More

    ಗ್ರಾಪಂ ಗದ್ದುಗೆ ಏರಲು ಸದಸ್ಯರಿಗೆ ಪ್ರವಾಸ ಭಾಗ್ಯ

    ಕೊಟ್ಟೂರು: ತಾಲೂಕಿನ 14 ಗ್ರಾಪಂಗಳ ಪೈಕಿ ಐದು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆದಿದೆ. ಈಗಾಗಲೇ ಕೆಲ ಆಕಾಂಕ್ಷಿಗಳು ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದಿದ್ದು, ಇನ್ನೂ ಕೆಲವರು ಸಿದ್ಧತೆ ನಡೆಸಿದ್ದಾರೆ.

    ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಜೂ.17ರಂದು ಮೀಸಲಾತಿ ಘೋಷಣೆ ಆಗುತ್ತಿದ್ದಂತೆ ಆಕಾಂಕ್ಷಿಗಳ ಪೈಪೋಟಿ, ಬೆಂಬಲಿಗರೊಂದಿಗೆ ಪುಣ್ಯ ಕ್ಷೇತ್ರಗಳ ದರ್ಶನ, ರಾಜಕೀಯ ತೀರ್ಥಯಾತ್ರೆ ಜೋರಾಗಿ ನಡೆದಿದೆ.

    ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. ಮೀಸಲು ನಿಗದಿ ಆಗುತ್ತಿದ್ದಂತೆ ಒಟ್ಟು 22 ಸದಸ್ಯರಲ್ಲಿ 11 ಜನ ರಾಜಕೀಯ ಪ್ರವಾಸ ಕೈಗೊಂಡಿದ್ದು, ಈವರೆಗೆ ವಾಪಸ್ ಆಗಿಲ್ಲ.

    ಅಲ್ಲದೆ ಎಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿವೆ. ಜು.28ರಂದು ಚುನಾವಣೆ ನಿಗದಿಯಾಗಿದ್ದು, ಗದ್ದುಗೆ ಏರಲು ಇನ್ನೊಬ್ಬರ ಬೆಂಬಲಬೇಕಿದೆ. ಎರಡೂ ಬಣಗಳು ತೆರೆಮರೆ ಕಸರತ್ತು ನಡೆಸಿವೆ.

    ಧಾರ್ಮಿಕ-ಐತಿಹಾಸಿಕ ಹಿನ್ನೆಲೆ ಹೊಂದಿರುವ ಉಜ್ಜಿನಿ ಗ್ರಾಪಂ 22 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ-ಎಸ್ಟಿ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಜು.20ರಂದು ಚುನಾವಣೆ ನಿಗದಿಯಾಗಿದ್ದು, ತೀವ್ರ ಪೈಪೋಟಿ ಆರಂಭವಾಗಿದೆ. ಎರಡಲ್ಲಿ ಒಂದು ಬಣದ ಸದಸ್ಯರು ಪ್ರವಾಸ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ.

    ಉಳಿದಂತೆ ಅಧಕ್ಷ ಸ್ಥಾನ-ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಕೆಟಗಿರಿ-ಎ ವರ್ಗಕ್ಕೆ ಮೀಸಲಾದ ನಿಂಬಳಗೇರಿ ಗ್ರಾಪಂಗೆ ಜು.26ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದೆ. ತೂಲಹಳ್ಳಿ ಪಂಚಾಯಿತಿ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಜು.23ಕ್ಕೆ ಎಲೆಕ್ಷನ್ ನಡೆಸಲು ಸಿದ್ಧತೆ ನಡೆದಿದೆ.

    ಅದರಂತೆ ನಾಗರಕಟ್ಟೆ ಗ್ರಾಪಂಗೆ ಜು.21ಕ್ಕೆ ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನ ಕೆಟಗಿರಿ-ಎ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಪೈಪೋಟಿ ನಡೆದಿದೆ. ಇನ್ನೂ ಕಾಳಾಪುರ ಸಣ್ಣ ಗ್ರಾಪಂ ಆಗಿದ್ದು, 14 ಸದಸ್ಯರಿದ್ದಾರೆ.

    ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್ಟಿ ಮಹಿಳೆ) ಸ್ಥಾನಕ್ಕೆ ಮೀಸಲು ಘೋಷಣೆಯಾಗುತ್ತಿದ್ದಂತೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ 15 ದಿನ ಪ್ರವಾಸ ತೆರಳಿದ್ದ 10 ಜನ ಸದಸ್ಯರು ಊರಿಗೆ ಮರಳಿದ್ದಾರೆ. ಉಪಾಧ್ಯಕ್ಷ ಸ್ಥಾನದ ಎಸ್ಟಿಟಿ ಮಹಿಳೆ ಕೊಟ್ರಮ್ಮ ಒಬ್ಬರೇ ಇದ್ದು, ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.

    ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಪ್ರವಾಸ ಕೈಗೊಳ್ಳಲು ಆಕಾಂಕ್ಷಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ. ಹ್ಯಾಳ್ಯಾ ಗ್ರಾಪಂಗೆ 14 ಸದಸ್ಯರಿದ್ದು, ಅಧ್ಯಕ್ಷ-ಎಸ್.ಸಿ. ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾಗಿದೆ.

    ಮೇಲ್ನೋಟಕ್ಕೆ ಪೈಪೋಟಿ ಇದ್ದರೂ ಸೌಹಾರ್ದಯುತವಾಗಿ ಅಧ್ಯಕ್ಷೆ-ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ. ಉಳಿದ ಪಂಚಾಯಿತಿಗಳಿಗೆ ಎಲೆಕ್ಷನ್ ದಿನಾಂಕ ಘೋಷಣೆಗೆ ಆಕಾಂಕ್ಷಿಗಳು ಎದುರುನೋಡುತ್ತಿದ್ದಾರೆ.

    ಕೆ.ಅಯ್ಯನಹಳ್ಳಿ ಗ್ರಾಪಂನ 11 ಜನ ಸದಸ್ಯರು ಪ್ರವಾಸ ಹೋಗಿದ್ದಾರೆ. ಯಾವ ಊರಿಗೆ ಹೋಗಿದ್ದಾರೆ, ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿವೆ. ಜು.28ರಂದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಇದ್ದು, ಅವತ್ತು ಇಲ್ಲವೆ ಹಿಂದಿನ ದಿನ ಬರಬಹುದು.
    ಕೆ.ಕೊಟ್ರೇಶಪ್ಪ ಗ್ರಾಪಂ ಸದಸ್ಯ, ಕೆ.ಅಯ್ಯನಹಳ್ಳಿ

    ಕೇಳಿದ್ದೆಲ್ಲ ಆಗಲ್ಲ ಎನ್ನುವಂತಿಲ್ಲ
    ಐತಿಹಾಸಕ, ಧಾರ್ಮಿಕ ತಾಣಗಳಿಗೆ ಪ್ರವಾಸಕ್ಕೆ ಕರೆದೊಯ್ದಿರುವ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳು, ಸದಸ್ಯರು ಏನೇ ಕೇಳಿದರೂ ಇಲ್ಲ ಎನ್ನದೆ ಕೊಡಿಸಬೇಕಿದೆ. ಬಯಸಿದ ಲಾಡ್ಜ್, ಊಟ, ಬಟ್ಟೆ, ಮಹಿಳಾ ಸದಸ್ಯರಿದ್ದರೆ ಅವರ ಪತಿಗೂ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. 
    
    ಯಾರಾದರೂ ಸಾವಿರಾರು ರೂ. ಲೆಕ್ಕದಲ್ಲಿ ಸಾಲ ಮಾಡಿದ್ದರೆ, ಅದನ್ನೂ ತೀರಿಸಬೇಕಾದ ಅನಿವಾರ್ಯತೆ ಆಕಾಂಕ್ಷಿಗಳದ್ದಾಗಿದೆ. ಪ್ರತಿದಿನ ಕನಿಷ್ಠ 10 ರಿಂದ 15 ಸಾವಿರ ರೂ. ಖರ್ಚಾಗುತ್ತಿದೆ ಎನ್ನಲಾಗಿದೆ. 
    
    ಇಷ್ಟೆಲ್ಲ ಖರ್ಚು ಮಾಡಿದರೂ ಒಮ್ಮೊಮ್ಮೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಉಲ್ಟಾ ಹೊಡೆದ ಪ್ರಸಂಗಗಳೂ ನಡೆದಿದ್ದು, ಈ ಬಾರಿ ಏನಾಗುತ್ತದೆಯೋ ಕಾದುನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts