ಅಳವಡಿಸಿದ್ದರೂ ಒಂದು ತಿಂಗಳ ಹಿಂದೆ ಪುನಃ ಸರ್ಕಾರದ ಆದೇಶ ಉಲ್ಲಂಘಿಸಿ ನಿಷೇಧಿತ ಜಾಗದಲ್ಲಿ ಅಡಕೆ ಸಸಿಗಳನ್ನು ನೆಡುವ ಪ್ರಯತ್ನ ಮಾಡುತ್ತಿದ್ದಾರೆ.
    ಕೂಡಲೇ ಅತಿಕ್ರಮಿಸಿಕೊಂಡ ಜಾಗವನ್ನು ತೆರವುಗೊಳಿಸಿ ಗ್ರಾಮದ ಅಭಿವೃದ್ಧಿಗೆ ಮೀಸಲಿಡಬೇಕು. ಅಲ್ಲದೇ ಅತಿಕ್ರಮಣಕ್ಕೆ ಮುಂದಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನ್ಯಾಯ ಕೊಡಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
    ಗ್ರಾಮದ ಶಾಲಾ ಮಕ್ಕಳು ಹಾಗೂ ಮಹಿಳೆಯರು ಶಾಲೆಗೆ ಗೈರಾಗಿ ಶಾಲಾ ಅಭಿವೃದ್ಧಿಗಾಗಿ ಮೀಸಲಿಟ್ಟ ಜಾಗ ಉಳಿಸಿಕೊಡಿ ಎನ್ನುವ ಘೋಷಣೆಯೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts